ಮಡಿಕೇರಿ:
ಫೆಂಗಲ್ ಚಂಡಮಾರುತದ ಅಬ್ಬರ ಮರೆಯಾಗುತ್ತಿದ್ದಂತೆಯೇ ಬಂಗಾಳ ಕೊಲ್ಲಿಯಲ್ಲಿ ಮತ್ತೊಮ್ಮೆ ವಾಯುಭಾರ ಕುಸಿತದಿಂದಾಗಿ ಜಿಲ್ಲೆಯಲ್ಲಿ ಪುನಃ ಭಾರಿ ಮಳೆಯ ಆತಂಕ ಕಾಣಿಸಿಕೊಂಡಿದೆ. ಕೊಡಗಿನಲ್ಲೂ ಯಲ್ಲೋ ಅಲರ್ಟ್ ಘೋಷಣೆ ಆಗಿದ್ದು ಬುಧವಾರ ಸಂಜೆಯಿAದಲೇ ಕಂಡುಬರುತ್ತಿರುವ ಮೋಡ ಕವಿದ ವಾತಾವರಣ ರೈತರನ್ನು ಚಿಂತೆಗೆ ದೂಡಿದೆ. ಕಾಫಿ ಬೆಳೆಗಾರರು ಮತ್ತು ಭತ್ತ ಬೆಳೆದಿರುವ ಅನ್ನದಾತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಈ ವರ್ಷವೂ ಜಿಲ್ಲೆಯ ರೈತರ ಬದುಕಿನ ಜತೆ ಪ್ರಕೃತಿಯ ಆಟ ಮುಂದುವರಿದಿದೆ. ವರ್ಷಾರಂಭದಲ್ಲಿ ಬಿರು ಬಿಸಿಲು, ಮಳೆಗಾಲದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಂಥ ಸವಾಲುಗಳ ಮಧ್ಯೆ ಶ್ರಮ ವಹಿಸಿ ಬೆಳೆದಿದ್ದ ಕಾಫಿ, ಭತ್ತದ ಫಸಲು ಕೈಸೇರುವ ಹೊತ್ತಿನಲ್ಲಿ ಸಂಪೂರ್ಣವಾಗಿ ನೀರು ಪಾಲಾಗುತ್ತಿರುವ ಬಗ್ಗೆ ಚಿಂತಿತರಾಗಿದ್ದಾರೆ. ವಾರದ ಹಿಂದಷ್ಟೇ ಫೆಂಗಲ್ ಚಂಡಮಾರುತದ ಪ್ರಭಾವದಿಂದ ಒಂದಿಷ್ಟು ನಷ್ಟ ಅನುಭವಿಸಿದ್ದ ಕೃಷಿಕರು ಈಗ ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಚಂಡಮಾರುತದ ಕಾರಣದಿಂದ ಇನ್ನೇನು ಕಾದಿದಿಯೋ ಎನ್ನುವ ಆತಂಕಕ್ಕೆ ಒಳಗಾಗಿದ್ದಾರೆ.
ಕೊಡಗಿನಲ್ಲಿ ಸಾಮಾನ್ಯವಾಗಿ ನವೆಂಬರ್ ಅಂತ್ಯದ ತನಕ 2,792 ಮಿ.ಮೀ. ಮಳೆ ಆಗುತ್ತಿತ್ತು. ಈ ವರ್ಷ 2,691.4 ಮಿ.ಮೀ. ಮಳೆ ನಿರೀಕ್ಷೆ ಮಾಡಲಾಗಿತ್ತು. ಆದರೆ ವಾಸ್ತವದಲ್ಲಿ 2,984.7 ಮಿ.ಮೀ. ಆಗಿದ್ದು, ಶೇ.10.9ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದಿದೆ. ಈ ಕಾರಣದಿಂದ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿತ್ತಾದರೂ 20,854 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲು ಸಾಧ್ಯವಾಗಿದೆ. ಈ ಮೂಲಕ ಶೇ. 71.01ರಷ್ಟು ಗುರಿ ಸಾಧನೆ ಆಗಿದೆ. ಇದೀಗ ಪ್ರಾಕೃತಿಕ ವಿಕೋಪದ ಕಾರಣಕ್ಕೆ ಬೆಳೆದಿರುವ ಬೆಳೆಯೂ ಸಂಪೂರ್ಣವಾಗಿ ಕೈ ಸೇರದಂತಾಗಿದೆ.
