ಜಿಲ್ಲೆ

ಮಳೆ ಅನಾಹುತಕ್ಕೆ ಇಬ್ಬರು ಬಲಿ

ಮಂಗಳೂರು/ಗುರುಪುರ/ಹೆಬ್ರಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ನಿರೀಕ್ಷೆಯಷ್ಟು ಮಳೆಯಾಗಿಲ್ಲ, ಆದರೆ ಉಡುಪಿ ಜಿಲ್ಲೆಯಲ್ಲಿ ನಿರಂತರ ಸುರಿದಿದೆ. ಉಭಯ ಜಿಲ್ಲೆಗಳಲ್ಲಿ ಮಳೆ ಸಂಬಂಧಿ ಅನಾಹುತಗಳಿಂದಾಗಿ ಬಾಲಕ ಸಹಿತ ಇಬ್ಬರು ಮೃತಪಟ್ಟಿದ್ದಾರೆ.

ದ.ಕ. ಜಿಲ್ಲೆ ಮಂಗಳೂರು ತಾಲೂಕಿನ ಗುರುಪುರದ ಮಠದಗುಡ್ಡೆೆ ನಿವಾಸಿ ನಾರಾಯಣ ನಾಯ್ಕ (58) ಎಂಬುವರು ಮನೆಯ ಕಂಪೌಂಡ್ ಕುಸಿದು ಮೃತಪಟ್ಟಿದ್ದಾರೆ. ಶುಕ್ರವಾರ ಮಧ್ಯಾಹ್ನ 1.30ರ ವೇಳೆ ಧಾರಾಕಾರ ಮಳೆಯಾಗುತ್ತಿದ್ದಾಗ ಮನೆ ಪಕ್ಕದ ಚಿಕ್ಕ ತೋಡನ್ನು ನೀರು ಸರಿಯಾಗಿ ಹೋಗುವಂತೆ ಬಿಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಮಳೆಗೆ ತೇವಗೊಂಡಿದ್ದ ಆವರಣಗೋಡೆ ಕುಸಿದು ಅವರ ಮೇಲೆ ಬಿದ್ದಿದೆ. ತೀವ್ರ ರಕ್ತಸ್ರಾವಗೊಂಡ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆೆಗೆ ದಾಖಲಿಸಿದರೂ ಫಲಕಾರಿಯಾಗಲಿಲ್ಲ. ಖಾಸಗಿ ಬಸ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಮಠದಗುಡ್ಡೆೆಯಯಲ್ಲಿ ಹೊಸ ಮನೆ ಕಟ್ಟಿಸಿ ಇಬ್ಬರು ಮಕ್ಕಳು, ಪತ್ನಿ ‘ವಿಜೆ’ ಖ್ಯಾತಿಯ ಮಧುರಾಜ್‌ರೊಂದಿಗೆ ವಾಸವಾಗಿದ್ದರು. ಬಜ್ಪೆ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮರದ ಸಂಕದಿಂದ ಬಿದ್ದ ಬಾಲಕ

ಭಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಮನೆಯ ಎದುರಿನ ತೋಡಿಗೆ ಬಾಲಕ ಬಿದ್ದು ಸಾವಿಗೀಡಾಗಿರುವ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ. ಕುಚ್ಚೂರು ಗ್ರಾಮದ ಕಾನ್ಬೆಟ್ಟುವಿನಲ್ಲಿ ತೋಡು ದಾಟುವ ವೇಳೆ ಕಾಲು ಜಾರಿ ನೀರಿಗೆ ಬಿದ್ದ ದಯಾನಂದ್ ಭಟ್ ಎಂಬುವರ ಪುತ್ರ, ಹೆಬ್ರಿ ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿ ಶ್ರೀಶಾಂತ್ ಭಟ್(10) ಮೃತ ಬಾಲಕ. ತೋಟದಲ್ಲಿರುವ ನೀರಿನ ತೋಡಿಗೆ ಹಾಕಿರುವ ಮರದ ಸಂಕವನ್ನು ದಾಟುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾಲಕ ಬಿದ್ದಿದ್ದು, ನೀರಿನ ಸೆಳೆತಕ್ಕೆ ಸಿಕ್ಕಿ ಸಾವಿಗೀಡಾಗಿದ್ದಾನೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಮಳೆ ಚುರುಕಾಗಿದ್ದು, ನದಿ, ತೋಡುಗಳು ತುಂಬಿ ಹರಿಯುತ್ತಿವೆ. ಗಂಗೊಳ್ಳಿಯಲ್ಲಿ ತಗ್ಗು ಪ್ರದೇಶಗಳಲ್ಲಿನ ಮನೆ, ಅಂಗಡಿ ಮುಗ್ಗಟ್ಟುಗಳು ಜಲಾವೃತಗೊಂಡಿವೆ. ಮುಖ್ಯರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಉಡುಪಿ ಜಿಲ್ಲೆಯ ಕಾಪು ಮೂಡಬೆಟ್ಟು, ಕಾರ್ಕಳದ ಎಳ್ಳಾರೆಯಲ್ಲಿ ಮನೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಮೆಸ್ಕಾಂನ 8 ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದ್ದು, 12 ವಿದ್ಯುತ್ ಕಂಬಗಳು ಧರೆಗುರುಳಿವೆ.

