filter: 0; fileterIntensity: 0.000000; filterMask: 0; captureOrientation: 0; shaking: 0.000000; highlight: 1; algolist: 0; multi-frame: 1; brp_mask: 0; brp_del_th: 0.0000,0.0000; brp_del_sen: 0.0000,0.0000; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 30; 
ಜಿಲ್ಲೆ

ಜಿಲ್ಲೆಯಲ್ಲಿ ಮುಂದುವರೆದ ವರುಣಾರ್ಭಟ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಜಿಲ್ಲೆಯಲ್ಲಿ ಬೇಸಿಗೆ ಮಳೆ ಶುಕ್ರವಾರವೂ ಮುಂದುವರೆದಿದ್ದು ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಬಿರುಸಿನ ಮಳೆ ಸುರಿದಿದೆ. ವಾಡಿಕೆ ಮಳೆಗಿಂತ ಈ ಬಾರಿ ಅತ್ಯಧಿಕ ಮಳೆ ಪ್ರಮಾಣ ದಾಖಲಾಗಿದೆ.

ದೇವನಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ 18.2 ಮಿ.ಮೀ ಮಳೆಯಾಗಿದ್ದು, ಚನ್ನರಾಯಪಟ್ಟಣ ಹೋಬಳಿಯಲ್ಲಿ 29.2 ಅತ್ಯಧಿಕ ಮಳೆಸುರಿದಿದೆ. ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯಲ್ಲಿ 10.5 ಮಿ.ಮೀ ಇದ್ದರೆ ಮಧುರೆ ಹೋಬಳಿಯಲ್ಲಿ 25.8 ಮಿ.ಮೀಟರ್ ಮಳೆ ಸುರಿದಿದೆ. ಹೊಸಕೋಟೆ ನಗರ ಸುತ್ತಮುತ್ತ 25.8 ಮಿ.ಮೀ ಮಳೆಯಾಗಿದ್ದು, ತಾಲೂಕಿನ ಸೂಲಿಬೆಲೆ ಹೋಬಳಿಯಲ್ಲಿ ಅತ್ಯಧಿಕ 40.0 ಮಿ.ಮೀಟರ್ ಮಳೆಸುರಿದಿದೆ. ನಾಲ್ಕೂ ತಾಲೂಕುಗಳ ಪೈಕಿ ನೆಲಮಂಗಲ ನಗರ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು 9.1 ಮಿ.ಮೀ ಇದ್ದು ಇದೇ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯಲ್ಲಿ 28.8 ಮಿ.ಮೀ ಮಳೆಯಾಗುವ ಮೂಲಕ ತಾಲೂಕಿನಲ್ಲೇ ಅತ್ಯಧಿಕ ಮಳೆ ಸುರಿದ ದಾಖಲೆಯಾಗಿದೆ.

ಮೋಡ ಮುಸುಕಿದ ವಾತಾವರಣ: ಗುರುವಾರ ಮಧ್ಯಾಹ್ನದ ಬಳಿಕ ಸುರಿದ ಭಾರಿ ಮಳೆಯಿಂದಾಗಿ ಶುಕ್ರವಾರವೂ ಜಿಲ್ಲೆಯಲ್ಲಿ ತಂಪಿನ ವಾತಾವರಣ ಕಂಡುಬಂತು. ಮುಂಜಾನೆ 10 ಗಂಟೆವರೆಗೆ ಮೋಡ ಮುಸುಕಿದ ವಾತಾವರಣವಿತ್ತು, ನಂತರದಲ್ಲಿ ಮತ್ತೆ ಬಿಸಿಲು ಕಾಣಿಸಿಕೊಂಡು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ನೆತ್ತಿ ಸುಡುವಂತ ಬಿರುಬಿಸಿಲು ಕಂಡುಬಂತು. ಇದ್ದಕ್ಕಿದ್ದಂತೆ ವಾತಾವರಣ ಬದಲಾಗಿ ಮೋಡ ಮುಸುಕಿದ ವಾತಾವರಣ ಏರ್ಪಟ್ಟು, ಸಂಜೆ 4 ಗಂಟೆ ಸುಮಾರಿಗೆ ಅಲ್ಲಲ್ಲಿ ತುಂತುರು ಮಳೆಯ ದರ್ಶನವಾಯಿತು. ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯ ಸುತ್ತಮುತ್ತಲ ಪ್ರದೇಶದಲ್ಲಿ ಬಿರುಗಾಳಿ ಸಹಿತ ಸುಮಾರು ಅರ್ಧ ತಾಸು ಜೋರು ಮಳೆಯಾಯಿತು.

