ಜಿಲ್ಲೆ

ಮೈದುಂಬಿದ ಅಮಾನಿಕೆರೆ ; ಕೆರೆ ವೈಭೋಗ ಕಣ್ತುಂಬಿಕೊಳ್ಳಲು ಜನಸಾಗರ ಮಳೆಯಲ್ಲೂ ಸೆಲ್ಫೀ ಕ್ಲಿಕ್ಕಿಸುತ್ತಿದ್ದ ಜನ

Tumakuru

ತುಮಕೂರು : ನಗರದ ಅಮಾನಿಕೆರೆ ಶುಕ್ರವಾರ ಕೋಡಿ ಬಿದ್ದಿದೆ. 19 ವರ್ಷದ ಬಳಿಕ ಅಮಾನಿಕೆರೆ ವೈಭೋಗ ಕಣ್ತುಂಬಿಕೊಳ್ಳಲು ನಗರದ ನಾಗರೀಕರು ಕೆರೆ ಏರಿದ್ದಲ್ಲದೆ, ನಿರಂತರವಾಗಿ ಸುರಿಯುತ್ತಿದ್ದ ಮಳೆಯಲ್ಲೂ ಮೊಬೈಲ್‌ಗಳಲ್ಲಿ ಸೆಲ್ಫೀ ಕ್ಲಿಕ್ಕಿಸುತ್ತಿದ್ದಲ್ಲದೆ, ವಿಡಿಯೋಗಳನ್ನು ಮಾಡುತ್ತಿದ್ದ ಸಂಭ್ರಮದ ದೃಶ್ಯ ಕಂಡುಬಂತು.

ಕಳೆದ ರಾತ್ರಿಯಿಡಿ ಸುರಿದ ಜಿಟಿಜಿಟಿ ಮಳೆಯ ಪರಿಣಾಮ ಎಲ್ಲೆಡೆಯಿಂದ ಹರಿದುಬಂದ ಮಳೆ ನೀರು ಕೆರೆಯನ್ನು ತುಂಬಿ ತುಳುಕುವಂತೆ ಮಾಡಿದೆ. ಕೆರೆ ಕೋಡಿ ಬಿದ್ದಿರುವುದನ್ನು ನೋಡಲು ನಗರದ ಶಿರಾಗೇಟ್ ರಸ್ತೆಯಲ್ಲಿರುವ ದೊಡ್ಡ ಕೋಡಿ ಬಳಿ ದಿನವಿಡೀ ಜನಜಾತ್ರೆಯೇ ಸೇರಿತ್ತು.

19 ವರ್ಷಗಳ ಬಳಿಕ ಅಮಾನಿಕೆರೆ ಭರ್ತಿ ಆಗಿರುವುದು ಸಹಜವಾಗಿಯೇ ಜನರಲ್ಲಿ ಸಂತಸ, ಕುತೂಹಲ ಮೂಡಿಸಿದ್ದು ಜನಸಾಗರ ಅಮಾನಿಕೆರೆಯತ್ತ ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೋಡಿ ಬಿದ್ದಿರುವ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಹಲವು ಮನೆ ಹಾನಿ: ಮಳೆಯಿಂದಾಗಿ ನಗರದ ತಗ್ಗುಪ್ರದೇಶಗಳಿಗೆ ನೀರುನುಗ್ಗಿದ್ದು ಇಡೀ ರಾತ್ರಿ ಜನ ಜಾಗರಣೆ ಮಾಡುವಂತಾಯಿತು. ಸಿದ್ದಗಂಗಾಬಡಾವಣೆ, ಶಾಂತಿನಗರ, ಸದಾಶಿವನಗರ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದಲ್ಲದೆ ರಸ್ತೆಗಳು ಜಲಾವೃತಗೊಂಡಿದ್ದು ಜನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಇನ್ನೂ ವಾರ್ಡ್ 17, ವಾರ್ಡ್ 22 ರಲ್ಲಿ ಮನೆಗಳು ಮಳೆಯಿಂದ ಸಂಪೂರ್ಣ ಹಾನಿಗೊಳಗಾಗಿವೆ. ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ.

