ಜಿಲ್ಲೆ

ಮಳೆಗೆ ಮನೆ, ತೋಟ ಹಾನಿ

Mangaluru - Nishantha Narayana

ಪುತ್ತೂರು: ಮಳೆ ಬುಧವಾರ ಸ್ವಲ್ಪ ಕಡಿಮೆಯಿದ್ದರೂ ಅವಾಂತರಗಳು ಮಾತ್ರ ನಿಂತಿಲ್ಲ. ಪುಣಚ ಗ್ರಾಮದ ವಿವಿಧ ಕಡೆಯಲ್ಲಿ ಮನೆ, ಕೃಷಿಭೂಮಿಗೆ ಹಾನಿಯನ್ನುಂಟುಮಾಡಿದೆ.

ಪುಣಚ ಗ್ರಾಮದ ಬಾಳೆಕುಮೇರಿ ತೀರ್ಥಾನಂದ ಗೌಡ ಅವರ ಜಾಗದಲ್ಲಿ ಗುಡ್ಡಕುಸಿತವಾಗಿ ಸುಮಾರು ೫ ವರ್ಷದ ೧೦೦ಕ್ಕೂ ಅಽಕ ಫಸಲು ಬರುವ ಅಡಕೆ ಗಿಡಗಳು ನಾಶವಾಗಿವೆ. ಮನೆಯಲ್ಲಿ ನಾಲ್ಕು ಮಂದಿ ವಾಸವಾಗಿದ್ದು, ಮಂಗಳವಾರ ಮಧ್ಯಾಹ್ನ ಘಟನೆ ಸಂಭವಿಸುತ್ತಿದ್ದಂತೆ ದಿನ ಬಳಕೆಯ ಸಾಮಾಗ್ರಿ ಸಹಿತ ಎಲ್ಲವನ್ನೂ ಪಕ್ಕದ ಮನೆಗೆ ಊರಿನ ಯುವಕರು ಸ್ಥಳಾಂತರ ಮಾಡಿದ್ದಾರೆ.

ಸ್ಥಳಕ್ಕೆ ಭೇಟಿ: ಗ್ರಾಮ ಸಹಾಯಕ ರತ್ನಾಕರ, ಪಂಚಾಯಿತಿ ಅಧ್ಯಕ್ಷೆ ಬೇಬಿ, ಕಾರ್ಯದರ್ಶಿ ಪಾರ್ವತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬುಧವಾರ ಗ್ರಾಮ ಕರಣಿಕರಾದ ಕೃತಿಕಾ, ಪಂಚಾಯಿತಿ ಅಭಿವೃದ್ಧಿ ಅಽಕಾರಿ ರವಿ, ಕರ್ನಾಟಕ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಬಾಲಕೃಷ್ಣ ಪೂಜಾರಿ ಹಿತ್ತಿಲು, ಸಿರಾಜ್ ಮಣಿಲ ಮತ್ತಿತರರು ಪರಿಶೀಲನೆ ನಡೆಸಿದರು.

ಮನೆಗೆ ಹಾನಿ: ಪುಣಚ ಗ್ರಾಮದ ಬಡೆಕನಡ್ಕ ಚೋಮ ಅವರ ಮನೆ ಕುಸಿದಿದೆ. ಮನೆಯಲ್ಲಿ ವಾಸ ಮಾಡಲು ಸಾಧ್ಯವಿಲ್ಲ ಕಾರಣ ಸಂಬಂಽಕರ ಮನೆಗೆ ಸ್ಥಳಾಂತರ ಮಾಡಲಾಗಿದೆ. ಮನೆಗೆ ಸರಿಯಾದ ಸಂಪರ್ಕ ರಸ್ತೆಯೂ ಇಲ್ಲದೆ, ಸಾಮಾಗ್ರಿಗಳ ವರ್ಗಾವಣೆಗೆ ಪರದಾಡುವ ಸ್ಥಿತಿ ನಿರ್ಮಾಣವಾಯಿತು.