ಜಿಲ್ಲೆ

ಕಡಿಮೆಯಾದ ಮಳೆಯ ಅಬ್ಬರ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನಲ್ಲಿ ಶನಿವಾರ ಆರಿದ್ರಾ ಮಳೆಯ ಅಬ್ಬರ ಕಡಿಮೆ ಆಗಿತ್ತು. ಕಳೆದ 3 ದಿನಗಳಿಂದ ಅಬ್ಬರಿಸಿದ್ದ ಮಳೆ ಬಿಡುವು ಪಡೆದುಕೊಂಡAತಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆಗಾಗ್ಗೆ ತುಂತುರು ಮಳೆಯ ವಾತಾವರಣ ಕಂಡು ಬಂತು. ಐದು ತಾಲೂಕುಗಳ ವ್ಯಾಪ್ತಿಯಲ್ಲೂ ವರುಣನ ಆರ್ಭಟ ಇಳಿದಿತ್ತು. ನದಿಗಳನ್ನು ನೀರಿನ ಮಟ್ಟ ಇಳಿಕೆ ಆಗುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲೆಯ ಅಂಗನವಾಡಿ, ಶಾಲೆ, ಪಿಯು ಕಾಲೇಜಿಗಳಿಗೆ ರಜೆ ಘೋಷಣೆ ಮಾಡಲಾಗಿತ್ತಾದರೂ ಕೆಲವೆಡೆ ಬಿಸಿಲು ಇತ್ತು.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 17.22 ಮಿಮೀ ಮಳೆಯಾಗಿದೆ. ಮಡಿಕೇರಿ ತಾಲೂಕು 31.40 ಮಿಮೀ, ವಿರಾಜಪೇಟೆ ತಾಲೂಕು 12.35 ಮಿಮೀ, ಸೋಮವಾರಪೇಟೆ ತಾಲೂಕು 22.60 ಮಿಮೀ, ಪೊನ್ನಂಪೇಟೆ ತಾಲೂಕು 16.73 ಮಿಮೀ ಹಾಗೂ ಕುಶಾಲನಗರ ತಾಲೂಕಿನಲ್ಲಿ 3 ಮಿಮೀ ಸರಾಸರಿ ಮಳೆಯಾಗಿದೆ.

ಮಡಿಕೇರಿ ಕಸಬಾ 31, ನಾಪೋಕ್ಲು 18, ಸಂಪಾಜೆ 21, ಭಾಗಮಂಡಲ 55.6, ವಿರಾಜಪೇಟೆ ಕಸಬಾ 14.2, ಅಮ್ಮತ್ತಿ 10.5, ಸೋಮವಾರಪೇಟೆ ಕಸಬಾ 13, ಶನಿವಾರಸಂತೆ 15, ಶಾಂತಳ್ಳಿ 54, ಕೊಡ್ಲಿಪೇಟೆ 8.4, ಪೊನ್ನಂಪೇಟೆ 15, ಹುದಿಕೇರಿ 15.5, ಶ್ರೀಮಂಗಲ 18.4, ಬಾಳೆಲೆ 18, ಕುಶಾಲನಗರ 1 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 5 ಮಿಮೀ ಮಳೆ ದಾಖಲಾಗಿದೆ.

2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಶನಿವಾರದ ಮಾಹಿತಿ ಪ್ರಕಾರ 2850.09 ಅಡಿಗಳಷ್ಟು ನೀರಿದೆ. ಜಲಾಶಯಕ್ಕೆ 4592 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ 6500 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ಈ ಮಧ್ಯೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲದ ಗಿರಿಜನ ಕಾಲೋನಿಯಲ್ಲಿ ಮಳೆಯಿಂದ ಹಾನಿಯಾದ ಅನಿಲ್ ಕುಮಾರ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಮತ್ತು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಶುಕ್ರವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು. ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಬಾಡಗ ಬಾಣಂಗಾಲದಲ್ಲಿ ಮನೆಗೆ ತೀವ್ರ ಹಾನಿಯಾಗಿದೆ. ಆದ್ದರಿಂದ ಅಗತ್ಯ ಪರಿಹಾರ ಬಿಡುಗಡೆಗೆ ಸಚಿವರು ಸೂಚಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಗ್ರಾ.ಪಂ. ಅಧ್ಯಕ್ಷೆ ಮಾಲತಿ ಇತರರು ಇದ್ದರು.