ಮಡಿಕೇರಿ:
ಜಿಲ್ಲೆಯಾದ್ಯಂತ ಪುಷ್ಯ ಮಳೆಯ ಅಬ್ಬರ ಮುಂದುವರಿದಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ದಿನಪೂರ್ತಿ ಮಳೆ ಇತ್ತು. ಗಾಳಿಯೂ ಆತಂಕಕಾರಿ ಪ್ರಮಾಣದಲ್ಲಿ ಜೋರಾಗಿ ಬೀಸುತ್ತಿತ್ತು. ಚಳಿ ವಾತಾವರಣವೂ ಕಂಡು ಬಂತು. ಅಲ್ಲಲ್ಲಿ ಮನೆಗಳು ಬಿದ್ದು, ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಬಹುತೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದು, ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಆಗಿದೆ. ಈ ಮಧ್ಯೆ ಜಿಲ್ಲೆಯಾದ್ಯಂತ ಸೋಮವಾರವೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಜೋರಾದ ಮಳೆ, ಗಾಳಿಗೆ ಪೇರೂರು ಗ್ರಾಮದ ಬೆಳ್ಯವ್ವ ಎಂಬವರ ಮನೆಯ ಶೀಟ್‌ಗಳು ಹಾರಿಹೋಗಿದೆ. ಮಡಿಕೇರಿ ತಾಲೂಕು ಕರ್ಣಂಗೇರಿ ಗ್ರಾಮದ ರಜಾಕ್ ಎಂಬವರ ಮನೆಯ ಒಂದು ಭಾಗದ ಗೋಡೆ ಮಳೆಯಿಂದಾಗಿ ಕುಸಿದು ಬಿದ್ದಿದೆ. ಶ್ರೀಮಂಗಲ ಹೋಬಳಿ ಬೀರುಗ ಗ್ರಾಮದ ಮುಕ್ಕಾಟೀರ ಕಾಶಿ ಕಾರ್ಯಪ್ಪ ಎಂಬವರ ಮನೆ ಮಳೆಯಿಂದ ಬಿದ್ದಿದೆ.
ಸಂಪಾಜೆ ಹೋಬಳಿ ಸಂಪಾಜೆ ಗ್ರಾಮದ ಎ.ಬಿ. ಬೋಜಪ್ಪ ಎಂಬವÀರ ವಾಸದ ಮನೆಗೆ ಭಾರಿ ಗಾತ್ರದ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿದೆ.
ಸುಂಟಿಕೊಪ್ಪ ಹೋಬಳಿ 7ನೇ ಹೊಸಕೋಟೆ ಗ್ರಾಮದ ಕಮಲ ಎಂಬವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ಕುಶಾಲನಗರ ಹೋಬಳಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ರಸೂಲ್‌ಪುರ ಗ್ರಾಮದ ನಿವಾಸಿಯಾದ ಡಿಂಪಲ್ ಕಿರಣ್ ಎಂಬವರ ಕೊಟ್ಟಿಗೆಗೆ ಮಳೆಯಿಂದ ಹಾನಿಯಾಗಿದೆ.
ಸುಂಟಿಕೊಪ್ಪ ಹೋಬಳಿ 7ನೇ ಹೊಸಕೋಟೆ ಗ್ರಾಮದ ರಾಜಾಜಿ ಎಂಬವರ ದನದ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ.
ನಾಪೋಕ್ಲು ಹೋಬಳಿ ಎಮ್ಮೆಮಾಡು ಗ್ರಾಮದ ಟಿ.ಎ. ಕರೀಂ ಎಂಬವರ ಮನೆಯ ಮುಂಭಾಗದ ಗೋಡೆ ಕುಸಿದು ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮನೆ ಸಂಪೂರ್ಣವಾಗಿ ಕುಸಿದು ಬೀಳುವ ಸಾಧ್ಯತೆಯಿದ್ದು, ಇಲ್ಲಿ ವಾಸ ಇದ್ದವರ ಸ್ಥಳಾಂತರಕ್ಕೆ ಸಲಹೆ ನೀಡಲಾಗಿದೆ.
