ಜಿಲ್ಲೆ

ಹಣವಿದ್ದವರಿಗೆ ದಕ್ಕದ ರೈಲ್ವೆ ಟಿಕೆಟ್

ಕೋಲಾರ ಡೆಸ್ಕ್

ಕ್ಯುಆರ್ ಕೋಡ್ ಇದ್ದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ, ರೈತ ಸಂಘದ ಪದಾಧಿಕಾರಿಗಳ ಆಕ್ರೋಶ

ಬಂಗಾರಪೇಟೆ: ಪಟ್ಟಣದ ರೈಲ್ವೆ ಟಿಕೆಟ್ ಕೌಂಟರ್‌ನಲ್ಲಿ ನಗದು ಸಹಿತ ಟಿಕೆಟ್ ನೀಡದೆ ಕೇವಲ ಕ್ಯೂಆರ್ ಕೋಡ್‌ಗೆ ವಾತ್ರ ಟಿಕೆಟ್ ನೀಡುತ್ತಿರುವುದನ್ನು ಖಂಡಿಸಿ ಪಟ್ಟಣದ ರೈಲ್ವೆ ಜಂಕ್ಷನ್ ಮುಂಭಾಗ ರೈತ ಮುಖಂಡ ರಾಮೇಗೌಡ ನೇತೃತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಭಾನುವಾರ ಪ್ರತಿಭಟನೆ ನಡೆಸಿದರು.

ನಿತ್ಯ ಅವಿದ್ಯಾವಂತರು, ವಿದ್ಯಾರ್ಥಿಗಳು, ವೃದ್ಧರು, ಅಂಗವಿಕಲರು ಹಾಗೂ ಸಾರ್ವಜನಿಕರು ರೈಲು ಪ್ರಯಾಣ ಮಾಡಬೇಕಾದರೆ ನಿಲ್ದಾಣಕ್ಕೆ ಬಂದ ನಂತರ ಇಲಾಖೆ ತೆಗೆದುಕೊಂಡಿರುವ ನಿರ್ಧಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಮೊಬೈಲ್ ಬಳಸಲು ಬಾರದ ವೃದ್ಧರ ಪರಿಸ್ಥಿತಿ, ಬಳಸಲು ಬಂದರೂ ಮೊಬೈಲ್ ಬಳಕೆಗೆ ಅವಕಾಶವಿಲ್ಲದ ವಿದ್ಯಾರ್ಥಿಗಳ ಪರಿಸ್ಥಿತಿ ಹೇಳತೀರದಾಗಿದೆ. ಹಣ ನೀಡಿ ಟಿಕೆಟ್ ಖರೀದಿಸಲು ಹೋದಾಗ ಟಿಕೆಟ್ ಸೌಲಭ್ಯವಿಲ್ಲ ಎಂದು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಟಿಕೆಟ್‌ಗಾಗಿ ಬರುವ ಪ್ರಯಾಣಿಕರೆಲ್ಲರ ಬಳಿ ಸ್ಮಾರ್ಟ್ ಫೋನ್ ಇರುವುದಿಲ್ಲ. ಇದ್ದರೂ ಯುಪಿಐ ವಹಿವಾಟು ಇರುವುದಿಲ್ಲ. ಆದರೆ, ಟಿಕೆಟ್ ಕೌಂಟರ್‌ನಲ್ಲಿ ೆನ್‌ಪೇ, ಗೂಗಲ್‌ಪೇ, ಭಾರತ್‌ಪೇ ಬಳಸಿ ಕ್ಯುಆರ್ ಕೋಡ್ ಮೂಲಕ ಟಿಕೆಟ್ ನೀಡುತ್ತಿರುವುದರಿಂದ ಹಣ ನೀಡುವ ಪ್ರಯಾಣಿಕರು ಟಿಕೆಟ್ ಸಿಗದೆ ವಾಪಸ್ ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡೆಮೋ ರೈಲುಗಳಲ್ಲಿ ಮೂಲ ಸೌಲಭ್ಯ ಮರೀಚಿಕೆಯಾಗಿದೆ. ರೈಲುಗಳ ಶೌಚಗೃಹಗಳಲ್ಲಿ ನೀರೇ ಇರುವುದಿಲ್ಲ. ಸ್ವಚ್ಛತೆ ಇಲ್ಲದೆ ದುರ್ನಾತ ಬೀರುತ್ತಿದೆ. ನಿತ್ಯ ಸುವಾರು 30ಸಾವಿರ ಜನ ಬೆಂಗಳೂರಿಗೆ ಕೆಲಸಕ್ಕೆಂದು ಓಡಾಡುತ್ತಿದ್ದಾರೆ. ಇದೆಲ್ಲವನ್ನು ಗಮನದಲ್ಲಿರಿಸಿಕೊಂಡು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಮುರಳಿ, ರವಿ, ಗೋವಿಂದಪ್ಪ, ನಾರಾಯಣಸ್ವಾಮಿ, ರಮೇಶ, ಅಶ್ವತ್ಥಪ್ಪ, ಜೈರಾಮರೆಡ್ಡಿ, ಯಲ್ಲಪ್ಪ, ಚಲಪತಿ, ರಾಜಪ್ಪ, ಬಸಪ್ಪ, ವೆಂಕಟಸ್ವಾಮಿ ಇದ್ದರು.