ಜಿಲ್ಲೆ

ಕೊಡಗಿನಲ್ಲಿ ಮುಂದುವರಿದ ಮಳೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜಿಲ್ಲಾ ಕೇಂದ್ರ ಮಡಿಕೇರಿ ಹೊರತುಪಡಿಸಿ ಉಳಿದೆಡೆ ಮಳೆಯ ಅಬ್ಬರ ಸ್ವಲ್ಪ ಕಡಿಮೆ ಆಗಿದೆ. ಕುಶಾಲನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗಿನ ವೇಳೆ ಒಮದು ವಾರದ ನಂತರ ಎಳೆ ಬಿಸಿಲಿನ ದರ್ಶನ ಆಗಿತ್ತು. ಸೋಮವಾರಪೇಟೆ, ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲೂ ಮಂಗಳವಾರಕ್ಕೆ ಹೋಲಿಸಿದರೆ ಮಳೆಯ ಪ್ರಮಾಣ ಕಡಿಮೆ ಇದೆ. ಪೊನ್ನಂಪೇಟೆ ತಾಲೂಕಿನಲ್ಲಿ ಯಥಾ ಸ್ಥಿತಿ ಮುಂದುವರಿದಿದೆ.

ಮಡಿಕೇರಿಯಲ್ಲಿ ಬೆಳಗ್ಗೆ ಮಳೆ ಸ್ವಲ್ಪ ತಗ್ಗಿದಂತೆ ಕಂಡುಬAದರೂ 11 ಗಂಟೆ ನಂತರ ಮತ್ತೆ ಚುರುಕಾಗಿದೆ. ದಿನ ಪೂರ್ತಿ ಉತ್ತಮ ಮಳೆ ಸುರಿದಿದೆ. ನಗರದಲ್ಲಿ ಮಂಜು ಕವಿದ ವಾತಾವರಣದ ಜತೆಗೆ ಗಾಳಿ, ಮಳೆಯೂ ಇತ್ತು.

ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 62.67 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.05 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 589.33 ಮಿ.ಮೀ. ಮಳೆಯಾಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 325.90 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 65.83 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 34.30 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 42.27 ಮಿ.ಮೀ.,

ಸೋಮವಾರಪೇಟೆ ತಾಲೂಕಿನಲ್ಲಿ 121.45 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 49.50 ಮಿ.ಮೀ. ಸರಾಸರಿ ಮಳೆಯಾಗಿದೆ.

ಶಾಂತಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚು ಅಂದರೆ 175 ಮಿಮೀ ಮಳೆ ದಾಖಲಾಗಿದೆ. ಉಳಿದಂತೆ ಮಡಿಕೇರಿ ಕಸಬಾ 82, ನಾಪೋಕ್ಲು 66.80, ಸಂಪಾಜೆ 11, ಭಾಗಮಂಡಲ 103.50, ವಿರಾಜಪೇಟೆ 33.60, ಅಮ್ಮತ್ತಿ 35, ಹುದಿಕೇರಿ 66, ಶ್ರೀಮಂಗಲ 61, ಪೊನ್ನಂಪೇಟೆ 24, ಬಾಳೆಲೆ 18.07, ಸೋಮವಾರಪೇಟೆ 124, ಶನಿವಾರಸಂತೆ 124, ಕೊಡ್ಲಿಪೇಟೆ 62.80, ಕುಶಾಲನಗರ 26 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 73 ಮಿ.ಮೀ.ಮಳೆಯಾಗಿದೆ.

2,859 ಅಡಿ ಎತ್ತದ ಹಾರಂಗಿ ಅಣೆಕಟ್ಟೆಯಲ್ಲಿ ಬುಧವಾರದ ಮಾಹಿತಿ ಪ್ರಕಾರ 2840.55 ಅಡಿ ನೀರಿದೆ. ಕಳೆದ ವರ್ಷ ಇದೇ ದಿನ 2824.12 ಅಡಿ ನೀರಿತ್ತು. ಒಳಹರಿವು 3852 ಕ್ಯೂಸೆಕ್ ಇದ್ದು, ಕಳೆದ ವರ್ಷ ಇದೇ ದಿನ 230 ಕ್ಯೂಸೆಕ್ ಒಳಹರಿವು ಇತ್ತು. ನದಿಗೆ 100 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ಇದೇ 200 ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿತ್ತು.

ಈ ಮಧ್ಯೆ ಮಂಗಳವಾರ ಮರ ಬಿದ್ದು ಸಾವನ್ನಪ್ಪಿದ ಬಾಡಗ ಬಾಣಂಗಾಲ ಗ್ರಾಮದ ಪಿ.ಸಿ. ಬೆಳ್ಳಿಯಪ್ಪ ಅವರ ಕುಟುಂಬಸ್ಥರಿಗೆ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ 5 ಲಕ್ಷ ರೂ. ಪರಿಹಾರದ ಆದೇಶ ಪ್ರತಿಯನ್ನು ಬುಧವಾರ ಹಸ್ತಾಂತರಿಸಿದರು.

ಮತ್ತೊಂದು ಕಡೆ ಪ್ರವಾಸಿತಾಣ ದುಬಾರೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬುಧವಾರ ಆದೇಶ ಮಾಡಿದ್ದಾರೆ. ದುಬಾರೆಯಲ್ಲಿ ಕಾವೇರಿ ನದಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಸಾಕಾನೆ ಶಿಬಿರಕ್ಕೆ ಪ್ರವಾಸಿಗರನ್ನು ದೋಣಿ ಮುಖಾಂತರ ಕರೆದೊಯ್ಯುವುದು ಅಪಾಯಕಾರಿ ಆಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕುಶಾಲನಗರದ ಕಾವೇರಿ ನಿಸರ್ಗಧಾಮದೊಳಗೆ ಇರುವ ಬೃಹತ್ ಬಿದಿರು ಮೆಳೆ ಧರೆಗುರುಳಿವೆ. ನಿತ್ಯವೂ ಪ್ರವಾಸಿಗರಿಂದ ತುಂಬಿ ತುಳುಕುವ ಪ್ರವಾಸಿಗರ ಪಾದಚಾರಿ ಮಾರ್ಗದಲ್ಲಿಯೇ ಈ ಬಿದಿರು ಮೆಳೆ ಬಿದ್ದಿದೆ. ಅದೃಷ್ಟವಶಾತ್ ಈ ಬೃಹತ್ ಬಿದಿರು ಮೆಳೆ ಬೀಳುವ ಮುನ್ನಾ ವಿದ್ಯುತ್ ತಂತಿಯ ಮೇಲೆ ಬಿದ್ದು ಎತ್ತರದ ಮರವೊಂದರ ಟೊಂಗೆ ಮೇಲೆ ಬಿದ್ದ ಪರಿಣಾಮ ಪ್ರವಾಸಿಗರು ನಿಟ್ಟುಸಿರು ಬಿಡುವಂತಾಗಿದೆ.

ಕೂಡಲೇ ನಿಸರ್ಗಧಾಮದ ಸಿಬ್ಬಂದಿ ಬಿದಿರು ತುಂಡರಿಸಿ ತೆರವು ಗೊಳಿಸಿದರು.