ಜಿಲ್ಲೆ

ಮಳೆಗಾಲದಲ್ಲಿ ಜೀವಹಾನಿಯಾದರೆ ಕಠಿಣ ಕ್ರಮ: ಸಚಿವ ಲಾಡ್

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಇತ್ತೀಚೆಗೆ ಸುರಿದ ಮಳೆಯ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬ ಒಳಚರಂಡಿಗೆ ಬಿದ್ದು ಮೃತಪಟ್ಟಿರುವುದು ಅಕ್ಷಮ್ಯ. ಇನ್ನು ಮುಂದೆ ಜೀವಹಾನಿಗಳಾದರೆ ಸಂಬ0ಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಳೆಯಿಂದಾದ ಹಾನಿ, ಪರಿಹಾರ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮಳೆಗಾಲ ಮುಗಿಯುವವರೆಗೆ ಎಲ್ಲ ಇಲಾಖೆಗಳ ಅಧಿಕಾರಿ- ಸಿಬ್ಬಂದಿ ಕೇಂದ್ರಸ್ಥಾನ ಬಿಟ್ಟು ತೆರಳುವಂತಿಲ್ಲ. ಮಳೆಗಾಲದಲ್ಲಿ ಸಾರ್ವಜನಿಕ ಸಮಸ್ಯೆಗಳ ಮಾಹಿತಿ ಬಂದ ತಕ್ಷಣ ಸ್ಪಂದಿಸಿ ಪರಿಹರಿಸಲು ಕ್ರಮ ಕೈಗೊಳ್ಳಬೇಕು. `ಸ್ಮಾರ್ಟ್ ಸಿಟಿ' ಹುಬ್ಬಳ್ಳಿಯಲ್ಲಿ ಒಳಚರಂಡಿಯಲ್ಲಿ ಮುಳುಗಿ ವ್ಯಕ್ತಿ ಮೃತಪಟ್ಟಿರುವುದು ನಾಚಿಕೆಗೇಡಿತನದ ಸಂಗತಿ ಎಂದರು.

ಮಹಾನಗರ ಪಾಲಿಕೆಯಿಂದ ನಾಲಾ, ದೊಡ್ಡ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಪಾಲಿಕೆಯಲ್ಲಿ 2 ಸಾವಿರ ಅಽಕಾರಿ- ಸಿಬ್ಬಂದಿ ಇದ್ದು, ಪ್ರತಿಯೊಬ್ಬರಿಗೂ 5 ಮೀ. ರಸ್ತೆಯ ಸ್ವಚ್ಛತೆಗೆ ಉಸ್ತುವಾರಿ ವಹಿಸಿ ಮಾದರಿಯಾಗಬೇಕು ಎಂದು ಆಯುಕ್ತ ಡಾ. ರುದ್ರೇಶ ಘಾಳಿ ಅವರಿಗೆ ಸೂಚಿಸಿದರು. ಆಯುಕ್ತರೂ ಕ್ಷೇತ್ರ ಭೇಟಿ ಮಾಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಮಳೆಯಿಂದ ಸಂಚಾರ ಸ್ಥಗಿತಗೊಂಡಿರುವ ರಸ್ತೆಗಳ ದುರಸ್ತಿಗೆ ಲೋಕೋಪಯೋಗಿ, ಪಿಆರ್‌ಇಡಿ ಇಲಾಖೆಗಳ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು ಎಂದರು.

ವಿದ್ಯುತ್‌ಗೆ ಸಂಬ0ಧಿಸಿ ದೂರುಗಳಿಗೆ ಹೆಸ್ಕಾಂ ಸಿಬ್ಬಂದಿ ತಕ್ಷಣ ಸ್ಪಂದಿಸಬೇಕು. ವಿದ್ಯುತ್ ಪ್ರವಹಿಸಿ ಜೀವ- ಜಾನುವಾರು ಹಾನಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಿಆರ್‌ಇಡಿ ಅಧಿಕಾರಿ ವಿರುದ್ಧ ಗರಂ:

ಪ0ಚಾಯತ್ ರಾಜ್ ಇಲಾಖೆ ಅಧಿನದ ರಸ್ತೆಗಳು ಹಾಳಾಗಿ ಬಸ್ ಸಂಚಾರ ಬಂದ್ ಆಗಿದ್ದು ನಿಮಗೆ ಮಾಹಿತಿ ಇದೆಯಾ? ಎಂದು ಸಚಿವ ಲಾಡ್ ಅಧಿಕಾರಿ ಬಿ.ಎಸ್. ಸೊಪ್ಪಿಮಠ ಅವರ ವಿರುದ್ಧ ಹರಿಹಾಯ್ದರು. ರಸ್ತೆಗಳು ಹಾಳಾದ ಸ್ಥಳಗಳಿಗೆ ಭೇಟಿ ನೀಡಿದ್ದೀರಾ? ರಸ್ತೆ ಪಕ್ಕದ ಮುಳ್ಳು- ಕಸ ಕತ್ತರಿಸಿಲ್ಲ. ಇನ್ನು ಮುಂದೆ ಸ್ಥಳಕ್ಕೆ ಹೋಗುತ್ತೇನೆ ಎನ್ನುವ ನೀವು ಭಜನೆಗೆ ಹೋಗುತ್ತೀರಾ? ಹಾನಿಯಾದ ರಸ್ತೆಗಳ ಬಗ್ಗೆ ಬರೆದುಕೊಂಡು ಓದುವ ಬದಲು ಸ್ಥಳ ಭೇಟಿ ಮಾಡಿರುವ ಫೋಟೊ ಇವೆಯಾ? ಎಂದು ಗರಂ ಆದರು.

ಮಕ್ಕಳಿಗೆ ತೊಂದರೆಯಾದರೆ ಅಧಿಕಾರಿ ಹೊಣೆ

ಅಂಗನವಾಡಿ, ಶಾಲೆಗಳ ಕೊಠಡಿಗಳು ಸೋರುತ್ತಿದ್ದರೆ ಅಲ್ಲಿ ಮಕ್ಕಳನ್ನು ಕೂಡಿಸುವಂತಿಲ್ಲ. ನಿರ್ಲಕ್ಷ÷್ಯ ವಹಿಸಿ ಅನಾಹುತಗಳಾದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಕ್ಷಣ ಇಲಾಖೆ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವ ಲಾಡ್ ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಪಂ. ಸಿಇಒ ಭುವನೇಶ ಪಾಟೀಲ, ಡಿಸಿಪಿ ಮಹಾನಿಂಗ ನಂದಗಾ0ವಿ, ಎಸ್‌ಪಿ ಡಾ. ಗೋಪಾಲ ಬ್ಯಾಕೋಡ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಹಾಗೂ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳಿದ್ದರು.