ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರಕ್ಕೆ ಹೋಗುವ ರಸ್ತೆ ಮುಳುಗಡೆಯಾಗಿದೆ. 
ಜಿಲ್ಲೆ

ಅಪಾಯಮಟ್ಟ ಮೀರಿದ ನೇತ್ರಾವತಿ: ಒಂದೇ ತಿಂಗಳಲ್ಲಿ ಎರಡನೇ ಪ್ರವಾಹ

ಸೌಮ್ಯ ಆರ್

ಬಂಟ್ವಾಳ: ಕುಂಭದ್ರೋಣ ಮಳೆಗೆ ಬಂಟ್ವಾಳ ತಾಲೂಕು ಅಕ್ಷರಶಃ ನಲುಗಿದೆ. ಮಂಗಳವಾರ ಬೆಳಗ್ಗಿನಿಂದಲೇ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು ನೇತ್ರಾವತಿ ನದಿ ಭೋರ್ಗರೆಯುತ್ತಾ ಹರಿದಿದೆ.

ನದಿ ತೀರದ ತಗ್ಗು ಪ್ರದೇಶಗಳಾದ ಆಲಡ್ಕ, ಪಾಣೆಮಂಗಳೂರು, ನಂದಾವರ, ಬಡ್ಡಕಟ್ಟೆ, ಜಕ್ರಿಬೆಟ್ಟು, ಬಸ್ತಿಪಡ್ಪು, ನಾವೂರು, ಸರಪಾಡಿ, ಅಜಿಲಮೊಗರು ಮತ್ತಿತರ ಕಡೆಗಳಲ್ಲಿ ನೆರೆನೀರು ಆವೃತಗೊಂಡು ಮನೆ ಅಂಗಡಿಗಳಿಗೆ ನುಗ್ಗಿದೆ. ಆಲಡ್ಕದಲ್ಲಿ ಪ್ರತಿ ಬಾರಿ ಮಳೆಗೆ ಜಲಾವೃತಗೊಳ್ಳುವ 13 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಬಡ್ಡಕಟ್ಟೆ ಬಸ್ಸು ನಿಲ್ದಾಣ ಹಾಗೂ ಮೀನು ಮಾರುಕಟ್ಟೆ ಬಳಿ ಅಂಗಡಿ, ಹೊಟೇಲುಗಳಿಗೆ ನೆರೆ ನೀರು ನುಗ್ಗಿದೆ.

ರಸ್ತೆಗಳ ಸಂಪರ್ಕ ಕಡಿತ

ನೆರೆ ನೀರು ಆವರಿಸಿದ ಕಾರಣ ಬಂಟ್ವಾಳ ತಾಲೂಕಿನ ಹೆಚ್ಚಿನ ರಸ್ತೆಗಳಲ್ಲಿ ಸಂಪರ್ಕ ಕಡಿತಗೊಂಡು ಸಂಚಾರ ಸ್ಥಗಿತಗೊಂಡಿತು. ನಂದಾವರ-ಪಾಣೆಮಂಗಳೂರು ಮಧ್ಯೆ ಶ್ರೀ ಶಾರದಾ ಪ್ರೌಢಶಾಲೆಯ ಬಳಿ ನೀರು ತುಂಬಿಕೊಂಡು ವಾಹನ ಸಂಚಾರ ಸ್ಥಗಿತಗೊಂಡಿತು. ಬಂಟ್ವಾಳ ಬಸ್ತಿಪಡ್ಪು ಬಳಿ ಬಂಟ್ವಾಳ ಪೇಟೆ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು. ಕಿರಿದಾಗಿರುವ ಇನ್ನೊಂದು ರಸ್ತೆಯಲ್ಲಿ ಏಕಾಏಕಿ ವಾಹನಗಳ ಸಂಚಾರದಿಂದ ಟ್ರಾಫಿಕ್ ಜಾಮ್ ಉಂಟಾಯಿತು. ಬಂಟ್ವಾಳ ಪೇಟೆಯಿಂದ ಜಕ್ರಿಬೆಟ್ಟು ಸಂಪರ್ಕಿಸುವ ರಸ್ತೆಯಲ್ಲಿ ನೀರು ತುಂಬಿಕೊಂಡು ಪೇಟೆಗೆ ಬರುವ ವಾಹನಗಳು ರಾಷ್ಟ್ರೀಯ ಹೆದ್ದಾರಿಯನ್ನು ಅವಲಂಬಿಸಬೇಕಾಯಿತು. ಪಾಣೆಮಂಗಳೂರು ಪೇಟೆಯಿಂದ ಮೆಲ್ಕಾರ್ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಆಲಡ್ಕ ಬಳಿ ನೆರೆ ನೀರು ತುಂಬಿಕೊಂಡು ಸಂಪರ್ಕ ಕಡಿತಗೊಂಡಿತು.

