ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆ ತೀವ್ರತೆ ಕಡಿಮೆಯಾಗಿದೆ. ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ಉತ್ತಮ ಮಳೆಯಾಗಿದ್ದು, ನಂತರ ಬಿಟ್ಟುಬಿಟ್ಟು ಸಾಧಾರಣ ಸುರಿದಿದೆ.
ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ನದಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸಮುದ್ರ ಸೇರುತ್ತಿದ್ದು, ಸಮುದ್ರ ಪ್ರಕ್ಷುಬ್ಧವಾಗಿದೆ. ಬೃಹತ್ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿವೆ. ನಾಡದೋಣಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಭಾನುವಾರ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಮುಂದುವರಿದಿದೆ.
ಶನಿವಾರ ಬೆಳಗ್ಗೆ 8ಕ್ಕೆ ಅಂತ್ಯಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಬೆಳ್ತಂಗಡಿ 66.54, ಕಡಬ 38.4, ಉಪ್ಪಿನಂಗಡಿ 72, ಪಣಂಬೂರು 56.6, ಮಂಗಳೂರು 64.2, ಪುತ್ತೂರು 44.4 ಮಿ.ಮೀ. ಮಳೆಯಾಗಿದೆ. ಸುಳ್ಯದ ಮರ್ಕಂಜದಲ್ಲಿ ಅತ್ಯಧಿಕ 124.50 ಮಿ.ಮೀ.ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ 90 ಮಿ.ಮೀ. ಸರಾಸರಿ ಮಳೆಯಾಗಿದೆ.
ಪಡುಬಿದ್ರಿ ಕಡಲ್ಕೊರೆತ ತೀವ್ರ
ಪಡುಬಿದ್ರಿ: ಪಡುಬಿದ್ರಿ ಬೀಚ್ ಬಳಿ ಶನಿವಾರ ಕಡಲ್ಕೊರೆತ ತೀವ್ರವಾಗಿದ್ದು, ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ ತಡೆಗೋಡೆಯ ಪೈಕಿ 50 ಮೀ.ನಷ್ಟು ಸಮುದ್ರಪಾಲಾಗಿದೆ. ಇಂಟರ್‌ಲಾಕ್ ಹಾಸಿದ್ದ ಅಂಗಣಕ್ಕೂ ಹಾನಿಯಾಗಿದೆ. 15 ತೆಂಗಿನ ಮರಗಳು ಅಪಾಯದ ಅಂಚಿನಲ್ಲಿವೆ.
ದೊಂಬೆ ಅಶ್ವಿಮಹಾರಾಜ ಗುಡಿ ಸಮುದ್ರಪಾಲು
ಬೈಂದೂರು: ಪಡುವರಿ ಗ್ರಾಮದ ದೊಂಬೆ ಸಮುದ್ರ ದಂಡೆಯಲ್ಲಿರುವ ಅಶ್ವಿಮಹಾರಾಜ ಗುಡಿ ಸಮುದ್ರಪಾಲಾಗಿದೆ. ಊರಿನಲ್ಲಿ ದನ ಕರುಗಳು ಕಾಯಿಲೆಗೆ ತುತ್ತಾದಾಗ, ಮನೆಗಳಿಗೆ ಹಾನಿಯಾದಾಗ ಅಥವಾ ಸ್ಥಳೀಯವಾಗಿ ಯಾವುದಾದರೂ ಸಮಸ್ಯೆ ಉಂಟಾದಾಗ ದೇವರಿಗೆ ಹರಕೆ ಸಲ್ಲಿಸುತ್ತಿದ್ದರು. 2 ಲಕ್ಷ ರೂ. ವೆಚ್ಚದಲ್ಲಿ ಗುಡಿ ನಿರ್ಮಿಸಲಾಗಿತ್ತು. ಇದು ಅತ್ಯಂತ ಹಳೆಯ, ಕಾರ್ಣಿಕ ಸ್ಥಳವಾಗಿದೆ.