ಮಡಿಕೇರಿ:
ಕಳೆದ ನಾಲ್ಕು ದಿನಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಗುರುವಾರ ಮಳೆಯ ಅಬ್ಬರ ಬಹುತೇಕ ಕಡಿಮೆ ಆದಂತಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಾತ್ರ ಮಧ್ಯಾಹ್ನ ತನಕ ಬಿಡುವು ನೀಡಿದ್ದ ಮಳೆ ಮಧ್ಯಾಹ್ನ ನಂತರ ಮತ್ತೆ ಸುರಿಯಲು ಆರಂಭಿಸಿತ್ತು. ಈ ಮಧ್ಯೆ ಶುಕ್ರವಾರವೂ ಜಿಲ್ಲೆಯಲ್ಲ ರೆಡ್ ಅಲರ್ಟ್ ಮುಂದುವರಿದಿದೆ.
ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಅಲ್ಲಲ್ಲಿ ಸಣ್ಣ ಪುಟ್ಟ ಹಾನಿ ಮುಂದುವರಿದಿದೆ. ಶನಿವಾರಸಂತೆ ಹೋಬಳಿ ದೊಡ್ಡಹಣಕೊಡು ಗ್ರಾಮದ ನಿವಾಸಿ ಸುಬ್ಬಯ್ಯ ಎಂಬವರ ಮನೆಗೆ ಭಾರಿ ಮಳೆ ಗಾಳಿಯಿಂದ ಶೇ.50ರಷ್ಟು ಹಾನಿ ಆಗಿರುವುದಾಗಿ ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಮಡಿಕೇರಿ ಓಂಕಾರೇಶ್ವರ ದೇವಾಲಯ ಪಷ್ಕರಣಿ ಭರ್ತಿ ಆಗಿದ್ದು, ನೀರು ಹೊರಕ್ಕೆ ಹರಿಯುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 53.94 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.07 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆೆ 643.27 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 326.97 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 75.58 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 50.05 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 46.07 ಮಿ.ಮೀ
ಸೋಮವಾರಪೇಟೆ ತಾಲೂಕಿನಲ್ಲಿ 56.50 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 41.50 ಮಿ.ಮೀ. ಸರಾಸರಿ ಮಳೆಯಾಗಿದೆ.
ಭಾಗಮಂಡಲ ಹೋಬಳಿಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ 130.60 ಮಿಮೀ ಮಳೆಯಾಗಿದೆ. ಉಳಿದಂತೆ ಮಡಿಕೇರಿ ಕಸಬಾ 88.50, ನಾಪೋಕ್ಲು 79.20, ಸಂಪಾಜೆ 4, ವಿರಾಜಪೇಟೆ 49.60, ಅಮ್ಮತ್ತಿ 50.50, ಹುದಿಕೇರಿ 49.30, ಶ್ರೀಮಂಗಲ 76, ಪೊನ್ನಂಪೇಟೆ 40, ಬಾಳೆಲೆ 19, ಸೋಮವಾರಪೇಟೆ 68, ಶನಿವಾರಸಂತೆ 50, ಶಾಂತಳ್ಳಿ 84, ಕೊಡ್ಲಿಪೇಟೆ 24, ಕುಶಾಲನಗರ 24 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 59 ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು ಗುರುವಾರದ ಮಾಹಿತಿ ಪ್ರಕಾರ 2843.19 ಅಡಿ ನೀರಿದೆ. ಕಳೆದ ವರ್ಷ ಇದೇ ದಿನ 2824.11 ಅಡಿ ನೀರಿತ್ತು. 3299 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಕಳೆದ ವರ್ಷ ಇದೇ ದಿನ 224 ಕ್ಯೂಸೆಕ್ ಇತ್ತು. ನೀರಿನ ಹೊರ ಹರಿವು ನದಿಗೆ 100 ಕ್ಯೂಸೆಕ್‌ಗಳಾಗಿದ್ದು, ಕಳೆದ ವರ್ಷ ಇದೇ ದಿನ 200 ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿತ್ತು.