ನಾಪೋಕ್ಲು:ಹೋಬಳಿ ವ್ಯಾಪ್ತಿಯಲ್ಲಿ ಮಳೆಯು ಬಿರುಸುಗೊಂಡಿದ್ದು ಅಲ್ಲಲ್ಲಿ ಹಾನಿ ಸಂಭವಿಸಿದೆ.
ಸಮೀಪದ ಮರಂದೋಡ ಗ್ರಾಮದ ಮಾಚಯ್ಯ ಎಂಬುವರ ವಾಸದ ಮನೆಯ ಮೇಲೆ ಮರ ಬಿದ್ದ ಪರಿಣಾಮ ಶೀಟುಗಳು ಹಾನಿಯಾಗಿವೆ.
ಸ್ಥಳಕ್ಕೆ ರವಿಕುಮಾರ್ ಗ್ರಾಮ ಲೆಕ್ಕಿಗ ಜನಾದರ್ನ್ ಭೇಟಿ ನೀಡಿ ಪರಿಶೀಲಿಸಿದರು. ಕೂರುಳಿ-ಎಮ್ಮೆಮಾಡು ರಸ್ತೆಯಲ್ಲಿ ಮಳೆನೀರು, ಕೆಸರು ತುಂಬಿಕೊಂಡು ಸಂಚಾರ ದುಸ್ತರವಾಗಿದೆ. ಕಡಂಗ- ಪಾರಾಣೆ ಸಂಪರ್ಕ ರಸ್ತೆಯ ಎಡಪಾಲ ಎಂಬಲ್ಲಿ ರಸ್ತೆಗೆ ಮರ ಬಿದ್ದು ಕೆಲವು ಸಮಯ ಸಂಪರ್ಕ ಸ್ಥಗಿತಗೊಂಡಿತ್ತು. ಬಳಿಕ ಗ್ರಾಮಸ್ಥರೇ ಮರವನ್ನು ತೆರವುಗೊಳಿಸಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಳೆಯಿಂದಾಗಿ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಕೆಲವು ಗದ್ದೆ, ತೋಟಗಳಿಗೆ ನೀರು ನುಗ್ಗಿದೆ. ರಸ್ತೆಗಳು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ.