ಜಿಲ್ಲೆ

ರೈಲ್ವೆ ಯೂನಿಯನ್ ಚುನಾವಣೆ ಕಾವು

Haveri - Desk - Ganapati Bhat

ಆನಂದ ಅಂಗಡಿ ಹುಬ್ಬಳ್ಳಿ

ಸುಮಾರು 11 ವರ್ಷಗಳ ನಂತರ ನಡೆಯುತ್ತಿರುವ ರೈಲ್ವೆ ಯೂನಿಯನ್ ಚುನಾವಣೆ ದಿನದಿಂದ ದಿನಕ್ಕೆ ದೇಶಾದ್ಯಂತ ಕಾವು ಪಡೆಯುತ್ತಿದ್ದು, ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿಯೂ ಚುನಾವಣೆ ತಯಾರಿ ತುರುಸು ಪಡೆದುಕೊಂಡಿದೆ.

ಪ್ರತಿ ಐದು ವರ್ಷಕ್ಕೊಮ್ಮೆ ನಡೆಯಬೇಕಿರುವ ಚುನಾವಣೆ ಮೊದಲ ಬಾರಿಗೆ ನಡೆದಿದ್ದು 2007ರಲ್ಲಿ. 2013ರ ಚುನಾವಣೆ ನಂತರ 2019ರಲ್ಲಿ ಮೂರನೇ ಬಾರಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ನಡೆಯಲಿಲ್ಲ. ಇದೀಗ 11 ವರ್ಷಗಳ ನಂತರ ಮತ್ತೆ ರೈಲ್ವೆ ಯೂನಿಯನ್​ಗಳಿಗೆ ಚುನಾವಣೆ ಘೋಷಣೆಯಾಗಿದೆ.

ನೈಋತ್ಯ ರೈಲ್ವೆ ವಲಯದಲ್ಲಿ 2007ರಲ್ಲಿ ನಡೆದ ಚುನಾವಣೆಯಲ್ಲಿ ಸೌಥ್​ವೆಸ್ಟರ್ನ್ ರೈಲ್ವೆ ಮಜ್ದೂರ ಯೂನಿಯನ್ ಹಾಗೂ ಎನ್​ಆರ್​ಎಸ್​ಎಂ ಸಂಘಟನೆಗಳು ಜಯ ಸಾಧಿಸಿದ್ದವು.

2013ರ ಚುನಾವಣೆಯಲ್ಲಿ ಐದು ಸಂಘಟನೆಗಳು ಕಣಕ್ಕೆ ಇಳಿದಿದ್ದು, ಸೌಥ್​ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಚುನಾಯಿತಗೊಂಡಿತ್ತು. 2019ಕ್ಕೆ ಚುನಾವಣೆ ನಡೆಯದ ಕಾರಣ, ಇದೇ ಸಂಘಟನೆ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳೊಂದಿಗೆ ನೌಕರರ ಹಕ್ಕುಗಳಿಗಾಗಿ ಅಧಿಕೃತ ಮಾತುಕತೆ ನಡೆಸುವ ಹಕ್ಕನ್ನು ಮುಂದುವರಿಸಿತ್ತು.

ಸೌಥ್​ವೆಸ್ಟರ್ನ್ ರೈಲ್ವೆ ಮಜ್ದೂರ ಯೂನಿಯನ್, ಸೌಥ್ ವೆಸ್ಟರ್ನ್ ರೈಲ್ವೆ ಎಂಪ್ಲಾಯಿಸ್ ಯೂನಿಯನ್, ಭಾರತೀಯ ಮಜ್ದೂರ ಸಂಘ ಹಾಗೂ ಇನ್ನಿತರ ಸಂಘಟನೆಗಳ ಪ್ರಮುಖರು ಈ ಬಾರಿ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದಾರೆ.

ಕೇಂದ್ರ ಸರ್ಕಾರ ಎನ್​ಪಿಎಸ್ ಬದಲಾಗಿ ನೂತನವಾಗಿ ಜಾರಿಗೊಳಿಸಿರುವ ಯುಪಿಎಸ್ (ಯುನಿಫೈಡ್ ಪೆನ್​ಶನ್ ಸ್ಕೀಂ), ರೈಲ್ವೆ ವಿವಿಧ ವಿಭಾಗಗಳ ಖಾಸಗೀಕರಣ, ಲೋಕೋಪೈಲಟ್ ಸೇರಿದಂತೆ ವಿವಿಧ ಹಂತದ ನೌಕರರ ಕಾರ್ಯ ಒತ್ತಡ, ಖಾಲಿ ಇರುವ ಹುದ್ದೆಗಳ ಭರ್ತಿ ಹಾಗೂ ಮತ್ತಿತರ ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ವಿವಿಧ ಸಂಘಟನೆಗಳು ಚುನಾವಣೆ ಕಣಕ್ಕೆ ಇಳಿಯಲಿವೆ.

