ಜಿಲ್ಲೆ

ಭಯ ಮೂಡಿಸಿರುವ ವರುಣ

ಸುನಿಲ್ ಪೊನ್ನೇಟಿ

ಮಡಿಕೇರಿ:

ಹಿಂದಿನ ೨ ವರ್ಷ ಅಷ್ಟಾಗಿ ಅಬ್ಬರಿಸದ ಮಳೆ ಈ ಬಾರಿ ಜುಲೈ ಅಂತ್ಯದ ತನಕ ಆಟವಾಡಿಸಿದ ನಂತರ ಚುರುಕಾಗಿದೆ. ಈ ವರ್ಷ ಬರಗಾಲ ಖಂಡಿತ ಎಂದು ಚಿಂತಿಸುತ್ತಿದ್ದ ಹೊತ್ತಿನಲ್ಲೇ ವರುಣ ತನ್ನ ಇರುವಿಕೆ ತೋರಿಸಿದ್ದಾನೆ. ಇಲ್ಲಿಯ ತನಕ ಕಳೆದ ವರ್ಷದಷ್ಟು ಮಳೆ ಬರದಿದ್ದರೂ ಸುರಿಯುತ್ತಿರುವ ಮಳೆಯ ಪ್ರಮಾಣ ಆತಂಕ ಹುಟ್ಟಿಸಿದೆ. ನದಿ, ತೊರೆ, ಅಣೆಕಟ್ಟೆ ಭರ್ತಿ ಆಗಿರುವುದು ಕೃಷಿಕರಿಗೆ ಖುಷಿ ತಂದಿದ್ದರೂ ಪ್ರವಾಹಪೀಡಿತ ಪ್ರದೇಶದ ನಿವಾಸಿಗಳಲ್ಲಿ ಭಯಕ್ಕೆ ಕಾರಣವಾಗಿದೆ.

೨೦೧೮ರ ಮಹಾಮಳೆ, ಪ್ರಾಕೃತಿಕ ವಿಕೋಪದ ನಂತರ ೨೦೨೦ರ ತನಕವೂ ಆಗಸ್ಟ್ ಬಂತೆಂದರೆ ಕೊಡಗಿನವರು ಆತಂಕಕ್ಕೆ ಒಳಗಾಗುತ್ತಿದ್ದರು. ಆಗಸ್ಟ್ ಕಂಟಕ ನೆನೆದು ಮಳೆಗಾಲದ ಚಳಿಯಲ್ಲೂ ಬೆವರುವಂತಾಗಿತ್ತು. ಯಾವತ್ತೂ ಮಳೆಗೆ ಹೆದರದ ಕೊಡಗಿನವರನ್ನು ೨೦೧೮ರ ಮುಂಗಾರು ಅಕ್ಷರಶಃ ತತ್ತರಿಸುವಂತೆ ಮಾಡಿದ್ದ ಕಾರಣ ಆಗಸ್ಟ್ ಮಳೆಗಾಲವನ್ನು ಆತಂಕದಿಂದಲೇ ಎದುರು ನೋಡುತ್ತಿದ್ದರು. ಆದರೆ ಈ ವರ್ಷ ಜುಲೈ ಕೊನೆಯ ವಾರದಲ್ಲಿ ಮಳೆ ಅಬ್ಬರಿಸುತ್ತಿದೆ.

೨೦೧೮ರಲ್ಲಿ ಆಗಸ್ಟ್ ೧೪ರ ನಂತರ ಸುರಿಯಲು ಆರಂಭಿಸಿದ್ದ ಮಘಾ ಮಳೆ ಹಲವು ದಶಕಗಳ ನಂತರ ಜಿಲ್ಲೆಯಲ್ಲಿ ತನ್ನ ಪ್ರತಾಪ ಮೆರೆದಿತ್ತು. ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವೆಡೆ ಸಂಭವಿಸಿದ ಭೂಕಸಿತ, ಕುಶಾಲನಗರ ಭಾಗದಲ್ಲಿ ನದಿ ತೀರದ ಬಡಾವಣೆಗಳಲ್ಲಿ ಪ್ರವಾಹದ ಸ್ಥಿತಿ, ನಿರಾಶ್ರಿತರಾದ ಸಾವಿರಕ್ಕೂ ಅಧಿಕ ಕುಟುಂಬಗಳು, ೧೯ಕ್ಕೂ ಹೆಚ್ಚು ಮಂದಿಯ ಪ್ರಾಣಹಾನಿ ನೋಡಿ ಕೊಡಗಿನ ಜನತೆ ಬೆಚ್ಚಿಬಿದ್ದಿತ್ತು.