ಸುಂಟಿಕೊಪ್ಪ ಹೋಬಳಿ ಉಳುಗುಲಿ ಗ್ರಾಮದ ಎನ್.ಆರ್. ನಂಜಪ್ಪ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ಶನಿವಾರಸಂತೆ ಹೋಬಳಿ ಮಾದೆಗೋಡು ಗ್ರಾಮದ ಎಂ.ಎನ್. ದಿವಾಕರ ಎಂಬವರ ಮನೆ ಮಳೆಯಿಂದಾಗಿ ಬಿರುಕು ಬಿಟ್ಟಿದೆ. ಮಳೆ ಮುಂದುವರೆದಲ್ಲಿ ಪೂರ್ಣ ಮನೆ ನೆಲಸಮವಾಗುವ ಸಾಧ್ಯತೆ ಇದ್ದು, ಇವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಸೋಮವಾರಪೇಟೆ ಹೋಬಳಿ ಹರದೂರು ಗ್ರಾಮ ಪಂಚಾಯಿತಿ ಕಟ್ಟಡದ ಮೇಲೆ ಭಾರೀ ಗಾತ್ರದ ಮರ ಬಿದ್ದು ಹಾನಿಯಾಗಿದ್ದು, ಕಟ್ಟಡದ ಪಕ್ಕದಲ್ಲಿ ಅಂಗನವಾಡಿ ಕೇಂದ್ರದ ಶೌಚಗೃಹ ಕಟ್ಟಡಕ್ಕೂ ಹಾನಿಯಾಗಿದೆ.
ಅಮ್ಮತ್ತಿ ಹೋಬಳಿ ಪುಲಿಯೇರಿ ಗ್ರಾಮದ ಶ್ರೀಜಾ ಎಂಬವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು ಭಾಗಶಃ ಹಾನಿಯಾಗಿದೆ. ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆಯೂ ವಿದ್ಯುತ್ ಕಂಬ ಬಿದ್ದಿದೆ.
ಕುಂಜಿಲ ಗ್ರಾಮದ ಉಮ್ಮರ್ ಎಂಬವರ ಮನೆಯ ಅಡುಗೆ ಮನೆಯ ಒಂದು ಭಾಗದ ಗೋಡೆ ಗಾಳಿ ಮಳೆಗೆ ಹಾನಿಯಾಗಿದೆ.
ಕುಶಾಲನಗರ ಹೋಬಳಿ ನಂಜರಾಯಪಟ್ಟಣ ಗ್ರಾಮದ ನಿವಾಸಿ ತಮ್ಮಯ್ಯ ಎಂಬವರ ಮನೆಯ ಮೇಲೆ ಮರ ಬಿದ್ದು ಗೋಡೆ ಕುಸಿದಿದ್ದು ಭಾಗಶಃ ಹಾನಿಯಾಗಿದೆ.
ಕುಶಾಲನಗರ ಹೋಬಳಿ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಚಿಕ್ಕತ್ತೂರು ಗ್ರಾಮದ ಮಹಾದೇವಿ ಎಂಬವರ ಮನೆಗೆ ಮಳೆಯಿಂದ ಹಾನಿಯಾಗಿದ್ದು ಮನೆಯ ಎರಡು ಬದಿಯ ಪೂರ್ಣ ಗೋಡೆ ಕುಸಿಯುವ ಹಂತ ತಲುಪಿದೆ. ಮಹಾದೇವಿ ಮತ್ತು ಅವರ ಪಾರ್ಶ್ವವಾಯು ಪೀಡಿತ ಪತಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಸೂರ್ಲಬ್ಬಿ ಗ್ರಾಮದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಭಾಂಗಣ ಶೀಟು ತೀವ್ರ ಗಾಳಿಗೆ ಹಾರಿಹೋಗಿ ಶಾಲೆಯ ಮೇಲೆ ಬಿದ್ದಿದೆ. ಸೋಮವಾರಪೇಟೆ ಹೋಬಳಿ ಗರಗಂದೂರು ಗ್ರಾಮದಲ್ಲಿರುವ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜು ಕಟ್ಟಡದ ಮೇಲೆ ಮರ ಬಿದ್ದು ಹಾನಿಯಾಗಿದೆ.
ಕುಶಾಲನಗರ ತಾಲೂಕು ಕಣಿವೆ ಗ್ರಾಮದ ತೂಗು ಸೇತುವೆ ಬಳಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಸೇತುವೆಯ ಮೇಲೆ ಪ್ರವಾಸಿಗರು ತೆರಳದಂತೆ ಬ್ಯಾರಿಕೇಡ್‌ನಿಂದ ಸೇತುವೆ ಮುಚ್ಚಲಾಗಿದೆ. ಸೇತುವೆಯ ಇನ್ನೊಂದು ಬದಿಯ ಗ್ರಾಮಸ್ಥರಿಗೆ ತೆರಳಲು ಮಾತ್ರ ಬಿಡಲು ಸೂಚಿಸಲಾಗಿದೆ.
ಹಾರಂಗಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿರುವುದರಿಂದ ಜಲಾಶಯದ ಮುಂದೆ ಇರುವ ಯಡವನಾಡು ಹಾರಂಗಿ ಸೇತುವೆ ನೀರಿನಿಂದ ಮುಳುಗಡೆಯಾಗಿದೆ. ಸೇತುವೆಯ ಎರಡೂ ಬದಿಯಲ್ಲಿ ಪೊಲೀಸ್ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರು ಹಾಗೂ ವಾಹನಗಳು ಹೋಗದಂತೆ ನಿರ್ಬಂಧಿಸಲಾಗಿದೆ.
