ಮಂಡ್ಯ: ಕೆಲ ದಿನಗಳಿಂದ ಜಿಲ್ಲೆಯಲ್ಲಿ ಬಿಡುವು ನೀಡಿದ್ದ ವರುಣ ಶುಕ್ರವಾರ ತಡರಾತ್ರಿ ಅಬ್ಬರಿಸಿದ್ದಾನೆ. ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿವೆ.
ಮಂಡ್ಯ ತಾಲೂಕಿನ ಬಸರಾಳು ಹೋಬಳಿ ನಂದಿಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಕಟ್ಟಡ ಭಾರೀ ಮಳೆಯಿಂದಾಗಿ ಕುಸಿದು ಬಿದ್ದಿದೆ. ಆದ್ದರಿಂದ ಸೋಮವಾರದಿಂದ ಮಕ್ಕಳು ಕುಳಿತುಕೊಳ್ಳಲು ಸ್ಥಳವಿಲ್ಲದಂತಾಗಿದೆ. ತಾಲೂಕಿನ ಗುಡಿಗೇನಹಳ್ಳಿಯಲ್ಲಿ ಭತ್ತದ ಗದ್ದೆಗಳು ಜಲಾವೃತವಾಗಿದ್ದರೆ, ದೊಡ್ಡಗರುಡನಹಳ್ಳಿಯಲ್ಲಿ ಕೆರೆ ಕೋಡಿ ಒಡೆದು ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ಇದಲ್ಲದೆ ಗಂಟಗೌಡನಹಳ್ಳಿ, ದ್ಯಾಪಸಂದ್ರ, ಮಾಯಪ್ಪನಹಳ್ಳಿ ಗ್ರಾಮಗಳಲ್ಲಿ ಜಮೀನು ಜಲಾವೃತಗೊಂಡಿದೆ.
ಇನ್ನು ಮದ್ದೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಾರಿ ಬಿರುಗಾಳಿ ಮಳೆಗೆ ಮಾದಪುರದೊಡ್ಡಿ ಗ್ರಾಮದಲ್ಲಿ ಸಾವಿರಾರೂ ತೆಂಗಿನಕಾಯಿ ಮಳೆ ನೀರಿಯಲ್ಲಿ ಕೊಂಚಿಕೊಂಡು ಹೋಗಿ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಅಂತೆಯೇ ಮೂರು ಎಕರೆಯಲ್ಲಿ ಬೆಳೆಯಲಾಗಿದ್ದ ಬೂದಗುಂಬಳ ನೀರಿನಿಂದ ಹಾನಿಯಾಗಿದೆ. ತಿಪ್ಪೂರು ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ 2 ಮೇಕೆಗಳು ಮಳೆ ನೀರು ತುಂಬಿಕೊಂಡು ಮೃತಪಟ್ಟಿವೆ. ಶ್ರೀರಂಗಪಟ್ಟಣ ತಾಲೂಕಿನ ವಿರಿಜಾ ನಾಲೆಯನ್ನು ನೀರಾವರಿ ಇಲಾಖೆ ಅಧಿಕಾರಿಗಳು ಅಭಿವೃದ್ಧಿಪಡಿಸದ ಕಾರಣ ನಾಲೆಯಲ್ಲಿ ನೀರು ಅಗತ್ಯಕ್ಕಿಂತ ಹೆಚ್ಚು ತುಂಬಿ ಹರಿದ ಪರಿಣಾಮ ಮೇಳಾಪುರ ಗ್ರಾಮದಲ್ಲಿ ಸುಮಾರು 50 ಎಕರೆಯಷ್ಟು ಭತ್ತದ ಗದ್ದೆ ಜಲಾವೃತವಾಗಿದೆ.