೨೦೧೯ರಲ್ಲೂ ಹೆಚ್ಚು ಕಡಿಮೆ ಇಂಥದ್ದೇ ಪರಿಸ್ಥಿತಿ ಪುನರಾವರ್ತನೆ ಆಯಿತು. ಆಗಸ್ಟ್‌ನಲ್ಲಿ ಆಶ್ಲೇಷ ಮಳೆಯ ಅಬ್ಬರಕ್ಕೆ ವಿರಾಜಪೇಟೆ ತಾಲೂಕು ತೋರ ಗ್ರಾಮದಲ್ಲಿ ಬೆಟ್ಟ ಕುಸಿದು ೧೦ ಮಂದಿ ಮತ್ತು ಮಡಿಕೇರಿ ತಾಲೂಕು ಕೋರಂಗಾಲದಲ್ಲಿ ಮನೆ ಮೇಲೆ ಬರೆ ಜರಿದು ಐವರು ಸೇರಿ ಒಟ್ಟು ೧೭ ಮಂದಿ ಮೃತಪಟ್ಟಿದ್ದರು. ಕಾವೇರಿ ನದಿಯಲ್ಲಿನ ಪ್ರವಾಹದಿಂದಾಗಿ ವಿರಾಜಪೇಟೆ ಮತ್ತು ಮಡಿಕೇರಿ ತಾಲೂಕಿನಲ್ಲಿ ೯೦೦ಕ್ಕೂ ಅಧಿಕ ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದವು.

೨೦೨೦ರಲ್ಲೂ ಆಗಸ್ಟ್‌ನಲ್ಲಿ ಆಶ್ಲೇಷ ಮಳೆಯ ಪ್ರತಾಪ ಜೋರಾಗಿತ್ತು. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಅರ್ಚಕ ಕುಟುಂಬದ ಮೂವರು ಸೇರಿ ಐವರು ಭೂಸಮಾಧಿ ಆಗಿದ್ದರು. ಕಾವೇರಿ, ಲಕ್ಷ್ಮಣ ತೀರ್ಥ ಹಾಗೂ ಜಿಲ್ಲೆಯ ಇತರ ನದಿಪಾತ್ರಗಳಲ್ಲಿ ಕಾಣಿಸಿಕೊಂಡ ಪ್ರವಾಹದಿಂದ ಸಾಕಷ್ಟು ಹಾನಿಯೂ ಸಂಭವಿಸಿತ್ತು.

ಹೀಗೆ ಸತತ ಮೂರು ವರ್ಷಗಳ ಕಾಲ ಆಗಸ್ಟ್ ತಿಂಗಳಿನಲ್ಲಿ ಕೊಡಗನ್ನು ಕಾಡಿದ್ದ ಮಳೆರಾಯ ೨೦೨೧ ಮತ್ತು ೨೦೨೨ರಲ್ಲಿ ಅಷ್ಟಾಗಿ ಅಬ್ಬರಿಸಿರಲಿಲ್ಲ. ಹಾಗಾಗಿ ಈ ಎರಡು ವರ್ಷವೂ ಆಗಸ್ಟ್ ಕಂಟಕದಿಂದ ಪಾರಾಗಿರುವ ಬಗ್ಗೆ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿತ್ತು. ಜಿಲ್ಲೆಯ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ಉಳಿದೆಡೆ ಇದ್ದ ಬಿಸಿಲಿನ ವಾತಾವರಣ ಮಳೆಗಾಲದಲ್ಲೂ ಖುಷಿ ಅರಳಿಸಿತ್ತು. ಆದರೆ ಈ ವರ್ಷ ಜುಲೈ ಕೊನೆಯ ವಾರದಲ್ಲಿ ಸುರಿಯುತ್ತಿರುವ ಪುಷ್ಯ ಮಳೆ ಕೊಡಗಿನವರಿಗೆ ೨೦೧೮,೧೯,೨೦ರ ನೆನಪು ಮರುಕಳಿಸುವಂತೆ ಮಾಡಿದೆ.
ಕೊಡಗು, ಮೈಸೂರು, ಹಾಸನದ ಸಮ್ಮಿಶ್ರ ವಾತಾವರಣ ಇರುವ ಜಿಲ್ಲೆಯ ಗಡಿಭಾಗದ ಕುಶಾಲನಗರ ಸುರಕ್ಷಿತ ಸ್ಥಳ ಎನ್ನುವ ನಂಬಿಕೆಯನ್ನು ೨೦೧೮ರ ಮಳೆಗಾಲ ಸುಳ್ಳು ಮಾಡಿತ್ತು. ಪಟ್ಟಣದ ಮೂರು ಭಾಗದಲ್ಲಿ ಸುತ್ತುವರಿದು ಹರಿಯುತ್ತಿರುವ ಕಾವೇರಿ ನದಿ ತೀರ ಪ್ರದೇಶದ ಬಡಾವಣೆಗಳಿಗೆ ನುಗ್ಗಿ ದೊಡ್ಡ ಮಟ್ಟದ ಹಾನಿ ಮಾಡಿತ್ತು.

