ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಜಡಿಮಳೆ ಸುರಿಯುತ್ತಿದ್ದು, ಭಾನುವಾರ ದಿಡುಪೆ ಭಾಗದಲ್ಲಿ ಬೆಳಗ್ಗಿನಿಂದಲೇ ಭಾರಿ ಮಳೆಯಾಗಿದ್ದು ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ಚಾರ್ಮಾಡಿ ಭಾಗದ ಮಳೆಯಿಂದ ಮೃತ್ಯುಂಜಯ ನದಿ ಹರಿವು ಹೆಚ್ಚಿದ್ದರೆ, ಫಲ್ಗುಣಿ, ಕಪಿಲಾ, ಸೋಮಾವತಿ ನದಿಗಳ ನೀರಿನ ಹರಿವಿನ ಪ್ರಮಾಣ ಅಧಿಕವಾಗಿದೆ.
ಕುವೆಟ್ಟು ಗ್ರಾಮದ ಬದ್ಯಾರು ಎಂಬಲ್ಲಿ ಮೊಹಮ್ಮದ್ ಆಲಿಯವರ ಮನೆಯ ಮೇಲೆ ಮರ ಬಿದ್ದಿದ್ದು ಭಾಗಶಃ ಹಾನಿ ಉಂಟಾಗಿದೆ. ಬಂದಾರು ಗ್ರಾಮದ ಪರಪ್ಪಾದೆ ಎಂಬಲ್ಲಿ ತನಿಯಪ್ಪ ಗೌಡ ಎಂಬುವರ ಮನೆಯ ಶೌಚಗೃಹದ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.
ನಿಡ್ಲೆ ಗ್ರಾಮದ ದಾಯಿಲಾಟ ನೀಲಯ್ಯ ಗೌಡ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ನಾವೂರು ಗ್ರಾಮದ ದೇವಸ್ಥಾನದ ಬಳಿ ದರೆ ಕುಸಿದು ವಿದ್ಯುತ್ ಕಂಬ ಹಾಗೂ ಪಂಪ್‌ಶೆಡ್ಡಿಗೆ ಹಾನಿ ಉಂಟಾಗಿದೆ. ಕೊಯ್ಯೂರು ಗ್ರಾಮದ ಪುರ್ಯಾಳ ಎಂಬಲ್ಲಿ ಭಾಸ್ಕರ ಎಂಬುವರ ಮನೆ ಗೋಡೆ ಕುಸಿದು ಬಿದ್ದಿದ್ದು ಮನೆ ಮಂದಿಯನ್ನು ಪಕ್ಕದ ಮನೆಗೆ ಸ್ಥಳಾಂತರಿಸಲಾಗಿದೆ.
ಕಡಿರುದ್ಯಾವರ ಗ್ರಾಮದ ರಾಮಂದೊಟ್ಟು ಎಂಬಲ್ಲಿ ಚಂದ್ರಯ್ಯ ಗೌಡರ ದನದ ಕೊಟ್ಟಿಗೆ ಮೇಲೆ ಮರ ಬಿದ್ದು ನಷ್ಟ ಉಂಟಾಗಿದೆ. ಪಟ್ರಮೆ ಗ್ರಾಮದ ಹೊಳೆಬದಿ ಎಂಬಲ್ಲಿ ಹಾಗೂ ಬೆಳಾಲು ಗ್ರಾಮದ ಪಲ್ಲಿತಡ್ಕದಲ್ಲಿ ರಸ್ತೆಗೆ ಮರ ಉರುಳಿ ಬಿದ್ದು ಸಂಚಾರ ವ್ಯವಸ್ಥೆ ಉಂಟಾಯಿತು.