ನಾಪೋಕ್ಲು ಸಮೀಪದ ಕೊಟ್ಟಮುಡಿ ಜಂಕ್ಷನ್ ಪಕ್ಕ ಕಾವೇರಿ ನದಿ ದಡದಲ್ಲಿರುವ ಶೆಡ್ ಒಂದು ಜಲಾವೃತ ಗೊಂಡಿದೆ. ನಾಪೋಕ್ಲು - ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆಯಲ್ಲಿ ಕಾವೇರಿ ಪ್ರವಾಹ ರಸ್ತೆಯ ಮೇಲೆ ಹರಿಯುತ್ತಿದ್ದು ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.
ಕುಶಾಲನಗರ ತಾಲೂಕು ಕಾವೇರಿ ನದಿಯ ತೀರ ಕಣಿವೆ, ಹುಲುಸೆ, ಹೆಬ್ಬಾಲೆ, ತೊರೆನೂರು, ಮಣಜೂರು, ಚಿಕ್ಕನಾಯಕನ ಹೊಸಳ್ಳಿ, ಶಿರಂಗಾಲ, ಮೂಡಲಕೊಪ್ಪಲು ಗ್ರಾಮಗಳ ಅಪಾರ ಪ್ರಮಾಣದಲ್ಲಿ ಕೃಷಿಕರು ಬೆಳೆದಿದ್ದ ಜೋಳ, ಅಡಿಕೆ, ಬಾಳೆ, ಶುಂಠಿ ಮೊದಲಾದ ಫಸಲು ಜಲಾವೃತಗೊಂಡಿದೆ.
ಸೋಮವಾರಪೇಟೆ ಹೋಬಳಿ ಕಿರುದಾಲೆ ಹೊಳೆ ಪಕ್ಕದಲ್ಲಿ ವಾಸವಿರುವ ಬಿಳಿಗೇರಿ ಗ್ರಾಮದ ನಿವಾಸಿಗಳಿಗೆ ಹೊಳೆ ನೀರು ಹರಿವು ಹೆಚ್ಚಾದಲ್ಲಿ ಸುರಕ್ಷಿತ ಪ್ರದೇಶಕ್ಕೆ ಕಾಳಜಿ ಕೇಂದ್ರಕ್ಕೆ ತೆರಳಲು ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಭಾರಿ ಮಳೆ ಹಾಗೂ ವಿಪರೀತ ಗಾಳಿಯಿಂದ ವಿದ್ಯುತ್ ಕಂಬಕ್ಕೆ ಮರ ಹಾಗೂ ರೆಂಬೆ ಕೊಂಬೆಗಳು ಮುರಿದು ಬಿದ್ದು ವಿದ್ಯುತ್ ಮಾರ್ಗಕ್ಕೆ ಹಾನಿ ಉಂಟಾಗಿದೆ. ಸೆಸ್ಕ್ ವತಿಯಿಂದ ದುರಸ್ತಿ ಕಾರ್ಯ ಸಮಾರೊಪಾದಿಯಲ್ಲಿ ನಡೆಯುತ್ತಿದ್ದು ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ.
ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 89.11 ಮಿಮೀ ಮಳೆಯಾಗಿದೆ. ಮಡಿಕೇರಿ ತಾಲೂಕು 100.22, ವಿರಾಜಪೇಟೆ
ತಾಲೂಕು 78.9, ಸೋಮವಾರಪೇಟೆ ತಾಲೂಕು 121.25, ಪೊನ್ನಂಪೇಟೆ ತಾಲೂಕು 110.72 ಹಾಗೂ ಕುಶಾಲನಗರ ತಾಲೂಕಿನಲ್ಲಿ 34.5 ಮಿ.ಮೀ. ಸರಾಸರಿ ಮಳೆಯಾಗಿದೆ. ಅತೀ ಹೆಚ್ಚು ಮಳೆ 238 ಮಿಮೀ ಶಾಂತಳ್ಳಿ ಹೋಬಳಿಯಲ್ಲಿ ದಾಖಲಾಗಿದೆ.
2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಭಾನುವಾರದ ಮಾಹಿತಿ ಪ್ರಕಾರ 2854.75 ಅಡಿ ನೀರಿದೆ. ಒಳಹರಿವು 17,878 ಕ್ಯೂಸೆಕ್ ಇದ್ದು, ನದಿಗೆ 20,833 ಕ್ಯೂಸೆಕ್ ಮತ್ತು ಕಾಲುವೆಗೆ 350 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.