ಮಡಿಕೇರಿ ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ಕೆದಕಲ್‌ನಿಂದ ಸಂಪಾಜೆ ತನಕ ೩೦ಕ್ಕೂ ಅಧಿಕ ಕಡೆ ಕುಸಿತಗಳು ಸಂಭವಿಸಿ ತಿಂಗಳು ಕಾಲ ಈ ಹೆದ್ದಾರಿಯಲ್ಲಿ ಸಂಪರ್ಕವೇ ಕಡಿತವಾಗಿತ್ತು.
ಇದೀಗ ಕಳೆದ ೫ ದಿನಗಳಿಂದ ಅಬ್ಬರಿಸುತ್ತಿರುವ ಮಳೆ ಮತ್ತೆ ಅಂಥದ್ದೇ ದುರಂತಗಳನ್ನು ಸೃಷ್ಟಿಸುವ ಆತಂಕ ಕಂಡುಬರುತ್ತಿದೆಯಾದರೂ ಈ ಹಿಂದಿನ ಅನುಭವಗಳು ಸಾಕಷ್ಟು ಪಾಠ ಕಲಿಸಿದೆ. ಹಾರಂಗಿ ಜಲಾಶಯದಲ್ಲಿ ಜಾಣ್ಮೆಯಿಂದ ನೀರು ನಿರ್ವಹಣೆ ಮಾಡಲಾಗುತ್ತಿದ್ದು, ಅಣೆಕಟ್ಟೆ ತುಂಬಲು ೫ ಅಡಿಯಷ್ಟು ಬಾಕಿ ಇಟ್ಟುಕೊಂಡು ಉಳಿದ ಎಲ್ಲಾ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ಒಂದು ವೇಳೆ ಹಿನ್ನೀರು ಪ್ರದೇಶದಲ್ಲಿ ಹೆಚ್ಚಿನ ಮಳೆ ಆದರೂ ಹೊರ ಹರಿವು ಮೇಲೆ ನಿಯಂತ್ರಣ ಇಟ್ಟುಕೊಳ್ಳಲು ಸಾಧ್ಯವಾಗುತ್ತಿದೆ. ಈ ಮೂಲಕ ಪ್ರವಾಹ ಪರಿಸ್ಥಿತಿ ತಪ್ಪಿಸುವ ಪ್ರಯತ್ನ ನಡೆದಿದೆ.

ಜಿಲ್ಲಾಡಳಿತ ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದು, ಮಳೆ ಅನಾಹುತ ವರದಿಯಾದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ನಡೆಸಲಾಗುತ್ತಿದೆ. ಎನ್‌ಡಿಆರ್‌ಎಫ್‌ನ ಒಂದು ತುಕಡಿಯೂ ಜಿಲ್ಲೆಯಲ್ಲಿ ಬೀಡುಬಿಟ್ಟಿದೆ. ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ, ಸೆಸ್ಕ್, ಕಂದಾಯ ಸಿಬ್ಬಂದಿಯೂ ಪರಿಸ್ಥಿತಿ ಎದುರಿಸಲು ಸಿದ್ಧವಾಗಿ ನಿಂತಿದೆ.

ಮುಂಗಾರು ಮಾರುತಗಳು ಸ್ವಲ್ಪ ಸಕ್ರಿಯವಾಗಿಯೇ ಇದೆ. ಆದರೆ ಕಡಿಮೆ ಆಗುತ್ತಿದೆ. ಸೋಮವಾರಕ್ಕೆ ಹೋಲಿಸದರೆ ಮಂಗಳವಾರ ಮಳೆಯ ಪ್ರಮಾಣ ಕಡಿಮೆ ಇದೆ. ಜು.೨೬, ಜು. ೨೭ರ ತನಕ ಇದೇ ಸ್ಥಿತಿ ಇರುತ್ತದೆ. ಜು. ೨೮ರಿಂದ ಮಳೆ ಕಡಿಮೆ ಆಗಲಿದೆ.

  • ಎಸ್.ಕೆ. ಚಂಗಪ್ಪ, ಹವಾಮಾನ ಪರಿವೀಕ್ಷಕ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು