ಮಡಿಕೇರಿ:
ಕೊಡಗಿನಲ್ಲಿ ಮಂಗಳವಾರವೂ ಮಳೆ ಮುಂದುವರಿದಿದೆ. ಆದರೆ ಕಳೆದ 2 ದಿನಗಳಿಗೆ ಹೋಲಿಸಿದರೆ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದ್ದು, ಗಾಳಿಯ ವೇಗ ಹೆಚ್ಚಾಗಿದೆ. ವಿರಾಜಪೇಟೆ ತಾಲೂಕು ಅಮ್ಮತ್ತಿ ಹೋಬಳಿ ಬಾಡಗ ಬಾಣಂಗಾಲ ಗ್ರಾಮದಲ್ಲಿ ಪಿ.ಸಿ. ವಿಷ್ಣು ಬೆಳ್ಳಿಯಪ್ಪ (65) ಎಂಬವರ ಮೇಲೆ ಮರ ಬಿದ್ದು ಮೃತಪಟ್ಟಿದ್ದಾರೆ. ಭಾಗಮಂಡಲ ಹೋಬಳಿಯಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಇಳಿಕೆ ಆಗಿದೆ. ಕೆಳಪ್ರದೇಶದಲ್ಲಿ ನದಿ ನೀರಿನ ಮಟ್ಟ ಏರಿಕೆ ಆಗುವ ಸಾಧ್ಯತೆ ಇರುವುದರಿಂದ ಬೆಂಗೂರು ಗ್ರಾಮದ ದೋಣಿಕಾಡು ಎಂಬಲ್ಲಿ ಜನರ ಓಡಾಟಕ್ಕೆ ದೋಣಿಯ ಸಿದ್ಧತೆ ಮಾಡಲಾಗಿದೆ.
ಮುಂಗಾರು ಮಳೆಯ ಸಂಭವನೀಯ ವಿಪತ್ತಿನ ಸನ್ನಿವೇಶ ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕೊಡಗು ಜಿಲ್ಲೆಗೆ ಆಗಮಿಸಿದೆ. ಮಳೆ, ಗಾಳಿಯಿಂದಾಗಿ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ಪರಿಸ್ಥಿತಿ ನಿಭಾಯಿಸಲು ಹೊರಜಿಲ್ಲೆಗಳಿಂದ ಕೊಡಗಿಗೆ 74 ಮಂದಿ ಪವರ್‌ಮೆನ್‌ಗಳನ್ನು ಸೆಸ್ಕ್ ನಿಯೋಜಿಸಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 76.82 ಮಿ.ಮೀ. ಮಳೆಯಾಗಿದೆ. ಹುದಿಕೇರಿ ಹೋಬಳಿಯಲ್ಲಿ ಅತಿ ಹೆಚ್ಚು ಎಂದರೆ 132 ಮಿಮೀ ಮಳೆ ದಾಖಲಾಗಿದೆ. 2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ 2837.45 ಅಡಿಗಳಷ್ಟು ನೀರಿದ್ದು, 3,431 ಕ್ಯೂಸೆಕ್ ಒಳಹರಿವು ಇದೆ.