ಮಡಿಕೇರಿ:
ಕಳೆದ 2 ದಿನಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮಂಗಳವಾರ ಮಳೆಯ ಅಬ್ಬರ ಸ್ವಲ್ಪ ಕಡಿಮೆ ಆಗಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬಿಡುವು ಕೊಡುತ್ತಾ ಆಗಾಗ್ಗೆ ಮಳೆ ಸುರಿಯುತ್ತಿತ್ತು. ಭಾಗಮಂಡಲ, ನಾಪೋಕ್ಲು, ವಿರಾಜಪೇಟೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಕುಶಾಲನಗರ, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಜಿಟಿ ಜಿಟಿ ಮಳೆಯ ವಾತಾವರಣ ಕಂಡು ಬಂತು.
ಜಿಲ್ಲೆಯ ಕೆಲವೆಡೆ ಮಳೆಯಿಂದಾಗಿ ಸಣ್ಣ ಪುಟ್ಟ ಹಾನಿಗಳು ಆಗಿದೆ. ವಿರಾಜಪೇಟೆ ಹೋಬಳಿ ಪೊದಕೋಟೆ ಗ್ರಾಮದ ನಿವಾಸಿ ಹೆಚ್.ಕೆ. ಬಾಬು ಅವರ ವಾಸದ ಮನೆ ಮಳೆಯಿಂದಾಗಿ ಭಾಗಶಃ ಹಾನಿಯಾಗಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 31.52 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 30.77 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆೆ 1173.99 ಮಿ.ಮೀ. ಮಳೆಯಾಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 559.82 ಮಿ.ಮೀ. ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 29.37 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 10.75 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 32.12 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 76.45 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 8.90 ಮಿ.ಮೀ. ಸರಾಸರಿ ಮಳೆಯಾಗಿದೆ.
ಮಡಿಕೇರಿ ಕಸಬಾ 15, ನಾಪೋಕ್ಲು 28.60, ಸಂಪಾಜೆ 12.50, ಭಾಗಮಂಡಲ 61.40, ವಿರಾಜಪೇಟೆ 14, ಅಮ್ಮತ್ತಿ 7.50, ಹುದಿಕೇರಿ 59.50, ಶ್ರೀಮಂಗಲ 41, ಪೊನ್ನಂಪೇಟೆ 12, ಬಾಳೆಲೆ 16, ಸೋಮವಾರಪೇಟೆ 75, ಶನಿವಾರಸಂತೆ 53, ಶಾಂತಳ್ಳಿ 126, ಕೊಡ್ಲಿಪೇಟೆ 51.80, ಕುಶಾಲನಗರ 5.80 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 12 ಮಿ.ಮೀ. ಮಳೆಯಾಗಿದೆ.
2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಮಂಗಳವಾರದ ಮಾಹಿತಿ ಪ್ರಕಾರ 2851.52 ಅಡಿ ನೀರಿದೆ. 4612 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ 5000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.