ಜಿಲ್ಲೆ

ಕೆರೆ ಕೋಡಿಯಲ್ಲಿ ಕೊಚ್ಚಿ ಹೋದ ಮೂರು ಟನ್ ಮೀನು

reportermys

ಮಂಡ್ಯ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಭಾನುವಾರ ರಾತ್ರಿ ಸುರಿದ ಜೋರು ಮಳೆಯಿಂದಾಗಿ ಮದ್ದೂರು, ಮಳವಳ್ಳಿ ಮತ್ತು ನಾಗಮಂಗಲ ತಾಲೂಕಿನಲ್ಲಿ ಅವಾಂತರ ಸೃಷ್ಟಿಯಾಗಿದೆ.
ಮದ್ದೂರು ತಾಲೂಕು ಕಬ್ಬಾರೆ ಗ್ರಾಮದಲ್ಲಿ ಕೆರೆ ಕೋಡಿ ಬಿದ್ದು ಸುಮಾರು ಮೂರು ಟನ್‌ನಷ್ಟು ಮೀನು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಇದರಿಂದಾಗಿ ಸಾಕಾಣಿಕೆದಾರರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ನಾಗೇಶ್ ಎಂಬುವರು ಸುಮಾರು ಐದು ಟನ್‌ನಷ್ಟು ಮೀನನ್ನು ಸಾಕಾಣಿಕೆ ಮಾಡುತ್ತಿದ್ದು, ಒಂದು ವರ್ಷದಿಂದ ನೋಡಿಕೊಳ್ಳುತ್ತಿದ್ದರು. ಇದೀಗ ಬಹುತೇಕ ಕೊಚ್ಚಿಕೊಂಡು ಹೋಗಿದ್ದು, ಉಳಿದ ಮೀನುಗಳನ್ನು ರಕ್ಷಣೆಗೆ ಬಲೆ ಹಾಕಿ ಕಾಯುವಂತಾಗಿದೆ.
ಇದಲ್ಲದೆ ಕಬ್ಬಾರೆ ಗ್ರಾಮದಲ್ಲಿಯೇ 50ಕ್ಕೂ ಹೆಚ್ಚು ಎಕರೆ ಜಮೀನು ಜಲಾವೃತಗೊಂಡಿದೆ. ನೀರಿನ ರಭಸಕ್ಕೆ 10 ದಿನದ ಹಿಂದೆ ನಾಟಿ ಮಾಡಿದ್ದ ಭತ್ತದ ಪೈರು ನಾಶ ಕೊಚ್ಚಿಕೊಂಡು ಹೋಗಿವೆ. ಕೆರೆ ಕೋಡಿ ಬಿದ್ದಿರುವುದರಿಂದ ಭತ್ತ, ಕಬ್ಬಿನ ಜಮೀನಿಗೆ ನೀರು ನುಗ್ಗಿದೆ. ಇದಲ್ಲದೆ ಗ್ರಾಮದಲ್ಲಿ ತಗ್ಗಿನ ಪ್ರದೇಶದಲ್ಲಿರುವ ಮನೆಗಳಿಗೂ ನೀರು ನುಗ್ಗಿದ್ದು, ಸೋಮವಾರ ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಲಾಯಿತು.
ಇನ್ನು ಮಳವಳ್ಳಿ ಪಟ್ಟಣ, ದೊಡ್ಡೇಗೌಡನಕೊಪ್ಪಲು ಗ್ರಾಮದಲ್ಲಿ ಮನೆ ಗೋಡೆ ಕುಸಿದಿದೆ. ಅಂತೆಯೇ ನಾಗಮಂಗಲ ತಾಲೂಕಿನ ಅರಸೇಗೌಡನಕೊಪ್ಪಲು ಗ್ರಾಮದಲ್ಲಿ ದೇವೇಗೌಡ ಎಂಬುವರ ಮನೆ ಗೋಡೆ ಕುಸಿದಿದೆ.