ಜಿಲ್ಲೆ

ಅಕಾಲಿಕ ಮಳೆಗೆ ಬೆಂಡಾದ ಅಡಕೆ ; ಒಣಗಿಸಲು ಬಿಸಿಲಿಲ್ಲ, ತೋಟಗಳಲ್ಲಿ ರೋಗದ ಆತಂಕ ಶುರು

Tumakuru

ಚಿಕ್ಕನಾಯಕನಹಳ್ಳಿ : ಕಳೆದ ತಿಂಗಳು ನಿರಂತರವಾಗಿ ಸುರಿದ ಅಕಾಲಿಕ ಮಳೆಯು ಅಡಕೆ ಬೆಳೆಯನ್ನು ಬೆಂಡಾಗಿಸಿದ್ದು, ಬೆಳೆಗಾರರು, ವ್ಯಾಪಾರಸ್ಥರು ಆತಂಕದಲ್ಲಿದ್ದಾರೆ.

ತಾಲೂಕಿನ 6567.92 ಹೆಕ್ಟರ್‌ನಲ್ಲಿ ಅಡಕೆ ಬೆಳೆಯಲಾಗಿದ್ದು, ಈ ವರ್ಷ ಬೆಳೆ ಅಧಿಕವಾಗಿದ್ದರೂ, ಇಳುವರಿ ಕಡಿಮೆಯಾಗಿದೆ. ಈ ನಡುವೆ ನಿರಂತರವಾಗಿ ಸುರಿದ ಮಳೆಗೆ ಕೊಯ್ಲು ಮಾಡಿದ್ದ ಹಾಗೂ ಒಣಗಿಸಲು ಸುಲಿದು ಇಟ್ಟಿದ್ದ ಅಡಕೆ ಒಣಗದೆ ಬೆಂಡಾಗಿದ್ದು, ಬೆಳೆಗಾರರು ಹಾಗೂ ಚೇಣಿ ಮಾಡುವವರು ನಷ್ಟ ಅನುಭವಿಸುವಂತಾಗಿದೆ. ಈ ನಡುವೆ ಅಡಕೆ ತೋಟಗಳಲ್ಲಿ ಮಳೆ ನೀರು ನಿಂತು ರೋಗ ಭೀತಿಯೂ ಉಂಟಾಗಿದೆ. ತಾಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಅಡಕೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ವರ್ಷ ಆದಾಯದಲ್ಲಿ ಕನಿಷ್ಠ ಶೇ.30 ನಷ್ಟ ಅನುಭವಿಸುವಂತಾಗಿದೆ.

ಒಣಗಿಸುವುದೇ ತಲೆನೋವು : ಕೆಲವರು ಅಡಕೆಯನ್ನು ಸುಲಿದು, ಬೇಯಿಸಿ, ಒಣಗಿಸಿ ಮಾರುಕಟ್ಟೆಗೆ ಹಾಕುವ ಪದ್ಧತಿ ರೂಢಿಸಿಕೊಂಡಿದ್ದರೆ, ಇನ್ನು ಕೆಲವರು ತೂಕದ ಲೆಕ್ಕದಲ್ಲಿ ಇಲ್ಲವೇ ತೋಟವನ್ನೇ ಇಂತಿಷ್ಟು ಹಣಕ್ಕೆಂದು ಗುತ್ತಿಗೆ ನೀಡುವುದೂ ಇದೆ. ಪ್ರತಿ ವರ್ಷ ಯಾವುದೇ ಸಮಸ್ಯೆ ಇಲ್ಲದೆ ಅಡಕೆ ಒಣಗಿಸಿ ಮಾರುಕಟ್ಟೆಗೆ ಸೇರಿಸಲಾಗುತ್ತಿತ್ತು. ಆದರೆ ಈ ವರ್ಷ ಅಕಾಲಿಕ ಮಳೆಯು ಎಲ್ಲದಕ್ಕೂ ಅಡ್ಡಿ ಮಾಡಿದೆ. ಅಡಕೆ ಸುಲಿಯುವ ಯಂತ್ರಗಳ ಬಳಕೆ ಇದ್ದರೂ ಸಂಪ್ರದಾಯದಂತೆ ಕೈಯಲ್ಲಿ ಸುಲಿಯವ ವಿಧಾನವನ್ನೇ ಅವಲಂಬಿಸಿರುವ ರೈತರು ಮಳೆ ಕಾರಣಕ್ಕೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ಸುಲಿಯುವ ಕೆಲಸ ಮಾಡಿದರೆ, ಅದನ್ನು ಬೇಯಿಸಲು ಸೌದೆಯ ಅಭಾವ, ಒಣಗಿಸಲು ಜಾಗದ ಕೊರತೆ ಮತ್ತಷ್ಟು ತಲೆನೋವಿಗೆ ಕಾರಣವಾಗಿದೆ.

ಮಳೆಯು ನಿರಂತರವಾಗಿರದೆ ಬಿಟ್ಟು ಬಿಟ್ಟು ಬರುತ್ತಿರುವುದರಿಂದ ಮಲೆನಾಡಿನ ಭಾಗದಲ್ಲಿ ಬರುವಂತಹ ರೋಗಗಳು ನಮ್ಮ ಭಾಗದಲ್ಲಿ ಕಾಣಿಸುವುದಿಲ್ಲ. ಸದ್ಯಕ್ಕೆ ನಮ್ಮ ಭಾಗದ ಅಡಕೆಗೆ ರೋಗಗಳಿಲ್ಲ. ಆದರೆ ಅಡಕೆ ಕಿತ್ತು ಅದನ್ನು ಬೇಯಿಸಲು, ಒಣಗಿಸಲು ತೊಂದರೆ ಆಗಿದೆ ಅಷ್ಟೇ. ಬೆಳೆಗೆ ಮಳೆಯಿಂದ ಯಾವುದೇ ತೊಂದರೆ ಇಲ್ಲ. ಎನ್.ಸಂತೋಷ್ ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ 2 ಎಕರೆಯಲ್ಲಿ ಅಡಕೆ ಬೆಳೆಯುತ್ತೇನೆ, ಒಂದು ಕೋಟಿ ರೂಪಾಯಿಯಷ್ಟು ಚೇಣಿ ಮಾಡುತ್ತಿದ್ದು, ಅಕಾಲಿಕ ಮಳೆಯಿಂದ ಶೇ.30 ನಷ್ಟವಾಗಿದೆ. ಸರ್ಕಾರ ಕೆಂಪು ಅಡಕೆಗೆ ದರ ನಿಗದಿಪಡಿಸಿದರೆ ಅನುಕೂಲವಾಗುತ್ತದೆ. ವೆಂಕಟಪ್ಪ ಹೊಸಪಾಳ್ಯ