ಧಾರವಾಡ: ಧಾರಾಕಾರ ಮಳೆ ಸುರಿದ ಕಾರಣ ಶಾಲೆಯ ಸುತ್ತ ಭಾರಿ ಮಟ್ಟದ ನೀರಿನ ಹರಿವು ಉಂಟಾಗಿದೆ. 130 ಕ್ಕೂ ಹೆಚ್ಚು ಮಕ್ಕಳು ಮತ್ತು ಶಿಕ್ಷಕರು ಶಾಲೆಯಲ್ಲೇ ಸಿಲುಕಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ನಡೆದಿದೆ.
ಬೆಳವಟಗಿ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಸಂಜೆ ಸುಮಾರು ನಾಲ್ಕು ಗಂಟೆಯಿಂದ ಆರಂಭವಾದ ಮಳೆಗೆ ತಾಲೂಕಿನ ಅಮರಗೋಳದಲ್ಲಿ ಹಾದುಹೋಗಿರುವ ಹಳ್ಳವೊಂದು ಉಕ್ಕಿ ಹರಿದಿದೆ. ಇದರಿಂದಾಗಿ ನೀರು ಗ್ರಾಮದಲ್ಲಿನ ಪ್ರೌಢಶಾಲೆಯ ಸುತ್ತಲೂ ಆವರಿಸಿದೆ.
ಗ್ರಾಮದ ಹೊರ ಹೊಲಯದಲ್ಲಿರುವ ಶಾಲೆಯಲ್ಲಿ ಸುಮಾರು 2 ಗಂಟೆಗಳ ಕಾಲ ವಿದ್ಯಾರ್ಥಿಗಳು, ಶಿಕ್ಷಕರು ಬಂಧಿಯಾಗಿದ್ದರು. ಮಳೆ ಪ್ರಮಾಣ ತಗ್ಗಿದ ನಂತರ ಗ್ರಾಮಸ್ಥರು ಟ್ರ್ಯಾಕ್ಟರ್ ಮೂಲಕ ವಿದ್ಯಾರ್ಥಿಗಳನ್ನು ಮನೆ ತಲುಪಿಸಿದ್ದಾರೆ.