ಕೊಡಗಿನಲ್ಲಿ ಈ ವರ್ಷ 21,060 ಮೆಟ್ರಿಕ್ ಟನ್ ಅರೆಬಿಕಾ ಕಾಫಿ ಮತ್ತು 1,09,225 ಮೆಟ್ರಿಕ್ ಟನ್ ರೋಬಸ್ಟಾ ಕಾಫಿ ಸೇರಿದಂತೆ ಒಟ್ಟು 1,30,285 ಮೆಟ್ರಿಕ್ ಟನ್ ಕಾಫಿ ಬೆಳೆಯುವ ಅಂದಾಜನ್ನು ಭಾರತೀಯ ಕಾಫಿ ಮಂಡಳಿ ಮಾಡಿಕೊಂಡಿದೆ. ಆದರೆ ಮಳೆಗಾಲದಲ್ಲಿ ವಾಡಿಕೆಗಿಂತ ಹೆಚ್ಚು ಸುರಿದ ಮಳೆ, ಫೆಂಗಲ್ ಚಂಡಮಾರುತ ಮತ್ತು ಇದೀಗ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ಕಾಫಿ ಮಂಡಳಿಯ ಅಂದಾಜು ಮತ್ತು ವಾಸ್ತವ ಉತ್ಪಾದನೆಯಲ್ಲಿ ಅಜ-ಗಜಾಂತರ ಕಂಡುಬರುವ ಸಾಧ್ಯತೆ ಇದೆ.
ಜೂನ್ ತಿಂಗಳಿನಿAದ ಕೃಷಿಗೆ ಪೂರಕವಾದಂಥ ವಾತಾವರಣ ನಿರ್ಮಾಣವಾಗಿದ್ದ ಕಾರಣದಿಂದ ರೈತರು ಉತ್ಸಾಹದಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಬಿತ್ತನೆ, ಉಳುಮೆ, ನಾಟಿ ಕಾರ್ಯ ನಡೆದು ಇದೀಗ ಕೊಯ್ಲು ಹಂತದಲ್ಲಿ ಮಳೆಯ ಕಾಟ ರೈತರನ್ನು ಕಂಗಾಲಾಗಿಸಿದೆ. ಅನ್ನದಾತರ ಮನೆ ಸೇರಬೇಕಿದ್ದ ಭತ್ತ ಗದ್ದೆಯಲ್ಲಿ ನೀರುಪಾಲಾಗುತ್ತಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೊಯ್ಲು ಕಾರ್ಯ ಮುಗಿದಿದ್ದು, ತೆನೆಗಳನ್ನು ಗದ್ದೆಗಳಲ್ಲೇ ಒಣಗಲು ಬಿಡಲಾಗಿದೆ. ಇನ್ನು ಕೆಲವು ಭಾಗದಲ್ಲಿ ಜಿಲ್ಲೆಯ ಸುಗ್ಗಿಹಬ್ಬ ಹುತ್ತರಿ ಕಳೆದ ನಂತರ ಕೊಯ್ಲು ಕಾರ್ಯ ಮುಂದುವರಿಸುವ ಯೋಚನೆಯಲ್ಲಿ ರೈತರು ಇದ್ದಾರೆ.
