ಬಳ್ಳಾರಿ: ಪೂರ್ವ ಮುಂಗಾರು ಮಳೆ ಗಣಿನಾಡಿನಲ್ಲಿ ನಿತ್ಯ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸೋಮವಾರ ತಡರಾತ್ರಿ ಅಬ್ಬರಿಸಿದ್ದ ಮಳೆ ಮಂಗಳವಾರವೂ ಸಂಜೆ ಮತ್ತೆ ಮಳೆ ಸುರಿಯಿತು. ಹೀಗಾಗಿ ಕೆಲವಡೆ ವಾಹನ ಸಂಚಾರ ಹದಗಟ್ಟಿತು. ಟ್ರಾಫಿಕ್ ಸಮಸ್ಯೆ ಕಾಣಿಸಿತು. ಮಳೆ ಬೀಳುತ್ತಲೇ ವಿದ್ಯುತ್ ಸಂಪರ್ಕ ಕಡಿತವಾಗುವ ಪರಿಪಾಠ ಮುಂದುವರಿದಿತ್ತು. ಮಂಗಳವಾರ ಸಂಜೆಯ ಮಳೆಗೂ ಹಲವು ಕಡೆ ವಿದ್ಯುತ್ ಸ್ಥಗಿತಗೊಂಡಿತು. ಜಿಲ್ಲೆಯ ಗ್ರಾಮೀಣ ಪ್ರದೇಶದ ವೇದಾವತಿ ನದಿ ಹಾಗೂ ಹಳ್ಳಗಳಲ್ಲಿ ನೀರು ಹರಿದವು. ನೆರೆಯ ಆಂಧ್ರ ಹಾಗೂ ರಾಜ್ಯದ ಗಡಿಭಾಗದ ಗೂಳ್ಯಂ ಗ್ರಾಮದ ವೇದಾವತಿಯ ನದಿಯ ಕಾಲು ಸೇತುವೆ ಮೇಲೆ ನೀರು ಹರಿಯಿತು. ಕಳೆದ ಎರಡು ದಿನದಲ್ಲಿ ಜಿಲ್ಲಾದ್ಯಂತ 0.30 ಸೆಂ.ಮೀ. ಮಳೆಯಾಗಿದೆ. ಕಂಪ್ಲಿ 0.77 ಸೆಂ.ಮೀ., ಕುರುಗೋಡು 0.45 ಸೆಂ.ಮೀ., ಸಿರಗುಪ್ಪ 0.39 ಸೆಂ.ಮೀ., ಸಂಡೂರು 0.17 ಸೆಂ.ಮೀ ಹಾಗೂ ಬಳ್ಳಾರಿ 0.16 ಸೆಂ.ಮೀ. ಮಳೆಯಾಗಿದೆ. ಕಳೆದ 48 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಒಟ್ಟು ಹನ್ನೊಂದು ಮನೆಗಳು ಮಳೆಯಿಂದ ಬಿದ್ದಿವೆ. ಯಾವುದೇ ಪ್ರಾಣಿ ಹಾಗೂ ಸಾರ್ವಜನಿಕರಿಗೆ ಹಾನಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ತಿಳಿಸಿದರು.