ಮಂಡ್ಯ: ಹಲವು ವರ್ಷದಿಂದ ನನೆಗುದಿಗೆ ಬಿದ್ದಿದ್ದ ನಗರದ ಮಹಾವೀರ ವೃತ್ತದಿಂದ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ರೂಪಿತವಾದ ಯೋಜನೆಯಂತೆ ಶೀಘ್ರವೇ ಪ್ರಾರಂಭವಾಗಲಿದೆ. ಕೆಲ ಸ್ಥಳೀಯರ ಆಕ್ಷೇಪದ ನಡುವೆಯೂ ಮೂರ‌್ನಾಲ್ಕು ದಿನದಲ್ಲಿ ಕೆಲಸಕ್ಕೆ ಚಾಲನೆ ನೀಡಲಾಗುತ್ತಿದೆ. ಈ ನಡುವೆ ಮಹಾವೀರ ವೃತ್ತದಿಂದ ಪೇಟೆಬೀದಿಗೆ ನೇರವಾಗಿ ಸಂಪರ್ಕ ಕಲ್ಪಿಸಬೇಕೆನ್ನುವುದು ಸದ್ಯಕ್ಕೆ ಸಾಧ್ಯವಾಗದಂತಾಗಿದೆ.
ಕಾಮಗಾರಿ ಆರಂಭ ಸಂಬಂಧ ಶಾಸಕ ಪಿ.ರವಿಕುಮಾರ್ ಗಣಿಗ ಅವರು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಪೌರಾಯುಕ್ತ ಮಂಜುನಾಥ್, ರೈಲ್ವೆ ಅಧಿಕಾರಿಗಳು, ನಗರಸಭೆ ಸದಸ್ಯರು ಹಾಗೂ ವರ್ತಕರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಹಲವು ಮಾಹಿತಿ ಪಡೆದುಕೊಂಡರು. ವಾರದ ಹಿಂದೆ ಎರಡು ಬಾರಿ ಸ್ಥಳ ಪರಿಶೀಲನೆ ನಡೆಸಿ, ವರ್ತಕರ ಸಮಸ್ಯೆಗಳನ್ನು ಆಲಿಸಿದ್ದರು. ಇದೀಗ ರೈಲ್ವೆ ಅಧಿಕಾರಿಗಳೊಂದಿಗೆ ವರ್ತಕರೊಂದಿಗೆ ಚರ್ಚಿಸಿ, ವರ್ತಕರು ಮತ್ತು ಸ್ಥಳೀಯ ಜನರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ನಿರ್ವಹಿಸುವ ಬಗ್ಗೆ ಸಮ್ಮತಿ ಸೂಚಿಸಿದರು. ಅಂತೆಯೇ ಶೀಘ್ರವೇ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಿಂದ ಆರ್ಥಿಕ ಅನುದಾನ ಪಡೆದುಕೊಂಡು ವರ್ತಕರ ಬೇಡಿಕೆಯಂತೆ ಮಹಾವೀರ ವೃತ್ತದಿಂದ ಜೈನರ ಬೀದಿಗೆ ಸಂಪರ್ಕ ಕಲ್ಪಿಸುವ ನೇರ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ರೈಲ್ವೆ ಅಧಿಕಾರಿಗಳು ತಮ್ಮೊಂದಿಗೆ ತಂದಿದ್ದ ರೈಲ್ವೆ ರೋಡ್ ಅಂಡರ್ ಬ್ರಿಡ್ಜ್ ಯೋಜನೆಯ ನೀಲನಕ್ಷೆಯನ್ನು ತೋರಿಸಿ ವಿವರಿಸಿದರು. ಪ್ರಮುಖವಾಗಿ ಕೆಳ ಸೇತುವೆ ನಿರ್ಮಾಣ, ಅದರ ಗುಣಮಟ್ಟ, ಎಷ್ಟು ಹಣ ಖರ್ಚಾಗಲಿದೆ ಎನ್ನುವ ಮಾಹಿತಿಯನ್ನು ನೀಡಿದರು. ಪ್ರಸ್ತುತ ಯೋಜನೆ ರೂಪಿತವಾದಂತೆ ಕಾಮಗಾರಿ ನಡೆಯಲಿದೆ. ಅದರಂತೆ ಮಹಾವೀರ ವೃತ್ತದಿಂದ 30 ಮೀಟರ್ ಜಾಗವನ್ನು ಬಿಟ್ಟು, 60 ಮೀಟರ್ ಅಂಡರ್‌ಪಾಸ್ ನಿರ್ಮಾಣವಾಗಲಿದೆ. ರೈಲ್ವೆ ಹಳಿಗಳನ್ನು ದಾಟಿದ ಬಳಿಕ, ಮಾರುಕಟ್ಟೆಗೆ ಹೋಗುವ ರಸ್ತೆಯ ಕಡೆಗೆ ಅಂಡರ್‌ಪಾಸ್‌ನ ರಸ್ತೆ ಸಾಗಲಿದೆ. ರ‌್ಯಾಂಪ್ ಮಾದರಿಯಲ್ಲಿ ಅಂಡರ್‌ಪಾಸ್ ರಸ್ತೆ ನಿರ್ಮಾಣವಾಗಲಿದೆ. ಮಾರುಕಟ್ಟೆ ಮಾರ್ಗದ ರಸ್ತೆಯಿಂದ ಪೇಟೆಬೀದಿಗೆ ಸರ್ವೀಸ್ ರಸ್ತೆ ಮೂಲಕ ಸಂಪರ್ಕ ಕೊಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.
