ಮಂಡ್ಯ: ಕಳೆದ ಎರಡು ಮೂರು ದಿನದಿಂದ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಪರಿಣಾಮ ಅಲ್ಲಲ್ಲಿ ಅವಾಂತರ ಸೃಷ್ಟಿಸಿದೆ.
ಬೆಳಗ್ಗೆಯಿಂದ ಬಿಸಿಲಿನ ವಾತಾವರಣವಿದ್ದು, ಸಂಜೆಯಾಗುತ್ತಿದ್ದಂತೆಯೇ ಮೋಡ ಕವಿದಂತಾಗಿ ಜೋರು ಮಳೆಯಾಗುತ್ತಿದೆ. ಭಾನುವಾರ ಒಂದೇ ದಿನ ಜಿಲ್ಲೆಯಲ್ಲಿ 20.6 ಮಿ.ಮೀ ಮಳೆಯಾಗಿದೆ. ಇನ್ನು ನಗರದಲ್ಲಿ ರಾತ್ರಿಪೂರ್ತಿ ಮಳೆ ಸುರಿದ ಪರಿಣಾಮ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಗುತ್ತಿದೆ. ಅಂತೆಯೇ ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ರಸ್ತೆಯಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿದೆ.
ಇತ್ತ ಗ್ರಾಮೀಣ ಭಾಗದಲ್ಲಿ ಮಳೆಯಬ್ಬರು ಜನರು ಬೆಚ್ಚಿಬಿದ್ದಿದ್ದಾರೆ. ಜಮೀನುಗಳಲ್ಲಿ ನೀರು ನಿಂತು ಕೃಷಿ ಚಟುವಟಿಕೆ ಸ್ತಬ್ಧಗೊಂಡಿವೆ. ಪರಿಣಾಮ ಬೆಳೆಗಳು ಹಾಳಾಗುತ್ತಿದ್ದು, ರೈತರು ಇಳುವರಿ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದಾರೆ. ಬೆಳಗ್ಗೆಯಿಂದ ಬಿಡುವು ಕೊಡುವ ವರುಣ ಸಂಜೆಯಾಗುತ್ತಿದ್ದಂತೆ ರೌದ್ರವಾತಾರ ತಾಳುತ್ತಿದ್ದಾನೆ. ಬಸರಾಳು ಹೋಬಳಿಯ ಕೋಡಿಕೊಪ್ಪಲು, ಮನುಗನಹಳ್ಳಿ ಹಾರಕದದಹಳ್ಳಿ, ಮುತ್ತೇಗೆರೆ, ಹಟ್ನಾ, ಬೇವುಕಲ್ಲು, ಬಿದರಕಟ್ಟೆ, ಬಾಳೇನಹಳ್ಳಿ, ಕಂಬದಹಳ್ಳಿ, ಕಾರೇಕಟ್ಟೆ, ಮಾಚಗೌಡನಹಳ್ಳಿ ಸೇರಿದಂತೆ ವಿವಿಧೆಡೆ ಜೋರು ಮಳೆಯಾಗಿದೆ. ಇದರಿಂದಾಗಿ ತರಕಾರಿ ಬೆಳೆ ಸಂಪೂರ್ಣ ನೀರಿನಿಂದ ಕೊಚ್ಚಿ ಹೋಗಿದೆ.