ಸೌಥ್​ವೆಸ್ಟರ್ನ್ ರೈಲ್ವೆ ಮಜ್ದೂರ ಯೂನಿಯನ್ ತಮ್ಮ ಅಧಿಕಾರದ ಅವಧಿಯಲ್ಲಿ ರೈಲ್ವೆ ನೌಕರರಿಗೆ ತಮ್ಮ ಮಧ್ಯಸ್ಥಿಕೆಯಿಂದ ಒದಗಿಸಿರುವ ಸೌಲಭ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಕಣಕ್ಕೆ ಇಳಿದಿದೆ. ಉಳಿದ ಸಂಘಟನೆಗಳು ಸೌಥ್​ವೆಸ್ಟರ್ನ್ ರೈಲ್ವೆ ಮಜ್ದೂರ ಯೂನಿಯನ್​ನ ವೈಫಲ್ಯಗಳ ಕರಪತ್ರಗಳನ್ನು ಪ್ರಕಟಿಸಿ, ರೈಲ್ವೆ ನೌಕರರ ಮನೆ, ಕಚೇರಿಗಳಲ್ಲಿ ಹಂಚುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಪರ-ವಿರೋಧದ ಚಿತ್ರಗಳು, ವಿಡಿಯೋಗಳು ಹರಿದಾಡುತ್ತಿವೆ.

ಮುಂದಿನ ಐದು ವರ್ಷಗಳವರೆಗೆ ರೈಲ್ವೆ ಇಲಾಖೆಯೊಂದಿಗೆ ಅಧಿಕೃತವಾಗಿ ಮಾತುಕತೆ ನಡೆಸುವ ಹಕ್ಕು ಪಡೆಯುವ ಸಂಘಟನೆ ಯಾವುದು ಎಂಬುದರ ಗುಟ್ಟು ಮತ ಎಣಿಕೆ ಹಾಗೂ ಫಲಿತಾಂಶ ಡಿಸೆಂಬರ್ 12ರಂದು ಬಹಿರಂಗಗೊಳ್ಳಲಿದೆ.

ಶೇ. 30ರಷ್ಟು ಮತ ಪಡೆದರೆ ಗೆಲುವು

ರೈಲ್ವೆ ಯೂನಿಯನ್ ಚುನಾವಣೆಯಲ್ಲಿ ಮತ ಎಣಿಕೆ ಭಿನ್ನವಾಗಿದೆ. ಈ ಚುನಾವಣೆಯಲ್ಲಿ ಒಟ್ಟಾರೆ ಮತದಾನದಲ್ಲಿ ಶೇ. 30 ಹಾಗೂ ಅದಕ್ಕಿಂತ ಹೆಚ್ಚಿನ ಮತ ಪಡೆಯುವವರು ಗೆಲುವು ಸಾಧಿಸುತ್ತಾರೆ. ಯಾವ ಸಂಘಟನೆಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತಾರೋ, ಆ ಸಂಘಟನೆ ಅಧಿಕಾರ ಪಡೆಯುತ್ತದೆ. ರೈಲ್ವೆ ಸಿಬ್ಬಂದಿ ಹಾಗೂ ಸರ್ಕಾರದ ಮಧ್ಯೆ ಮಧ್ಯವರ್ತಿಯಾಗಿ ಈ ಸಂಘಟನೆ ಕಾರ್ಯನಿರ್ವಹಿಸುತ್ತದೆ. ಕಳೆದ ಬಾರಿ ಅಂದರೆ, 2013ರಲ್ಲಿ ಸೌಥ್​ವೆಸ್ಟರ್ನ್ ರೈಲ್ವೆ ಮಜ್ದೂರ ಯೂನಿಯನ್ ಶೇ. 40ಕ್ಕಿಂತ ಹೆಚ್ಚು ಮತ ಗಳಿಕೆಯ ಮೂಲಕ ಗೆಲುವು ಸಾಧಿಸಿತ್ತು.

ಆಲ್ ಇಂಡಿಯಾ ರೈಲ್ವೆ ಫೆಡರೇಷನ್ ಸಹಭಾಗಿತ್ವ ಹಾಗೂ ಜನರಲ್ ಸೆಕ್ರೆಟರಿ ಡಾ. ಎ.ಎಂ. ಡಿಕ್ರೂಜ್ ಅವರ ಮುಂದಾಳತ್ವದಲ್ಲಿ ರೈಲ್ವೆ ನೌಕರರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿದ್ದೇವೆ. ಇದೇ ಕಾರಣದಿಂದ ಈ ಬಾರಿಯೂ ಗೆಲ್ಲುವ ವಿಶ್ವಾಸದಲ್ಲಿದ್ದೇವೆ. | ವಿರೂಪಾಕ್ಷಪ್ಪ ಚಾರ್ಖಾನಿ , ವಲಯ ಖಜಾಂಚಿ, ಸೌಥ್​ವೆಸ್ಟ್​ರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಹಳೇ ಪಿಂಚಣಿ ಮರುಜಾರಿಗೊಳಿಸಬೇಕು, ಖಾಸಗೀಕರಣ ತೆರವುಗೊಳಿಸಬೇಕು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ಸೇರಿದಂತೆ ಹಲವಾರು ಸೌಲಭ್ಯಗಳಿಗೆ ಆಗ್ರಹಿಸಿ ಚುನಾವಣೆ ಕಣಕ್ಕೆ ಇಳಿದಿದ್ದೇವೆ. | ಗಂಗಾಧರ ಬಡಿಗೇರ, ವಲಯ ಜಂಟಿ ಕಾರ್ಯದರ್ಶಿ, ಸೌಥ್ ವೆಸ್ಟರ್ನ್ ರೈಲ್ವೆ ಎಂಪ್ಲಾಯಿಸ್ ಯೂನಿಯನ್