ಕವಿತಾಳ: ಕವಿತಾಳ-ಮಸ್ಕಿ ಸಂಪರ್ಕ ಕಲ್ಪಿಸುವ ಜೋಳದರಾಶಿ ಕ್ಯಾಂಪ್ ಹತ್ತಿರದ ಮುಖ್ಯರಸ್ತೆ ಮಳೆಗೆ ಹಾಳಾಗಿದ್ದು, ರಸ್ತೆಯ ತಗ್ಗು ಗುಂಡಿಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಕಳೆದ ವರ್ಷವಷ್ಟೇ ನಿರ್ಮಿಸಿದ ಮುಖ್ಯರಸ್ತೆ ಹದಗೆಟ್ಟಿದೆ. ಭತ್ತ ತುಂಬಿಕೊಂಡು ಹೋಗುವ ವಾಹನಗಳು ಕೆಲವು ಸಲ ನಿಯಂತ್ರಣ ತಪ್ಪಿದ್ದುಂಟು. ಬೈಕ್ ಸವಾರರು ಬಿದ್ದ ಉದಾಹರಣೆಗಳೂ ಇವೆ. ಕವಿತಾಳದಿಂದ ಮಸ್ಕಿಗೆ ಹೋಗುವ ರಸ್ತೆ ಕೆಲ ಕಡೆ ದುರಸ್ತಿ ಮಾಡಿದರೆ ಜೋಳದರಾಶಿ ಕ್ಯಾಂಪ್‌ನ ಹತ್ತಿರ ರಸ್ತೆ ರಿಪೇರಿ ಮಾಡದಿರುವುದರಿಂದ ಮಳೆಗಾಲದಲ್ಲಿ ಸಂಚಾರಕ್ಕೆ ಜನರು ಪರದಾಡುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಜವಾಬ್ದಾರಿವಹಿಸಿ ಮುಖ್ಯರಸ್ತೆ ದುರಸ್ತಿಗೊಳಿಸಿ ಸಮಸ್ಯೆ ನಿವಾರಿಸಬೇಕು ಎಂದು ಪ್ರಮುಖರಾದ ರಾಮಣ್ಣ ಜಂಗಮರಹಳ್ಳಿ, ಶಿವಪ್ಪ ಚಲುವಾದಿ, ಬಸವರಾಜ, ವೀರನಗೌಡ, ಶರಣಪ್ಪ ನಾಯಕ ತೋರಣದಿನ್ನಿ ಒತ್ತಾಯಿಸಿದ್ದಾರೆ.
ಹಟ್ಟಿ-ಪಾಮನಕಲ್ಲೂರು ರಸ್ತೆ ಸ್ಥಿತಿಯೂ ಅಷ್ಟೇ: ಪಾಮನಕಲ್ಲೂರಿನಿಂದ ಹಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚಾರ ನರಕಸದೃಶವಾಗಿದೆ. ಮಸ್ಕಿ ಕ್ಷೇತ್ರದ ಶಾಸಕರು ಪಾಮನಕಲ್ಲೂರಿನಿಂದ ಹಟ್ಟಿಗೆ ಹೋಗುವ ರಸ್ತೆ ದುರಸ್ತಿಗೆ ಚಾಲನೆ ನೀಡಿದ್ದರು. ಅದರೆ, ಅರ್ಧ ನಿರ್ಮಿಸಿ ಇನ್ನು ನಾಲ್ಕು ನೂರು ಮೀಟರ್ ರಸ್ತೆಯನ್ನು ಲಿಂಗಸುಗೂರು ಸರಹದ್ದು ವ್ಯಾಪ್ತಿವರೆಗೆ ಮಾಡದೆ ಹಾಗೇ ಬಿಡಲಾಗಿದೆ. ಆಟೋ ಮತ್ತು ಬೈಕ್‌ಗಳು ನಿಯಂತ್ರಣ ತಪ್ಪಿ ಬಿದ್ದ ಘಟನೆಗಳು ನಡೆದಿವೆ. ಹಟ್ಟಿಯಿಂದ ಪಾಮನಕಲ್ಲೂರಿನ 12ಕಿಮೀ ಉದ್ದದ ರಸ್ತೆಯಲ್ಲಿ ಮಸ್ಕಿ ವ್ಯಾಪ್ತಿಯ ನಾಲ್ಕು ನೂರು ಮೀಟರ್ ರಸ್ತೆ ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯ ಕೇಳಿಬಂದಿದೆ.