ಜಿಲ್ಲೆ

ಉಪ್ಪಿನಂಗಡಿಯಲ್ಲಿ ಜನಜೀವನ ಅಸ್ತವ್ಯಸ್ತ

ಸೌಮ್ಯ ಆರ್

ಉಪ್ಪಿನಂಗಡಿ: ಶುಕ್ರವಾರ ಸುರಿದ ಭಾರಿ ಮಳೆಗೆ ಉಪ್ಪಿನಂಗಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡ್ಡ ಕುಸಿತ ಉಂಟಾಗಿ ಭಾರಿ ಹಾನಿಯಾಗಿದೆ.

ಉಪ್ಪಿನಂಗಡಿಯಲ್ಲಿ ಶುಕ್ರವಾರ 223.4 ಮಿ.ಮೀ. ಮಳೆ ದಾಖಲಾಗಿದೆ. ಅಬ್ಬರಿಸಿ ಸುರಿದ ಮಳೆಗೆ ಅಲ್ಲಲ್ಲಿ ಧರೆ, ಆವರಣ ಗೋಡೆಗಳ ಕುಸಿತ, ಮನೆಗೆ ಹಾನಿ, ರಸ್ತೆ ಸಂಚಾರಕ್ಕೆ ತಡೆ ಮೊದಲಾದ ಘಟನೆಗಳು ನಡೆದಿವೆ.

34 ನೆಕ್ಕಿಲಾಡಿ- ಬೊಳುವಾರು ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಧರೆ ಕುಸಿತಕ್ಕೊಳಗಾಗಿದ್ದು, ಕೆಲವು ಕಡೆ ಮರಗಳು, ಮಣ್ಣು ರಸ್ತೆಗೆ ಬಿದ್ದಿವೆ. ಕೆಲವು ವಿದ್ಯುತ್ ಕಂಬಗಳೂ ಧರೆಗುರುಳಿವೆ. 34 ನೆಕ್ಕಿಲಾಡಿ ಗ್ರಾಮದ ಕಜೆಯ ಮುಹಮ್ಮದ್ ಎಂಬುವರ ಮನೆ ಬಳಿಯ ಧರೆ ಕುಸಿದಿದ್ದು, ಅಂಗಳ ತುಂಬೆಲ್ಲಾ ಮಣ್ಣಿನ ರಾಶಿ ಬಿದ್ದಿದೆ. ಶಿವಾನಂದ ಎಂಬುವರ ಮನೆ ಬಳಿಯ ಧರೆಯು ತಡೆಗೋಡೆ ಸಹಿತ ಕುಸಿದು ಬಿದ್ದಿದ್ದು, ಧರೆ ಮೇಲಿರುವ ಇವರ ಮನೆ ಅಪಾಯದ ಸ್ಥಿತಿಯಲ್ಲಿದೆ. ಧರೆ ಜರಿದು ಹಮೀದ್ ಅವರ ಮನೆಗೆ ಹೋಗುವ ದಾರಿ ಬಂದ್ ಆಗಿದೆ.

ಹನೀಫ್ ಅವರ ಮನೆಗೆ ಮರ ಬಿದ್ದಿದ್ದು, ಮನೆಯ ಅಡುಗೆ ಕೋಣೆಗೆ ಹಾನಿಯಾಗಿದೆ. ಅಬ್ದುರ‌್ರಹ್ಮಾನ್ ಯುನಿಕ್ ಅವರ ಫರ್ನಿಚರ್ ಅಂಗಡಿಗೆ ನೀರು ನುಗ್ಗಿದ್ದು, ಪೀಠೋಪಕರಣಗಳಿಗೆ ಹಾನಿಯಾಗಿವೆ. ನಿತೇಶ್ ಗಾಣಿಗ ಅವರ ಮನೆಗೆ ಹಾನಿ, ಶಬೀರ್ ನೆಕ್ಕಿಲಾಡಿಯವರ ಮನೆಯ ಹಿಂದಿನ ಧರೆ ಕುಸಿತವಾಗಿದೆ. ಧರೆ ಕುಸಿದು ನೆಕ್ಕಿಲಾಡಿಯ ಮುಹಮ್ಮದ್ ಪಿ.ಪಿ. ಅವರ ಮನೆ ಅಪಾಯದ ಸ್ಥಿತಿಯಲ್ಲಿದೆ. ಆನೆಮಜಲು, ಆದರ್ಶನಗರ, ಶಾಂತಿನಗರ, ಸುಭಾಶ್ ನಗರದಲ್ಲಿ ಹಲವು ಮನೆಗಳಿಗೆ ಹಾನಿ ಸೇರಿದಂತೆ ಗ್ರಾಮದ ಹಲವು ಕಡೆಗಳಲ್ಲಿ ಧರೆ ಕುಸಿದು ತೀವ್ರ ಹಾನಿಯಾಗಿದೆ.

