ಜಿಲ್ಲೆ

ರಾಜಧಾನಿಯಲ್ಲಿ ಭಾನುವಾರವೂ ಧಾರಾಕಾರ ಮಳೆ: ಉಕ್ಕಿಹರಿದ ಮ್ಯಾನ್‌ಹೋಲ್

ಬೆಂಗಳೂರು: ರಾಜಧಾನಿಯ ಹಲವೆಡೆ ಭಾನುವಾರವೂ ವರುಣಾರ್ಭಟಕ್ಕೆ ಜನಜೀವನ ತುಸು ಅಸ್ತವ್ಯಸ್ತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು, ವಂದೇ ಭಾರತ್ ರೈಲು, ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಹಾಗೂ 3ನೇ ಹಂತದ ಕಿತ್ತಳೆ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಧ್ಯಾಹ್ನ 2.30ಕ್ಕೆ ಶುರುವಾದ ಮಳೆ ಒಂದೂವರೆ ಗಂಟೆ, ಹಲವು ಬಡಾವಣೆಗಳಲ್ಲಿ ಧಾರಾಕಾರವಾಗಿ ಸುರಿದಿತ್ತು. ಪರಿಣಾಮ ವಾರಾಂತ್ಯ ಸಂಭ್ರಮಕ್ಕೂ ಅಡ್ಡಿಯಾಗಿತ್ತು. ಗ್ರಾಹಕರ ಸಂಖ್ಯೆ ಕುಸಿತದಿಂದ ಸರಿಯಾಗಿ ವ್ಯಾಪಾರ ಇಲ್ಲದೆ ಬೀದಿಬದಿ ವ್ಯಾಪಾರಿಗಳು ನಷ್ಟ ಅನುಭವಿಸಿದ್ದರು.

ವಿಲ್ಸನ್‌ಗಾರ್ಡನ್ ಬಿಟಿಎಸ್ ರಸ್ತೆಯಲ್ಲಿ ಮ್ಯಾನ್‌ಹೋಲ್ ಉಕ್ಕಿ ಹರಿದ ಪರಿಣಾಮ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿತ್ತು. ಇದರಿಂದ ಸವಾರರು ಪರದಾಡಿದರು. ನಗರದ ಇತರೆ ಕಡೆಗಳಲ್ಲೂ ಮ್ಯಾನ್‌ಹೋಲ್ ದುರಸ್ತಿ ಮಾಡದ ಕಾರಣ ಕೊಳಚೆ ನೀರು ರಸ್ತೆಮೇಲೆ ಹರಿಯುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು. ರಾಜಕಾಲವೆಗಳಲ್ಲಿ ನೀರಿನ ಮಟ್ಟ ಹೆಚ್ಚಿದ ಕಾರಣ ರಭಸವಾಗಿ ಹರಿಯುತ್ತಿತ್ತು. ವಸಂತನಗರ, ಪುಟ್ಟೇನಹಳ್ಳಿ ಅಂಡರ್‌ಪಾಸ್, ಸಿಲ್ಕ್ ಬೋರ್ಡ್, ಶಿವಾನಂದ ಸರ್ಕಲ್, ಓಕಳಿಪುರಂ ಜಂಕ್ಷನ್ ಸೇರಿ ನಗರದ ಇತರೆ ಜಂಕ್ಷನ್‌ಗಳಲ್ಲಿ ಮಳೆ ನೀರು ನಿಂತಿತ್ತು. ನೀರಿನಲ್ಲಿಯೇ ವಾಹನ ಚಲಾಯಿಸಲು ಸವಾರರು ಪರದಾಡಿದರು. ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿತ್ತು.

ಕೃಷ್ಣರಾಜೇಂದ್ರ ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ, ಕೆಂಗೇರಿ, ಬಸವನಗುಡಿ, ಆರ್.ಟಿ.ನಗರ, ಬಿಟಿಎಂ ಲೇಔಟ್, ಕೆ.ಆರ್. ಪುರ, ಸಹಕಾರನಗರ, ಜಯನಗರ, ಜೆ.ಪಿ.ನಗರ, ಹನುಮಂತನಗರ, ಮಲ್ಲೇಶ್ವರ, ಯಶವಂತಪುರ,ಶಿವಾಜಿನಗರ, ವಿಜಯನಗರದಲ್ಲಿ ಮಳೆಯಾಗಿತ್ತು.

ಎಲ್ಲೆಲ್ಲಿ ಎಷ್ಟು ಮಳೆ?

ವಿ.ನಾಗೇನಹಳ್ಳಿ 40, ಹಂಪೆನಗರ 29, ಹೊರಮಾವು 28, ಜಕ್ಕೂರು 27, ಕೋರಮಂಗಲ 25, ಸಿಂಗಸಂದ್ರ 23, ಮನೋರಾಯನಪಾಳ್ಯ 23, ರಾಮಮೂರ್ತಿನಗರ 22, ದೊರೆಸನ್ನಿಪಾಳ್ಯ 20, ಹೆಮ್ಮಿಗೆಪುರ 20, ಬಾಣಸವಾಡಿ ಪೂರ್ವ 18, ಮಾರುತಿ ಮಂದಿರ 18, ಶೆಟ್ಟಿಹಳ್ಳಿ 17,ಕಾಡುಗುಡಿ 17, ಎಚ್‌ಎಸ್‌ಆರ್ ಲೇಔಟ್ 17, ಗರುಡಾಚಾರಪಾಳ್ಯ 17, ನಾಯಂಡಹಳ್ಳಿ 16, ಚೊಕ್ಕಸಂದ್ರ 15, ವಿದ್ಯಾಪೀಠ 15, ಬೊಮ್ಮನಹಳ್ಳಿ 15, ಕೆ.ಆರ್.ಪುರ 14, ಆರ್.ಆರ್.ನಗರ 13, ಚಾಮರಾಜಪೇಟೆ 12, ಕಾಟನ್‌ಪೇಟೆ 11 ಮಿಮೀ ಮಳೆ ಸುರಿದಿತ್ತು.

5 ದಿನ ಸಾಧಾರಣ ಮಳೆ

ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರುವ ಮಳೆ, ಮುಂದಿನ 5 ದಿನ ಮುಂದುವರಿಯಲಿದ್ದು, ಕೆಲ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಗುಡುಗು ಸಹಿತ ಸಾಧಾರಣವಾಗಿ ಸುರಿದರೆ, ಇನ್ನೂಕೆಲ ಪ್ರದೇಶಗಳಲ್ಲಿ ತುಸು ಬಿರುಸಾಗಿ ವರ್ಷಧಾರೆಯಾಗಲಿದೆ. ಗಂಟೆಗೆ 40 ಕಿ.ಮೀ.ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.