ಶಾಲೆಗಳಿಗೆ ರಜೆ

ನದಿ ತೀರದ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಯಿತು. ಸಿಆರ್‌ಪಿ ಹಾಗೂ ಎಸ್‌ಡಿಎಂಸಿ ಹಂತದಲ್ಲೇ ರಜೆ ನೀಡುವಂತೆ ತಹಸೀಲ್ದಾರ್ ಅರ್ಚನಾ ಭಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕೆಲವು ಶಾಲೆಗಳಿಗೆ ತೆರಳಿದ ಮಕ್ಕಳು ವಾಪಸಾಗಬೇಕಾಯಿತು. ಮಧ್ಯಾಹ್ನದ ಬಳಿಕ ತಾಲೂಕಿನ ಬಹುತೇಕ ಶಾಲೆಗಳಿಗೆ ರಜೆ ಘೋಷಿಸಲಾಯಿತು.

ಬಸ್ತಿಪಡ್ಪು ಮೈದಾನ ಜಲಾವೃತಗೊಂಡಿತು.

ಮನೆಗಳಿಗೆ ನುಗ್ಗಿದ ನೀರು

ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಬಳಿ ಮನೆಗಳಿಗೆ ಮಳೆನೀರು ನುಗ್ಗಿದೆ. ಈ ಮನೆಗಳು ನದಿ ತೀರದಲ್ಲಿಲ್ಲದಿದ್ದರೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತೇಲುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ

ಮಾನವನ ಅನಾಗರಿಕತೆಗೆ ಸಾಕ್ಷಿ ಎನ್ನುವಂತೆ ನೆರೆನೀರು ತುಂಬಿದ್ದ ಪ್ರದೇಶಗಳಲ್ಲಿ ಯಥೇಚ್ಛ ಪ್ಲಾಸ್ಟಿಕ್ ತ್ಯಾಜ್ಯಗಳು ತೇಲಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ನದಿ, ತೊರೆಗಳಿಗೆ ಎಸೆದ ಪ್ಲಾಸ್ಟಿಕ್ ನೆರೆ ನೀರಿನ ಮೂಲಕ ಮತ್ತೆ ರಸ್ತೆ, ಜನವಸತಿ ಪ್ರದೇಶಗಳಿಗೆ ವಾಪಸಾಗಿದೆ.

ಅಮ್ಟಾಡಿಯಲ್ಲಿ ಗುಡ್ಡ ಕುಸಿತ

ಅಮ್ಟಾಡಿ ಗ್ರಾಮದ ದೇವಿನಗರ ರುದ್ರಭೂಮಿ ಬಳಿ ಮರವೊಂದು ಬುಡಸಮೇತ ಉರುಳಿ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಪಂಚಾಯಿತಿ ಮೂಲಕ ತೆರವು ಕಾರ್ಯಚರಣೆ ನಡೆಯಿತು. ಬಂಟ್ವಾಳ ಕಸಬಾ ಗ್ರಾಮದ ಅಗ್ರಾರ್ ಜಕ್ರಿಬೆಟ್ಟು ರಸ್ತೆ ಬದಿಯ ಗುಡ್ಡ ಕುಸಿತ ಉಂಟಾಗಿದೆ.

ಬಿ.ಸಿ.ರೋಡ್‌ನಿಂದ ಬಂಟ್ವಾಳ ಪೇಟೆ ಸಂಪರ್ಕಿಸುವ ರಸ್ತೆ ಬಸ್ತಿಪಡ್ಪು ಬಳಿ ಜಲಾವೃತಗೊಂಡು ವಾಹನ ಸಂಪರ್ಕ ಕಡಿತಗೊಂಡಿತು.
ಬಡ್ಡಕಟ್ಟೆ ಮೀನು ಮಾರುಕಟ್ಟೆ ಬಳಿ ಅಂಗಡಿ ಸಾಮಾಗ್ರಿಗಳನ್ನು ವಾಹನದಲ್ಲಿ ಸ್ಥಳಾಂತರಿಸಲಾಯಿತು.