ಮೈಸೂರು: ರಾಜ್ಯದಲ್ಲಿ ಸಂಭವಿಸಿದ ಮಳೆ ಹಾನಿಗೆ ಸಂಬಂಧಿಸಿದಂತೆ ಈಗಾಗಲೇ ವರದಿ ಪಡೆಯಲಾಗಿದ್ದು, ಎರಡು ಮೂರು ದಿನಗಳಲ್ಲಿ ಅನುದಾನ ಬಿಡುಗಡೆಗೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮನೆಹಾನಿಗೆ ಸಂಬಂಧಿಸಿದಂತೆ ಈಗಾಗಲೇ ಮೊದಲ ಕಂತಿನ ಬಿಡುಗಡೆ ಮಾಡಲಾಗಿದೆ. ರಸ್ತೆ ಮತ್ತು ಸೇತುವೆ ಹಾನಿಗೆ ಸಂಬಂಧಿಸಿದಂತೆ ವರದಿ ತರಿಸಿಕೊಂಡು 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಪೈಕಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಗೆ 300 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 200 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಬೆಳೆ ನಾಶಕ್ಕೆ ಸಂಬಂಧಿಸಿದಂತೆ ಜಂಟಿ ಸರ್ವೇ ಆಗಬೇಕಾಗಿದೆ. ಕಳೆದ ಬಾರಿ 14.50 ಲಕ್ಷ ರೈತರಿಗೆ ಒಂದೂವರೆ ತಿಂಗಳಲ್ಲೇ ಪರಿಹಾರ ನೀಡಲಾಯಿತು. ಅದೇ ರೀತಿ ಈ ಬಾರಿಯೂ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಒಮಿಕ್ರಾನ್ ರೂಪಾಂತರಿ ತಳಿ ವಿಚಾರದ ಕುರಿತು ತಜ್ಞರು ಪರೀಕ್ಷೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಇದರ ಬಗ್ಗೆ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ರಾಜ್ಯ ಮತ್ತು ಕೇಂದ್ರದ ತಜ್ಞರು ಒಮಿಕ್ರಾನ್ ರೂಪಾಂತರಿ ತಳಿ ಬಗ್ಗೆ ವರದಿ ನೀಡುತ್ತಾರೆ. ಅದರ ಬಗ್ಗೆ ನಿರಂತರ ಪರೀಕ್ಷೆಗಳು ನಡೆಯುತ್ತಿದೆ. ತಜ್ಞರು ನೀಡುವ ವರದಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಸದ್ಯಕ್ಕೆ ಯಾರು ಅದರ ಬಗ್ಗೆ ಆತಂಕ ಪಡುವುದು ಬೇಡ ಎಂದರು.
ಹರ್ ಘರ್ ತಿರಂಗ ಅಭಿಯಾನವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಬಾವುಟದ ಬಗ್ಗೆ ಕೀಳರಿಮೆಯಿಂದ ಮಾತನಾಡಬಾ ರದು. ಬಾವುಟ ದೇಶವನ್ನ ಒಗ್ಗುಡಿಸುವ ಸಂಕೇತ. ಅದರ ಬಗ್ಗೆ ಯಾರು ಸಹ ಹಗರುವಾಗಿ ಮಾತನಾಡಬಾರದು. ಬಾವುಟ ಹಿಡಿದ ದೇಶಪ್ರೇಮಿಗಳನ್ನು ಯಾರು ಟೀಕೆ ಮಾಡಬಾರದು. ಈ ವಿಚಾರದಲ್ಲಿ ಕಾಂಗ್ರೆಸ್ ಟೀಕೆಗಳಿಗೆ ಜನರು ಕಿವಿಕೊಡುವುದಿಲ್ಲ ಎಂದು ಹೇಳಿದರು.