ರಸ್ತೆಯಲ್ಲಿ ಹರಿದ ಮಳೆನೀರು: ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಚರಂಡಿಗಳ ನಿರ್ವಹಣೆ ಕೊರತೆಯಿಂದ ಮಳೆ ನೀರು ರಸ್ತೆಯಲ್ಲಿ ಹರಿದು ವಾಹನ ಸವಾರರು ಪರದಾಡುತ್ತಿದ್ದ ದೃಶ್ಯ ಕಂಡುಬಂತು. ರಸ್ತೆಗಳಲ್ಲಿನ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸವಾರರು ಸರ್ಕಸ್ ಮಾಡುತ್ತಾ ಸಾಗುವಂತಾಯಿತು. ಸಾಮಾನ್ಯವಾಗಿ ಮಳೆಗಾಲಕ್ಕೂ ಮುನ್ನ ಬೇಸಿಗೆ ವೇಳೆಗೆ ಚರಂಡಿ, ರಾಜಕಾಲುವೆಗಳಲ್ಲಿನ ಕಸಕಡ್ಡಿ ತೆರವುಗೊಳಿಸಿ ಮಳೆ ನೀರು ಸುಗಮವಾಗಿ ಹರಿಯಲು ಕ್ರಮಕೈಗೊಳ್ಳಬೇಕಾದ ಸ್ಥಳೀಯ ಆಡಳಿತಗಳೂ ಎಚ್ಚೆತ್ತುಕೊಳ್ಳದ ಪರಿಣಾಮ ಬೇಸಿಗೆ ಮಳೆಗೂ ನಗರದ ಜನ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಾಯಕಾರಿ ಮರದ ಕೊಂಬೆಗಳು: ಮುಖ್ಯರಸ್ತೆಗಳಲ್ಲಿನ ಸಾಲು ಮರಗಳಲ್ಲಿನ ಅನೇಕ ಮರಗಳಲ್ಲಿ ಕೊಂಬೆಗಳು ಒಣಗಿದ್ದು ಮಳೆಗಾಳಿಗೆ ಬೀಳುವ ಆತಂಕವಿದೆ. ಆದರೆ ಸ್ಥಳೀಯ ಆಡಳಿತಗಳು ಇಂಥ ಮರಗಳನ್ನು ಗುರುತಿಸಿ ಒಣಗಿದ ಮರಗಳ ತೆರವುಗೊಳಿಸುವುದು ಹಾಗೂ ಅಪಾಯಕಾರಿ ಕೊಂಬೆಗಳನ್ನು ಕತ್ತರಿಸುವ ಕೆಲಸ ಮಾಡುತ್ತಿಲ್ಲ ಇದರಿಂದ ಮಳೆ ಆರಂಭವಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಬೀದಿ ಬದಿಯ ವಿದ್ಯುತ್ ಕಂಬಗಳು, ವಿದ್ಯುತ್ ಟ್ರಾನ್‌ಸ್ಾರ್ಮರ್‌ಗಳಿಗೆ ತಗಲುವಂತೆ ಮರಗಳು ಇವೆ. ಜೋರು ಗಾಳಿ ಬೀಸಿದರೆ ಮರಗಳು ಧರೆಗುರುಳಲಿವೆ, ದುರಾದೃಷ್ಟವಶಾತ್ ಟ್ರಾನ್‌ಸ್ಾರ್ಮರ್‌ಗಳ ಮೇಲೆ ಬಿದ್ದರೆ ವಿದ್ಯುತ್ ಅವಘಡಗಳು ಸಂಭವಿಸುವ ಅಪಾಯವಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದೇವನಹಳ್ಳಿ ಜಲಾವೃತ:

ಪಟ್ಟಣದ ಸುತ್ತಮತ್ತ ಜೋರು ಮಳೆ ಸುರಿದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶ, ರೈಲ್ವೆ ಅಂಡರ್‌ಪಾಸ್‌ಗಳು ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಾಯಿತು, ಪ್ರತಿ ಮಳೆಯಲ್ಲಿಯೂ ಇದೇ ಪರಿಸ್ಥಿತಿ ಪುನಾವರ್ತನೆಯಾಗುತ್ತಿದ್ದರೂ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸವಾಗುತ್ತಿಲ್ಲ ಎಂದು ವಾಹನ ಸವಾರರು ಹಿಡಿಶಾಪ ಹಾಕುತ್ತಾ ಸಾಗುತ್ತಿದ್ದರು. ಚರಂಡಿಗಳಲ್ಲಿ ಕಸಕಡ್ಡಿ ತುಂಬಿ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿತ್ತು. ಪ್ರಮುಖವಾಗಿ ಬೆಂಗಳೂರು ಬಳ್ಳಾರಿ ಹಾಗೂ ಸೂಲಿಬೆಲೆ ರಸ್ತೆ ಜಲಾವೃತಗೊಂಡಿತ್ತು. ರಾಜಕಾಲುವೆ ಚರಂಡಿಗಳು ತುಂಬಿ ಅವ್ಯವಸ್ಥೆಗೆ ಕಾರಣವಾಯಿತು, ಪ್ರಮುಖ ವೃತ್ತಗಳಲ್ಲಿ ವಾಹನದಟ್ಟಣೆ ಏರ್ಪಟ್ಟಿತ್ತು.