ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರೈಲ್ವೆ ಸೇವೆ ಅಭಿವೃದ್ಧಿಗೆ ಪೂರಕವಾಗಿ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ನಗರ ಮಾರ್ಗವಾಗಿ ನೂತನ ಹಳಿ ನಿರ್ಮಾಣದ ಅಂತಿಮ ಸರ್ವೇ ಕಾರ್ಯಕ್ಕೆ 1.10 ಕೋಟಿ ರೂ.ಗಳನ್ನು ಕೇಂದ್ರ ರೈಲ್ವೆ ಇಲಾಖೆಯು ಮಂಜೂರು ಮಾಡಿದೆ.ನಾಲ್ಕು ಸರ್ವೇ ಯೋಜನೆಗಳ ಘೋಷಣೆ ಆದೇಶದಲ್ಲಿ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಮಾರ್ಗದ 44 ಕಿ.ಮೀ ಹೊಸ ಮಾರ್ಗ ಹಳಿ ನಿರ್ಮಾಣವೂ ಒಂದಾಗಿದೆ. ಇದಕ್ಕೆ 1.10 ಕೋಟಿ ರೂ. ಮಂಜೂರಾಗಿದೆ.
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕಿಂತ ರೈಲ್ವೆ ಕ್ಷೇತ್ರದಲ್ಲಿ ಗೌರಿಬಿದನೂರು ಹೆಚ್ಚಿನ ಪ್ರಗತಿ ಸಾಧಿಸಿದೆ. ಹಿಂದೂಪುರ, ಅನಂತಪುರ ಸೇರಿ ದೇಶದ ಪ್ರಮುಖ ಸ್ಥಳಗಳಿಗೆ ರೈಲ್ವೆ ಸಂಪರ್ಕ ಹೊಂದಿದೆ. ಇಲ್ಲಿ ಪ್ರತಿನಿತ್ಯ ಅನೇಕ ರೈಲುಗಳು ಸಂಚರಿಸುತ್ತಿರುತ್ತವೆ. ಮತ್ತೊಂದೆಡೆ ರಾಜಧಾನಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ-ಚಿಂತಾಮಣಿ- ಶ್ರೀನಿವಾಸಪುರ ಮಾರ್ಗವಾಗಿ ಕೋಲಾರಕ್ಕೆ 2 ರೈಲುಗಳು ಪ್ರತಿನಿತ್ಯ ಸಂಚರಿಸುತ್ತಿವೆ. ರೈಲ್ವೆ ಸೇವೆ ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ನಡುವೆ ರೈಲು ಸಂಚಾರ ಪ್ರಾರಂಭಿಸಬೇಕೆಂಬ ಒತ್ತಾಯ ಮೊದಲಿನಿಂದಲೂ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಸರ್ವೇ ಈಗಾಗಲೇ ಮುಗಿದಿದ್ದು, ಅಂತಿಮ ಸರ್ವೇ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಅನುಗುಣವಾಗಿ ಕಾಮಗಾರಿ ಮುಗಿದು, ಈ ಎರಡು ನಗರಗಳ ನಡುವೆ ರೈಲುಗಳ ಓಡಾಟ ಪ್ರಾರಂಭವಾದರೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ನೆರೆಯ ರಾಜ್ಯಗಳಿಗೆ ಸಂಪರ್ಕ ಸುಲಭವಾಗಿ ಅಭಿವೃದ್ಧಿ ಹೆಚ್ಚಾಗಲಿದೆ. ಈ ಭಾಗದಿಂದ ಕೃಷಿ ಉತ್ಪನ್ನಗಳು, ವಿವಿಧ ಬಗೆಯ ಸರಕುಗಳನ್ನು ಅತಿ ಕಡಿಮೆ ದರದಲ್ಲಿ ಇತರ ಭಾಗಗಳಿಗೆ ಸಾಗಣೆ ಮಾಡಲು ಸಹಕಾರಿಯಾಗಲಿದೆ.
ಸಾಕಾರಗೊಳ್ಳದ ಸರ್ವೇ ಮಾರ್ಗ: ಚಿಕ್ಕಬಳ್ಳಾಪುರ-ಬಾಗೇಪಲ್ಲಿ-ಪುಟ್ಟಪರ್ತಿ ರೈಲು ಸಂಚಾರ ಪ್ರಾರಂಭವು ಒಂದು ಪ್ರಮುಖ ಬೇಡಿಕೆ. ತಾಲೂಕಿನ ಮುದ್ದೇನಹಳ್ಳಿಯಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆ ಇದೆ. ವಿದೇಶಿಗರು ಸೇರಿ ಪುಟ್ಟಪರ್ತಿ ಭಗವಾನ್ ಸಾಯಿಬಾಬಾರ ಸಾವಿರಾರು ಭಕ್ತರು ಪುಟ್ಟಪರ್ತಿಗೆ ಪ್ರತಿನಿತ್ಯ ಸಂಚರಿಸುತ್ತಿರುತ್ತಾರೆ. ಜತೆಗೆ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿಯ ಸರ್ವಾಂಗೀಣ ಅಭಿವೃದ್ಧಿಗೆ ರೈಲು ಸಂಚಾರ ಸಹಕಾರಿ. ಈ ಹಿನ್ನೆಲೆಯಲ್ಲಿ ಪುಟ್ಟಪರ್ತಿಗೆ ಚಿಕ್ಕಬಳ್ಳಾಪುರದಿಂದ ರೈಲು ಸೇವೆ ಒದಗಿಸಲು ಒತ್ತಾಯಿಸಲಾಗಿದೆ. ಇದಕ್ಕೆ ಮಣಿದು ಸರ್ಕಾರ ರೈಲ್ವೆ ಹಳಿ ನಿರ್ಮಾಣಕ್ಕೆ ಸರ್ವೇ ಕಾರ್ಯವನ್ನು ಕೈಗೊಳ್ಳಲು ಸೂಚಿಸಿದಂತೆ ವರದಿ ತಯಾರಾದರೂ ಯೋಜನೆ ಮಾತ್ರ ಘೋಷಣೆಯಾಗಿಲ್ಲ.