ವಾಯುಭಾರ ಕುಸಿತದಿಂದ ಸುರಿಯುವ ಮಳೆ ಕೊಯ್ಲು ಮಾಡಿ ಗದ್ದೆಯಲ್ಲಿ ಉಳಿದಿರುವ ಮತ್ತು ಕೊಯ್ಲು ಮಾಡಲು ಉಳಿಸಿಕೊಂಡಿರುವ ಭತ್ತ ಎರಡಕ್ಕೂ ಅಪಾಯಕಾರಿಯೇ ಆಗಿದೆ. ಗದ್ದೆಯಲ್ಲಿ ಒಣಗಲು ಬಿಟ್ಟಿರುವ ತೆನೆಯಿಂದ ಭತ್ತ ಉದುರಿ ಮಣ್ಣುಪಾಲಾದರೆ, ಕೊಯ್ಲು ಮಾಡಲು ಬಾಕಿ ಉಳಿದಿರುವ ಎತ್ತರದ ತೆನೆಗಳು ಗಾಳಿ ಹೊಡೆತಕ್ಕೆ ನೆಲಕ್ಕೆ ಬೀಳುವುದರಿಂದಲೂ ನಷ್ಟ ಸಂಭವಿಸುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಭತ್ತಕ್ಕೆ ಮಾತ್ರ ಹಾನಿ ಆಗುವುದಲ್ಲದೆ ಹುಲ್ಲು ಕೂಡ ಕರಗಿ ಜಾನುವಾರುಗಳ ಮೇವಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ.
ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಕಾಫಿ ಬೆಳೆಗಾರರೂ ಕಂಗಾಲಾಗಿದ್ದಾರೆ. ದಿನವಿಡೀ ಮೋಡ ಮುಸುಕಿದ ವಾತಾವರಣ ಇರುವುದರಿಂದ ಬಿಸಿಲಿಲ್ಲದೆ ಕೊಯ್ಲು ಮಾಡಿ ಕಣದಲ್ಲಿ ಒಣಹಾಕಿರುವ ಕಾಫಿ ಕರಗುತ್ತಿದೆ. ಕೊಯ್ಲು ಮಾಡಲು ಗಿಡದಲ್ಲಿಯೇ ಉಳಿದಿರುವ ರೋಬಸ್ಟಾ ಕಾಫಿ ನೆಲಕ್ಕೆ ಉದುರುತ್ತಿದೆ. ಹಣ್ಣಾಗಿರುವ ಅರೇಬಿಕಾ, ರೋಬಸ್ಟಾ ಕಾಫಿ ಕೊಯ್ಲು ಮಾಡುತ್ತಿರುವ ಸಂದರ್ಭದಲ್ಲಿಯೇ ಮಳೆ ಬೀಳುತ್ತಿರುವುದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ. ಹಣ್ಣಾದ ಕಾಫಿ ಸೀಳುವುದು, ಬಿದ್ದು ಹೋಗುವುದು ಮತ್ತಿತರ ಸಮಸ್ಯೆಗಳೂ ಬೆಳೆಗಾರರನ್ನು ಕಾಡುತ್ತಿದೆ.
ಕಾಫಿಗೆ ಕಾಯಿ ಕೊರಕ ಹುಳುವಿನ ಹಾವಳಿಯೂ ವಿಪರೀತವಾಗಿರುವುದರಿಂದ ಹಣ್ಣಾಗಿರುವ ಕಾಫಿ ಬೇಗ ಕುಯ್ಲು ಮಾಡಿ ಮುಗಿಸುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಆದರೆ ಮಳೆ ಮತ್ತು ಮಳೆ ಬರುವ ವಾತಾವರಣ ಇರುವಾಗ ಬೆಳೆಗಾರ ಕಾಫಿ ಕೊಯ್ಲು ಮಾಡುವ ಧೈರ್ಯ ತೋರಿಸುವುದಿಲ್ಲ. ಹಾಗಾಗಿ ಕಾಫಿ ಹಣ್ಣು ಗಿಡದಲ್ಲಿ ಉಳಿದುಕೊಂಡರೆ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಇದರಿಂದ ಕಾಫಿಯ ಗುಣಮಟ್ಟದ ಮೇಲೂ ಪರಿಣಾಮ ಆಗುತ್ತದೆ.