ಸೇತುವೆ ಮೇಲೆ ಉಕ್ಕಿದ ಹೊಳೆ

ಪಂಚೇರು ಹಾಗೂ ನಾಲಾಯದ ಗುಂಡಿ ಎಂಬಲ್ಲಿ ಸಣ್ಣ ಹೊಳೆಗಿರುವ ಕಿಂಡಿ ಅಣೆಕಟ್ಟಿನಲ್ಲಿ ಮರ ಸೇರಿದಂತೆ ಕಸ ಕಡ್ಡಿಗಳು ಬಂದು ತುಂಬಿಕೊಂಡಿದ್ದು, ಇದರಿಂದ ನೀರಿನ ಸರಾಗ ಹರಿವಿಗೆ ತಡೆಯುಂಟಾಗಿ ರಸ್ತೆ, ಸೇತುವೆ ಮೇಲೆಲ್ಲಾ ಹೊಳೆ ಉಕ್ಕಿ ಹರಿದಿದೆ. ಪೆರಿಯಡ್ಕದ ನೆಕ್ಕರೆ ಎಂಬಲ್ಲಿ ರಸ್ತೆಗೆ ಮರಗಳೊಂದಿಗೆ ಧರೆ ಕುಸಿದು ಬಿದ್ದಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನೆಡ್ಚಿಲ್ ರಸ್ತೆಯ ಮೇಲೆ ಧರೆ ಕುಸಿದು ಬಿದ್ದಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಹರಿನಗರದಲ್ಲಿ ಕಿಶೋರ್ ಅವರ ಧರೆ ಜರಿದು ಉಷಾಚಂದ್ರ ಮುಳಿಯ ಅವರ ಮನೆಯೊಳಗೆ ಮಣ್ಣು ಹಾಗೂ ನೀರು ನುಗ್ಗಿದೆ. ಉಷಾಚಂದ್ರ ಅವರ ಆವರಣಗೋಡೆ ಕುಸಿದು ಬಿದ್ದು ಮೀನಾಕ್ಷಿ ಅವರ ಮನೆಗೆ ಹಾನಿಯಾಗಿದೆ. ಹರಿನಗರದಲ್ಲಿ ಇತರ ಕಡೆಗಳಲ್ಲಿಯೂ ಧರೆ ಕುಸಿದಿದೆ.

ಧರೆಗುರುಳಿದ ಮರಗಳು

ನಂದಿನಿನಗರ ಭಜನಾ ಮಂದಿರದ ಬಳಿಯೂ ಧರೆ ಕುಸಿದಿದೆ. ನೀರಕಟ್ಟೆ ಎಂಬಲ್ಲಿ ಕಿಶೋರ್ ಅವರ ಮನೆಗೆ ಗುಡ್ಡ ಜರಿದು ಹಾನಿಯುಂಟಾಗಿದೆ. ಪೆರಿಯಡ್ಕ ಎಂಬಲ್ಲಿ ಗುಡ್ಡ ಜರಿದು ತೋಡಿಗೆ ಬಿದ್ದ ಪರಿಣಾಮ ತೋಡಿನ ಅಸ್ತಿತ್ವವೇ ಮರೆಯಾಗಿ ನೀರೆಲ್ಲಾ ಪ್ರಸನ್ನ ಅವರ ತೋಟದಲ್ಲಿ ಹರಿಯುವಂತಾಗಿದೆ. ಕೂಟೇಲು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯ ಗುಡ್ಡ ಕುಸಿದಿದ್ದು, ವಿದ್ಯುತ್ ಕಂಬ ಹಾಗೂ ಮರಗಳು ಧರೆಗುರುಳಿವೆ. ಶ್ರೀಕ್ಷೇತ್ರ ಧರ್ಮಸ್ಥಳದ ಬೊಳ್ಳಾವಿನಲ್ಲಿರುವ ಜಾಗದಲ್ಲಿದ್ದ ಆವರಣಗೋಡೆ ಕುಸಿದು, ಕೊಪ್ಪಳದ ನೈಕುಳಿ ಎಂಬಲ್ಲಿ ರಮೇಶ್ ಅವರ ಮನೆಗೆ ಹಾನಿಯಾಗಿದೆ. ಇಳಂತಿಲ ಗ್ರಾಮದ ಕಾಯರ್ಪಾಡಿಯಲ್ಲಿ ರಸ್ತೆ ಮೇಲೆ ಮರ ಬಿದ್ದು ಸಂಚಾರಕ್ಕೆ ತೊಡಕಾಗಿತ್ತು. ಇಳಂತಿಲದ ಹಾರಕರೆ ಮಾಡ ಎಂಬಲ್ಲಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿರುವುದರಿಂದ ಸಂಚಾರ ತಡೆ ಹಿಡಿಯಲ್ಪಟ್ಟಿತ್ತು.