ಜಿಲ್ಲೆ

ಕೊಡಗಿನಲ್ಲಿ ಮತ್ತೆ ಮಳೆ ಚುರುಕು

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನಲ್ಲಿ ಕಳೆದ 2-3 ದಿನಗಳಿಂದ ಬಿಡುವು ಪಡೆದುಕೊಂಡಿದ್ದ ಮಳೆ ಬುಧವಾರ ಬೆಳಗ್ಗೆಯಿಂದ ಮತ್ತೆ ಚುರುಕಾಗಿದೆ. ಗುರುವಾರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ದಿನಪೂರ್ತಿ ಮಳೆ ಮತ್ತು ಚಳಿಯ ವಾತಾವರಣ ಇತ್ತು. ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿನ ತನಕ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮಳೆಯ ಕಾರಣದಿಂದ ಮಡಿಕೇರಿ-ಮೂರ್ನಾಡು ರಸ್ತೆಯ ಮೇಕೇರಿ ಬಳಿ ರಸ್ತೆ ಬದಿಯಲ್ಲಿ ಮಣ್ಣು ಕುಸಿತ ಉಂಟಾಗಿದೆ. ಇಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಸುಮಾರು 4 ಕಿ.ಮೀ. ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿತ್ತು. ಈ ಭಾಗದಲ್ಲೇ ಈಗ ಮಣ್ಣು ಕುಸಿದಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಕುಸಿದರೆ ರಸ್ತೆ ಸಂಪರ್ಕ ಸ್ಥಗಿತ ಆಗುವ ಸಾಧ್ಯತೆಗಳಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 27.70 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 12.32 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 2471.59 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2521.60 ಮಿ.ಮೀ. ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 52.08 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 18.05 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 20.35 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 29.30 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 18.70 ಮಿ.ಮೀ. ಸರಾಸರಿ ಮಳೆಯಾಗಿದೆ.

ಮಡಿಕೇರಿ ಕಸಬಾ 38, ನಾಪೋಕ್ಲು 21, ಸಂಪಾಜೆ 86.50, ಭಾಗಮಂಡಲ 62.80, ವಿರಾಜಪೇಟೆ 21.60, ಅಮ್ಮತ್ತಿ 14.50, ಹುದಿಕೇರಿ 28, ಶ್ರೀಮಂಗಲ 24.40, ಪೊನ್ನಂಪೇಟೆ 20, ಬಾಳೆಲೆ 9, ಸೋಮವಾರಪೇಟೆ 25.20, ಶನಿವಾರಸಂತೆ 22, ಶಾಂತಳ್ಳಿ 45, ಕೊಡ್ಲಿಪೇಟೆ 25, ಕುಶಾಲನಗರ 11.20, ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 26.20 ಮಿ.ಮೀ. ಮಳೆಯಾಗಿದೆ.

2859 ಅಡಿ ಎತ್ತರದ ಹಾರಂಗಿ ಜಲಾಶಯದದಲ್ಲಿ ಗುರುವಾರದ ಮಾಹಿತಿ ಪ್ರಕಾರ 2858.10 ಅಡಿ ನೀರಿದೆ. ನೀರಿನ ಒಳಹರಿವು 2,893 ಕ್ಯೂಸೆಕ್ ಇದ್ದು, ನದಿಗೆ 1,625 ಕ್ಯೂಸೆಕ್, ನಾಲೆಗೆ 500 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.