ವಿಜಯಪುರ ನಗರದ ವಾರ್ಡ್ ನಂ.17 ರಲ್ಲಿ ಸಾರ್ವಜನಿಕರು ನಡೆಸಿದ ಪ್ರತಿಭಟನೆಗೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸಾಥ್ ನೀಡಿದರು. ಶಿವಾನಂದ ಯಡಹಳ್ಳಿ, ರಾಕೇಶ ಇಂಗಳಗಿ, ದುರ್ಗಪ್ಪ ಬೂದಿಹಾಳ, ವಿಕ್ರಮ ವಾಘಮೋರೆ ಮತ್ತಿತರರಿದ್ದಾರೆ.  
ಜಿಲ್ಲೆ

ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ, ಗಬ್ಬೆದ್ದು ನಾರುತ್ತಿರುವ ಬಡಾವಣೆ, ಮುನೀಶ್ವರ ನಗರದಲ್ಲಿ ನರಕ ಯಾತನೆ

ವಿಜಯಪುರ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದ ವಾರ್ಡ್ ನಂ.17 ರಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮುನೀಶ್ವರ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೊಳಚೆ ನೀರು ಬಡಾವಣೆಗಳಿಗೆ ನುಗ್ಗಿ ಇಡೀ ಬಡಾವಣೆಗಳು ಗಬ್ಬೆದ್ದು ನಾರುತ್ತಿವೆ. ಮಕ್ಕಳು, ಮಹಿಳೆಯರು, ವೃದ್ಧರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ. ಇಷ್ಟಾದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಪರಿಹಾರಕ್ಕೆ ಮುಂದಾಗಿಲ್ಲವೆಂದು ಸ್ಥಳೀಯರು ಗುರುವಾರ ಬೀದಿಗಿಳಿದು ಹೋರಾಟ ನಡಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸಾರ್ವಜನಿಕರ ಸಮಸ್ಯೆ ಆಲಿಸಿದರಲ್ಲದೇ ಪರಿಹಾರಕ್ಕಾಗಿ ಸ್ಥಳೀಯರೊಂದಿಗೆ ಹೋರಾಟಕ್ಕೆ ಕೈಜೋಡಿಸಿದರು. ಮಹಾನಗರ ಪಾಲಿಕೆ ವಿರುದ್ಧ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಮೊಳಗಿಸಿದರು. ಧಿಕ್ಕಾರ ಕೂಗಿದರು. ಛೀಮಾರಿ ಹಾಕಿದರು.

ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷೃದಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಮೂಲ ಸೌಲಭ್ಯ ಒದಗಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ರಾಕೇಶ ಇಂಗಳಗಿ, ದುರ್ಗಪ್ಪ ಬೂದಿಹಾಳ, ವಿಕ್ರಮ ವಾಘಮೋರೆ, ಸೀನು ಹಿಪ್ಪರಗಿ, ಸ್ಥಳೀಯ ನಿವಾಸಿಗಳಾದ ಗಿರಿಮಲ್ಲೇಶ ಮಾಳಶೆಟ್ಟಿ, ಅನಿಲ ಮೆಂಡೆಗಾರ್, ಮೌನೇಶ ಪತ್ತಾರ, ತಾಜುದ್ದೀನ್ ಹಡಗಲಿ, ಪರಶುರಾಮ ಹಳಿಮನಿ, ಸಂತೋಷ ರಜಪೂತ, ಲಕ್ಷ್ಮಿ ಕೋಟ್ಯಾಳ, ಮಹಾದೇವಿ ಮಾಳಶೆಟ್ಟಿ, ಅಕ್ಷತಾ ಪಾಟೀಲ ಮತ್ತಿತರರಿದ್ದರು.