ಯೋಜನೆಗೆ ಕೆಲವರ ವಿರೋಧ: ಅಧಿಕಾರಿಗಳು ವಿವರಣೆ ನೀಡಿದ ಬಳಿಕ ಒಂದಷ್ಟು ವರ್ತಕರು ಒಪ್ಪಿದರೆ, ಇನ್ನು ಕೆಲವರು ಆಕ್ಷೇಪಿಸಿದರು. ಮಹಾವೀರ ವೃತ್ತದಿಂದ ಜೈನರ ಬೀದಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಿ. ಬೇಕಿದ್ದರೆ ಈಗ ಯೋಜನೆಯಲ್ಲಿರುವಂತೆ ಅಂಡರ್‌ಪಾಸ್ ರಸ್ತೆ ನಿರ್ಮಾಣವಾಗಲಿ. ನೇರ ಸಂಪರ್ಕ ಕಲ್ಪಿಸಿದರೆ ನಮ್ಮ ವ್ಯಾಪಾರ-ವಹಿವಾಟಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಸಮಸ್ಯೆ ವಿವರಿಸಿದರು.
ಆದರೆ, ಈಗ ರೂಪಿತವಾಗಿರುವ ಯೋಜನೆಯ ಹೊರತಾಗಿ ಮತ್ತೊಂದು ರಸ್ತೆ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಇಲಾಖೆಯಿಂದ ಅನುಮೋದನೆ ದೊರೆತಿಲ್ಲ. ಈಗ ಅನುಮೋದನೆ ಆಗಿರುವಂತೆ ಮಾತ್ರ ಕಾಮಗಾರಿ ಮಾಡುತ್ತೇವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು. ಆಗ ಮಧ್ಯೆ ಪ್ರವೇಶಿಸಿದ ಶಾಸಕ ಪಿ.ರವಿಕುಮಾರ್, ನಗರಸಭೆ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಮಹಾವೀರ ವೃತ್ತದಿಂದ ಜೈನರ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸುವ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗುವುದು ಎಂದರು.
ಪೌರಾಯುಕ್ತ ಮಂಜುನಾಥ್ ಮಾತನಾಡಿ, ನೇರ ಸಂಪರ್ಕ ಕಲ್ಪಿಸುವ ರಸ್ತೆ ಮಾಡಲು ನಗರಸಭೆಯಿಂದ ಅಷ್ಟೊಂದು ಹಣವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದಿಂದಲೇ ವಿಶೇಷ ಅನುದಾನ ತರಬೇಕಿದೆ ಎಂದರು. ಶಾಸಕರು ಪ್ರತಿಕ್ರಿಯಿಸಿ, ಈಗಿರುವ ಯೋಜನೆಯ ಜತೆಗೆ ವರ್ತಕರ ಬೇಡಿಕೆಯಂತೆ ರ‌್ಯಾಂಪ್ ಮಾದರಿಯ ನೇರ ರಸ್ತೆ ನಿರ್ಮಾಣಕ್ಕೆ ಎಷ್ಟು ವೆಚ್ಚವಾಗಲಿದೆ. ಎಷ್ಟು ಜಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ ಎಂಬುದರ ಬಗ್ಗೆ ವರದಿ ಕೊಡಿ. ಅದರಂತೆ ಮುಂದೆ ನೋಡೋಣ ಎಂದು ಸೂಚಿಸಿದರು.
ನಗರಸಭೆ ಸದಸ್ಯರಾದ ಶ್ರೀಧರ್, ನಾಗೇಶ್, ಸಹಾಯಕ ಇಂಜಿನಿಯರ್ ರಾಜೇಗೌಡ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಡಾ.ಎಚ್.ಕೃಷ್ಣ ಇತರರಿದ್ದರು.