ಕಾಫಿ ಕಟಾವು ಮಾಡುತ್ತಿರುವ ಈ ಸಂದರ್ಭದಲ್ಲಿ ಜಿಲ್ಲೆಯಾದ್ಯಂತಹ ಕಾಫಿಯ ಕಾಯಿಕೊರಕ (ಬರ‍್ರಿ ಬೋರರ್) ಕೀಟದ ಹಾವಳಿ ತೀವ್ರವಾಗಿದೆ. ಇದರಿಂದ ಕಾಫಿ ಬೀಜದ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಬೆಳೆಯ ಇಳುವರಿಯಲ್ಲಿ ಕುಂಠಿತವಾಗುತ್ತಿರುವುದು ಕಂಡುಬAದಿದೆ. ಮುಂದಿನ ಸಾಲಿನ ಫಸಲು ಮತ್ತು ಕಾಫಿಯ ಗುಣಮಟ್ಟಕ್ಕೆ ತೀವ್ರ ಹಾನಿಯಾಗುವ ಸಾಧ್ಯತೆ ಇರುವುದರಿಂದ ಗಿಡಗಳಲ್ಲಿರುವ ಅಕಾಲಿಕ ಕಾಯಿ ಮತ್ತು ಹಿಂದಿನ ವರ್ಷ ಕುಯ್ಯದೆ ಉಳಿದುಕೊಂಡಿರುವ ಹಣ್ಣುಗಳನ್ನು ಪೂರ್ತಿಯಾಗಿ ಕಿತ್ತು ನಾಶಪಡಿಸಬೇಕು.
ಡಾ. ವೀರೇಂದ್ರ ಕುಮಾರ್, ಸಸ್ಯ ಸಂರಕ್ಷಣಾ ತಜ್ಞ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು
ಬೇಡದ ಸಮಯದಲ್ಲಿ ಬರುವ ಮಳೆ ಕೃಷಿಕರನ್ನು ಕಂಗಾಲು ಮಾಡುತ್ತಿದೆ. ವರ್ಷಪೂರ್ತಿ ಶ್ರಮವಹಿಸಿ ದುಡಿದಿದ್ದಕ್ಕೆ ಫಲ ಸಿಗುವ ಹೊತ್ತಿನಲ್ಲಿ ಇಂಥ ಬೆಳವಣಿಗೆ ಕೃಷಿ ಬದುಕಿನ ಮೇಲೆ ಬೇಸರ ಮೂಡಿಸುತ್ತದೆ. ವನ್ಯಪ್ರಾಣಿ-ಮಾನವ ಸಂಘರ್ಷ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿ ಕಾಫಿ, ಭತ್ತ ಬೆಳೆದರೆ ಈಗ ನವೆಂಬರ್, ಡಿಸೆಂಬರ್‌ನಲ್ಲಿ ವಾಯುಭಾರ ಕುಸಿತದ ಕಾರಣದಿಂದ ಸುರಿಯುವ ಮಳೆ ನಮ್ಮ ಬದುಕನ್ನೇ ಬೀದಿಗೆ ತಂದುಬಿಡುತ್ತದೆ.
ಹೇಮಂತ್ ಪಾರೇರ, ಕೃಷಿಕ, ಯಡವನಾಡು ಗ್ರಾಮ
ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊAಡಿರುವ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಡಿ.12, 13ರಂದು ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಾಯುಭಾರ ಕುಸಿತದ ಮಳೆಯ ಮುನ್ಸೂಚೆನೆ ಇದೆ. ನಂತರ ಕಡಮೆಯಗಲಿದ್ದು, ಡಿಸೆಂಬರ್ 16ರಿಂದ ಇನ್ನೊಂದು ವಾಯುಭಾರ ಕುಸಿತದ ಮಳೆ ಮುಂದುವರಿಯುವ ಮುನ್ಸೂಚನೆ ಇದೆ.
ಡಾ. ಜಿ.ವಿ. ಸುಮಂತ್‌ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