ಇಂದು ಆರೆಂಜ್ ಅಲರ್ಟ್

ಕರಾವಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಮುನ್ನೆಚ್ಚರಿಕೆ ನೀಡಿದ್ದರೂ ದ.ಕ. ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಶನಿವಾರವೂ ಕಿತ್ತಳೆ ಅಲರ್ಟ್ ಮುಂದುವರಿಯಲಿದೆ. ಶುಕ್ರವಾರ ಬೆಳಗ್ಗಿನಿಂದ ಸಾಯಂಕಾಲದ ವರೆಗೆ ದ.ಕ. ಜಿಲ್ಲೆಯ ಪೆರ್ಮುದೆಯಲ್ಲಿ ಅತ್ಯಧಿಕ 40.5 ಮಿ.ಮೀ. ಮತ್ತು ಬಡಗ ಎಡಪದವಿನಲ್ಲಿ 37 ಮಿ.ಮೀ. ಮಳೆ ಸುರಿದಿದೆ. ಶುಕ್ರವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆ ಅವಧಿಯಲ್ಲಿ ಉಡುಪಿ 24, ಕುಂದಾಪುರ 21, ಕಾರ್ಕಳ 18, ಬೈಂದೂರು 38, ಬ್ರಹ್ಮಾವರ 16, ಕಾಪು 17, ಹೆಬ್ರಿ 28 ಮಿ.ಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ 23 ಮಿ.ಮೀ. ಸರಾಸರಿ ದಾಖಲಾಗಿದೆ.

ಮನೆಗಳಿಗೆ ಹಾನಿ

ಮಂಗಳೂರು ಬೆಂಗ್ರೆಯ ಅಳಿವೆಬಾಗಿಲಿನ ರಾಣಿ ಅಬ್ಬಕ್ಕ ಪಾರ್ಕ್ ಬಳಿಯ ಶಾರದಾ ಅಂಗಾರ ಮೆಂಡನ್ ಅವರ ಮನೆ ಮೇಲೆ ಗುರುವಾರ ರಾತ್ರಿ ತೆಂಗಿನ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ಪಡೀಲ್ ಪಂಪ್ ಹೌಸ್ ಬಳಿ ಗಾಳಿಗೆ ಮರವೊಂದು ಬಿದ್ದಿದೆ. ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಕಮಲ, ಪಂಜಿಕಲ್ಲು ಗ್ರಾಮದ ಭೋಜ ಪೂಜಾರಿ ಅವರ ಮನೆಗೆ ಹಾನಿಯಾಗಿದೆ. ಕಾರಿಂಜ ಕ್ರಾಸ್‌ನಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಧರೆಗುರುಳಿದೆ. ಪುತ್ತೂರಿನ ಕಾವು ಕೃಷಿಪತ್ತಿನ ಸಹಕಾರಿ ಸಂಘದ ಈಶ್ವರಮಂಗಲದಲ್ಲಿರುವ ಶಾಖಾ ಕಟ್ಟಡದ ಹೆಂಚು, ಸಿಮೆಂಟ್ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಮಳೆ ನೀರು ಕಟ್ಟಡದ ಒಳಭಾಗಕ್ಕೆ ಬಿದ್ದು ನೀರು ತುಂಬಿಕೊಂಡು ಕಟ್ಟಡದೊಳಗೆ ದಾಸ್ತಾನಿರಿಸಿದ್ದ ಅಕ್ಕಿ ಮೂಟೆಗಳಿಗೆ ಹಾನಿಯಾಗಿದೆ.

ಗಂಗೊಳ್ಳಿಯಲ್ಲಿ ಕಡಲ್ಕೊರೆತ

ಗಂಗೊಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರಂಭಗೊಂಡಿದ್ದ ಕಡಲ ಆರ್ಭಟ ಮುಂದುವರಿದಿದ್ದು, ಕಡಲ ತೀರ ಬಹುತೇಕ ಸಮುದ್ರ ಪಾಲಾಗಿದೆ. ಗಂಗೊಳ್ಳಿಯ ಬಂದರು ಬೇಲಿಕೇರಿ, ಮಲ್ಯರಬೆಟ್ಟು, ಖಾರ್ವಿಕೇರಿ, ಲೈಟ್‌ಹೌಸ್ ಭಾಗಗಳಲ್ಲಿ ಭಾರಿ ಪ್ರಮಾಣದ ಅಲೆಗಳು ತೀರ ಪ್ರದೇಶಕ್ಕೆ ಅಪ್ಪಳಿಸುತ್ತಿದೆ.

.