ಗಮನ ಸೆಳೆದಿದ್ದ ಶಾಸಕರು: ಕಳೆದ 2019 ನೇ ಸಾಲಿನ ಜುಲೈನಲ್ಲಿ ಶಾಸಕ ಎನ್.ಎಚ್.ಶಿವಶಂಕರೆಡ್ಡಿ ಅಂದಿನ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ಭೇಟಿ ಮಾಡಿ, ಗೌರಿಬಿದನೂರು-ಚಿಕ್ಕಬಳ್ಳಾಪುರ ನಗರದ ನಡುವೆ ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದರು. ಇದರಿಂದ ದಕ್ಷಿಣ-ಪಶ್ಚಿಮ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ಗೌರಿಬಿದನೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಚರ್ಚೆಯಾಗಿದ್ದು ಇದೀಗ ರೈಲ್ವೆ ಮಾರ್ಗದ ಅಂತಿಮ ಸರ್ವೆಗೆ ಆದೇಶಿಸಲಾಗಿದೆ.
ಸರ್ಕಾರದ ಮೇಲೆ ಒತ್ತಡ ಹೇರಬೇಕು: ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಕೇಂದ್ರ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ಮತ್ತು ಎಂ.ವೀರಪ್ಪ ಮೊಯ್ಲಿ ಒತ್ತಡ ಹೇರಿ ಬಜೆಟ್‌ನಲ್ಲಿ ರೈಲ್ವೆ ಕೆಲ ಯೋಜನೆಗಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ರೈಲ್ವೆ ಅಭಿವೃದ್ಧಿಗೆ ಶುಕ್ರದೆಸೆ ಬಂದಿದೆ ಎಂಬುದಾಗಿ ಇಲ್ಲಿನ ಜನರು ಸಂತಸಗೊಂಡಿದ್ದರು. ಆದರೆ, ಯೋಜನೆಗಳು ಇಂದಿಗೂ ಘೋಷಣೆಯಲ್ಲಿಯೇ ನಿಂತಿವೆ. ಇದರ ಅನುಷ್ಠಾನಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಗಳ ಗಮನ ಸೆಳೆಯಬೇಕಾಗಿದೆ.
ಈ ಹಿಂದೆ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಮಾರ್ಗವಾಗಿ ರೈಲ್ವೆ ಹಳಿ ನಿರ್ಮಾಣದ ವಿಚಾರವಾಗಿ ಸಂಬಂಧಪಟ್ಟ ಕೇಂದ್ರ ಸಚಿವರ ಗಮನ ಸೆಳೆಯಲಾಗಿತ್ತು. ಇದೀಗ ಅಂತಿಮ ಸರ್ವೇಗೆ ಕೇಂದ್ರ ರೈಲ್ವೆ ಇಲಾಖೆ ಆದೇಶಿಸಿರುವುದು ಶ್ಲಾಘನೀಯ. ಈ ಭಾಗದ ಜನರ ಬಹುದಿನಗಳ ಬೇಡಿಕೆಗೆ ತ್ವರಿತವಾಗಿ ಅನುಮೋದನೆ ಸಿಗುವ ನಿರೀಕ್ಷೆ ಇದೆ.ಎನ್.ಎಚ್.ಶಿವಶಂಕರರೆಡ್ಡಿ, ಗೌರಿಬಿದನೂರು ಶಾಸಕ
ಈ ಭಾಗದ ಜನಪ್ರತಿನಿಧಿಗಳು ನಿರೀಕ್ಷೆಯ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಮರ್ಪಕವಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇರುವ ಹಳೇ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಚಿಕ್ಕಬಳ್ಳಾಪುರ ಮತ್ತು ಪುಟ್ಟಪರ್ತಿ ನಡುವೆ ನೂತನ ರೈಲು ಹಳಿ ನಿರ್ಮಾಣ ಸೇರಿ ಹಲವು ಬೇಡಿಕೆಗಳು ಸಾಕಾರಗೊಳ್ಳಲು ಶ್ರಮಿಸಬೇಕು. ಇನ್ನು ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಮಾರ್ಗವಾಗಿ ರೈಲ್ವೆ ಹಳಿ ನಿರ್ಮಾಣದ ಅಂತಿಮ ಸರ್ವೇಗೆ ಮುಂದಾಗಿರುವುದು ಒಳ್ಳೆಯದು. ಹಾಗೆಯೇ ತ್ವರಿತವಾಗಿ ಕೆಲಸವೂ ಮುಗಿಯಬೇಕು.ಕಿರಣ್, ರೈಲ್ವೆ ಪ್ರಯಾಣಿಕ