ಹುಬ್ಬಳ್ಳಿ : ರೈಲ್ವೆ ಯೂನಿಯನ್ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಗುರುವಾರ ಎರಡನೇ ದಿನ ಮತದಾನ ನಡೆದಿದ್ದು, ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಶೇ. 84.13ಕ್ಕೆ ತಲುಪಿದೆ.
ಚುನಾವಣೆಯ ಮೊದಲ ದಿನವಾದ ಬುಧವಾರ ಶೇ. 53.35ರಷ್ಟು ಮತದಾನವಾಗಿತ್ತು. ಗುರುವಾರ ಶೇ. 30.78ರಷ್ಟು ಮತದಾನವಾಗಿದೆ. ಡಿ. 6ರಂದು ರನ್ನಿಂಗ್ ಸ್ಟಾಪ್ (ಲೋಕೋಪೈಲಟ್ ಹಾಗೂ ಗಾರ್ಡ್ಸ್) ಮತದಾನ ಮಾಡಲಿದ್ದು, 12ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳಲಿದೆ.
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಒಟ್ಟು 36,935 ಮತದಾರರ ಪೈಕಿ ಗುರುವಾರದವರೆಗೆ 31,074 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕೇಂದ್ರ ಕಚೇರಿಯ 923 ಮತದಾರರಲ್ಲಿ 790 (ಶೇ. 85.59), ಹುಬ್ಬಳ್ಳಿ ವಿಭಾಗದ 12,759 ಮತದಾರರಲ್ಲಿ 10,501 (ಶೇ.82.30), ಬೆಂಗಳೂರು ವಿಭಾಗದ ಒಟ್ಟು 11,461 ಮತದಾರರಲ್ಲಿ 9,476 (ಶೇ. 82.68), ಮೈಸೂರು ವಿಭಾಗದ 7,027 ಮತದಾರರಲ್ಲಿ 5,810 ನೌಕರರು (ಶೇ. 82.68) ಮತ ಚಲಾಯಿಸಿದ್ದಾರೆ.
ಹುಬ್ಬಳ್ಳಿ ವರ್ಕ್ಶಾಪ್ನ 2,886 ಮತದಾರರಲ್ಲಿ 2,729 (ಶೇ. 94.56), ಮೈಸೂರು ವರ್ಕ್ಶಾಪ್ನ 1,580 ಮತದಾರರಲ್ಲಿ 1,530 (ಶೇ. 96.84), ಬೆಂಗಳೂರು ಕಾಂಟೋನ್ಮೆಂಟ್ನ 299 ಮತದಾರರಲ್ಲಿ 238 (ಶೇ. 79.60) ಮತದಾರರು ಮತದಾನ ಮಾಡಿದ್ದಾರೆ.