ಜನರ ರಕ್ಷಣೆ ಮೊದಲ ಆದ್ಯತೆ: ಭಾರಿ ಮಳೆಯಿಂದಾಗಿ ಅಮಾನಿಕೆರೆ ಕೋಡಿ ಹರಿದ ಕಾರಣ ಗಂಗಾ ಪೂಜೆ ನೇರವೇರಿಸಿ, ಬಾಗಿನ ಅರ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಕೆರೆ ಕೋಡಿ ಬಿದ್ದ ಸ್ಥಳಕ್ಕೆ ಭೇಟಿ ನೀಡಿದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು, ಭಾರಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಜನರ ರಕ್ಷಣೆಯೇ ನಮ್ಮ ಮೊದಲ ಆದ್ಯತೆ, ಆನಂತರ ಗಂಗಾಪೂಜೆ ನೆರವೇರಿಸುವುದಾಗಿ ಸ್ಪಷ್ಟಪಡಿಸಿದರು. ಮುಂದಿನ 2 ದಿನಗಳು ಸಹ ಭಾರಿ ಮಳೆ ಬೀಳುವ ಮುನ್ಸೂಚನೆ ಇರುವುದರಿಂದ ಅಮಾನಿಕೆರೆಯು ಅಪಾಯ ಮಟ್ಟ ತಲುಪುವ ಸಾಧ್ಯತೆ ಇರುತ್ತದೆ. ಹಾಗಾಗಿ, ರಾಜಗಾಲುವೆ ಅಕ್ಕಪಕ್ಕದ ಮನೆಯವರು ತುರ್ತಾಗಿ ಸ್ಥಳಾಂತರಗೊಳ್ಳಬೇಕೆಂಬ ಜ್ಯೋತಿಗಣೇಶ್ ಮನವಿಯಿಂದ ರಾಜಗಾಲುವೆಯ ಸುತ್ತಮುತ್ತಲಿನ 35 ಮನೆಯ 100ಕ್ಕೂ ಅಧಿಕ ಜನ ಸ್ಥಳಾಂತರಗೊಳ್ಳಲು ಒಪ್ಪಿಗೆ ನೀಡಿದರು. ಟೂಡಾ ಅಧ್ಯಕ್ಷ ಬಿ.ಎಸ್.ನಾಗೇಶ್, ಪಾಲಿಕೆ ವಿಪಕ್ಷ ನಾಯಕ ಜೆ. ಕುಮಾರ್, ಕಾರ್ಪೋರೇಟರ್‌ಗಳಾ ನಯಾಜ್ ಅಹಮದ್, ಮಂಜುನಾಥ್, ಲಕ್ಷ್ಮೀನರಸಿಂಹರಾಜು, ಎಚ್.ಮಲ್ಲಿಕಾರ್ಜುನಯ್ಯ, ನಳಿನಾ, ವಿ.ಎಸ್.ಗಿರಿಜಾ, ಚಂದ್ರಕಲಾ, ವೀಣಾ, ಇನಾಯತ್, ಧರಣೇಂದ್ರ ಕುಮಾರ್ ಮತ್ತಿತರರು ಸಾಥ್ ನೀಡಿದರು.

ಖಾಸಗಿ ಶಾಲೆಗೆ ನುಗ್ಗಿದ ನೀರು ! : ನಗರದ ಬಡ್ಡಿಹಳ್ಳಿ ಕೆರೆ ಕೋಡಿ ಬಿದ್ದಿದ್ದು ಉಕ್ಕಿ ಹರಿದ ನೀರು ಪಕ್ಕದ ಖಾಸಗಿ ವಿದ್ಯಾಸಂಸ್ಥೆ ಆವರಣ ಹಾಗೂ ಸುತ್ತಮುತ್ತ ರಭಸವಾಗಿ ನುಗ್ಗಿ ಹರಿದಿದೆ. ಕೋಡಿ ಬಿದ್ದ ನೀರು ಎಸ್‌ಆರ್‌ಎಸ್ ಕಾಲೇಜು ಹಿಂಬದಿಯಿಂದ ಮುಂದಕ್ಕೆ ಹರಿಯುತ್ತಿದ್ದು ರಿಂಗ್ ರಸ್ತೆಗೆ ಅಡ್ಡವಾಗಿ ದೊಡ್ಡ ಚರಂಡಿ ನಿರ್ಮಿಸಿದ್ದು ಅದರ ಮೂಲಕ ರಿಂಗ್ ರಸ್ತೆಯ ಮೂಲಕ ನೀರು ಹರಿದಿದ್ದು ಮಿನಿ ಕೆರೆಯೇ ನಿರ್ಮಾಣವಾಗಿದೆ. ಇನ್ನೂ ಶೆಟ್ಟಿಹಳ್ಳಿ ಕೆರೆ, ಗಾರೆನರಸಯ್ಯನಕಟ್ಟೆ ಸಹ ಉತ್ತಮ ಮಳೆಯಿಂದ ತುಂಬಿವೆ.

ಸಹಾಯವಾಣಿ: ಮುಂದಿನ 2 ದಿನಗಳು ಸಹ ಭಾರಿ ಮಳೆ ಬೀಳುವ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ವಿನಾ ಕಾರಣ ಮನೆಯಿಂದ ಆಚೆ ಬರುವುದು ಬೇಡ. ಯಾವುದೇ ತುರ್ತು ಸಂದರ್ಭದಲ್ಲಿ ನಮ್ಮ ಕಚೇರಿಯ ಸಹಾಯವಾಣಿ ಸಂಖ್ಯೆ: 9606461727ಗೆ ಕರೆ ಮಾಡುವಂತೆ ಜ್ಯೋತಿಗಣೇಶ್ ಮನವಿ ಮಾಡಿದರು.