ಜಿಲ್ಲೆ

ಅಂಕೋಲಾ, ಶಿರಸಿ ಮಾರ್ಗ ಡಿಪಿಆರ್ ಶೀಘ್ರ,   ಆರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆಗೆ ಸೂಚನೆ,  ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿಕೆ

Dharwada - Basavaraj Idli

ಹುಬ್ಬಳ್ಳಿ: ಹುಬ್ಬಳ್ಳಿ- ಅಂಕೋಲಾ ಹಾಗೂ ಹುಬ್ಬಳ್ಳಿ- ಶಿರಸಿ- ತಾಳಗುಪ್ಪ ರೈಲು ಮಾರ್ಗಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದು, ಈ ದಿಸೆಯಲ್ಲಿ ಬರುವ ಜನೆವರಿಯಲ್ಲಿ ಡಿಪಿಆರ್ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಇಲ್ಲಿಯ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರ ಕಚೇರಿಯಲ್ಲಿ ಭಾನುವಾರ ವಿವಿಧ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈ ಎರಡು ಪ್ರಮುಖ ಯೋಜನೆಗಳ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿಕೊಂಡು 2025ರ ಜೂನ್ ವೇಳೆಗೆ ಟೆಂಡರ್ ಪ್ರಕ್ರಿಯೆ ನಡೆಸಲು ಸಭೆಯಲ್ಲಿ ಚರ್ಚಿಸಲಾಗಿದೆ. 160 ಕಿ.ಮೀ. ಉದ್ದದ ಅಂಕೋಲಾ ರೈಲು ಯೋಜನೆ ದಶಕಗಳಿಂದ ಬಾಕಿ ಉಳಿದಿದೆ. ಇದಕ್ಕೆ ವನ್ಯಜಿವಿ ಮಂಡಳಿ ಅನುಮತಿ ಪಡೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅಲ್ಲದೇ 157 ಕಿ.ಮೀ. ಉದ್ದದ ಹುಬ್ಬಳ್ಳಿ- ಶಿರಸಿ- ತಾಳಗುಪ್ಪ ಯೋಜನೆಗೆ ಯಾವುದೇ ಅಡ್ಡಿ ಇರುವುದಿಲ್ಲ. ಡಿಪಿಆರ್ ಸಿದ್ಧವಾದ ಕೂಡಲೇ ಮುಂದಿನ ಕೆಲಸಗಳು ಪ್ರಾರಂಭವಾಗಲಿವೆ ಎಂದರು.

ಇದೇ ರೀತಿ ಧಾರವಾಡ ಬೆಳಗಾವಿ ಮಾರ್ಗಕ್ಕಾಗಿ 550 ಎಕರೆ ಭೂಸ್ವಾಧಿನ ಬಾಕಿ ಇದ್ದು, 2025ರ ಜೂನ್ ವೇಳೆಗೆ ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಿಕೊಂಡು ಟೆಂಡರ್ ಕರೆಯಲು ಸೂಚಿಸಲಾಗಿದೆ. ರೈಲ್ವೆ ಸೇತುವೆಗಳಲ್ಲಿ ನೀರು ನಿಲ್ಲುವ ಸಮಸ್ಯೆ, ಹುಬ್ಬಳ್ಳಿ ವಾರಾಣಸಿಗೆ ಇನ್ನೊಂದು ರೈಲು ಆರಂಭಿಸುವುದು, ಅಹಮದಾಬಾದ್ ಗೆ ಹೊಸ ರೈಲು ಓಡಿಸುವ ಬಗ್ಗೆ ಬೇಡಿಕೆ ಬಂದಿದ್ದು, ಪರಿಶೀಲನೆ ಮಾಡಲು ತಿಳಿಸಲಾಗಿದೆ ಎಂದರು.

ಹುಬ್ಬಳ್ಳಿ- ಧಾರವಾಡ, ಗದಗ, ಹಾವೇರಿ, ಬೆಳಗಾವಿ ಹೀಗೆ ಅಕ್ಕಪಕ್ಕದ ನಗರಗಳಿಗೆ ಲೋಕಲ್ ಟ್ರೇನ್ ಓಡಿಸುವ ಬಗ್ಗೆ ಬೇಡಿಕೆ ಇದ್ದು, ಇದರ ಬಗ್ಗೆ ಗಂಭೀರವಾಗಿ ಚಿಂತಿಸಲಾಗುವುದು. ವಂದೇ ಭಾರತ ರೈಲಿನಲ್ಲಿ ಸಾಮಾನ್ಯರೂ ಓಡಾಡುವಂತಾಗಬೇಕು. ಇದಕ್ಕಾಗಿ ಸಾಮಾನ್ಯ ಬೋಗಿಗಳನ್ನು ಜೋಡಿಸಲು ಯೋಜಿಸಲಾಗಿದೆ. ಜತೆಗೆ ಸ್ಲೀಪರ್ ಕೋಚ್ ಗಳನ್ನು ಸಹ ಜೋಡಿಸಲಾಗುತ್ತದೆ ಎಂದು ಹೇಳಿದರು.

ಕೇಂದ್ರದ ಯುಪಿಎ ಆಡಳಿತದ ಕಾಲದಲ್ಲಿ ರೈಲ್ವೆ ಇಲಾಖೆಗೆ ಅತ್ಯಂತ ಕಡಿಮೆ ಅನುದಾನ ಬರುತ್ತಿತ್ತು. 2014ರ ನಂತರ ಎನ್‌ಡಿಎ ಸರ್ಕಾರ ಬಂದ ಮೇಲೆ ಅನುದಾನ ಎರಡು ಮೂರು ಪಟ್ಟು ಹೆಚ್ಚಾಗಿದೆ. ಹೊಸ ಮಾರ್ಗ, ವಿದ್ಯುದಿಕರಣ, ಡಬ್ಲಿಂಗ್ ಸೇರಿ ರೈಲ್ವೆ ಕಾಮಗಾರಿಗಳು ವೇಗದಲ್ಲಿ ನಡೆಯುತ್ತಿವೆ ಎಂದು ಸಚಿವ ಸೋಮಣ್ಣ ಹೇಳಿದರು.

ಭೂಸ್ವಾಧಿನ ಸುಲಭ:
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಹುಬ್ಬಳ್ಳಿಯಿಂದ ತಡಸ ಕ್ರಾಸ್, ಮುಂಡಗೋಡ, ಶಿರಸಿ ಮೂಲಕ ರೈಲು ಮಾರ್ಗ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ವನ್ಯ ಜೀವಿ ಮಂಡಳಿಯ ಅನುಮತಿ ಬೇಕೆಂದು ಅನಿಸುವುದಿಲ್ಲ. ಅಡಿಕೆ, ತೆಂಗು ಇತ್ಯಾದಿ ತೋಟಗಳು ಯೋಜನೆ ವ್ಯಾಪ್ತಿಗೆ ಬರುತ್ತವೆ. ಹಾಗಾಗಿ ಭೂಸ್ವಾಧಿನ ಸುಲಭವಾಗಲಿದೆ. ಹಾಗಾಗಿ ಈ ರೈಲು ಮಾರ್ಗಕ್ಕೆ ಯಾವುದೇ ಅಡ್ಡಿ ಆತಂಕಗಳು ಇಲ್ಲ ಎಂದು ಹೇಳಿದರು.

ರೈಲು ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕರು, ಅಧಿಕಾರಿಗಳು ಪಾಲ್ಗೊಂಡಿದ್ದರು.