ಮಡಿಕೇರಿ:
ಜಿಲ್ಲೆಯಲ್ಲಿ ಮಳೆಯ ವಾತಾವರಣ ಮುಂದುವರಿದಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಗುರುವಾರ ಆಗಾಗ್ಗೆ ಮಳೆ ಮತ್ತು ಮಂಜು ಕವಿದ ಸ್ಥಿತಿ ಕಂಡು ಬಂತು. ಕುಶಾಲನಗರ ತಾಲೂಕು ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳುವಾರ ಗ್ರಾಮದಲ್ಲಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ. ಗ್ರಾಮದ ಕೃಷಿಕ ಮಹದೇವ ಮತ್ತು ಮಹದೇವಮ್ಮ ದಂಪತಿಗೆ ಸೇರಿದ ಈ ಮನೆಯ ಗೋಡೆ ಮಳೆಯ ನೀರಿನಿಂದಾಗಿ ಶೀತಕ್ಕೆ ಸಿಲುಕಿತ್ತು.
ಬುಧವಾರ ದಿನವಿಡೀ ಸುರಿದ ಮಳೆಯ ಪರಿಣಾಮ ಸಂಜೆ 5.30ರ ವೇಳೆಗೆ ಗೋಡೆ ಕುಸಿದದ್ದರಿಂದ ಛಾವಣಿಯೂ ಕುಸಿದುಬಿದ್ದಿದೆ. ಈ ಸಂದರ್ಭದಲ್ಲಿ ಮನೆಯ ಮಂದಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ಸರಾಸರಿ 24.70 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 2.89 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 2656.81 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2642.19 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 38.95 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 18.75 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 26.10 ಮಿ.ಮೀ. ಸೋಮವಾರಪೇಟೆ ತಾಲೂಕಿನಲ್ಲಿ 30.90 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 8.80 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ಕಸಬಾ 29, ನಾಪೋಕ್ಲು 17.60, ಸಂಪಾಜೆ 63, ಭಾಗಮಂಡಲ 46.20, ವಿರಾಜಪೇಟೆ 20, ಅಮ್ಮತ್ತಿ 17.50, ಹುದಿಕೇರಿ 25.40 , ಶ್ರೀಮಂಗಲ 41, ಪೊನ್ನಂಪೇಟೆ 18, ಬಾಳೆಲೆ 20, ಸೋಮವಾರಪೇಟೆ 21.40, ಶನಿವಾರಸಂತೆ 16, ಶಾಂತಳ್ಳಿ 58, ಕೊಡ್ಲಿಪೇಟೆ 28.20, ಕುಶಾಲನಗರ 2.60 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 15 ಮಿ.ಮೀ.ಮಳೆಯಾಗಿದೆ.
2859 ಅಡಿ ಎತ್ತರದ ಹಾರಂಗಿ ಜಲಾಶಯದಲ್ಲಿ ಗುರುವಾರದ ಮಾಹಿತಿ ಪ್ರಕಾರ 2858.47 ಅಡಿ ನೀರಿದೆ. ನೀರಿನ ಒಳಹರಿವು 5,672 ಕ್ಯೂಸೆಕ್. ನದಿಗೆ 5,500 ಕ್ಯೂಸೆಕ್ ಮತ್ತು ನಾಲೆಗೆ 500 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.