ಬೆಂಗಳೂರು-ಮಂಗಳೂರು ರೈಲಿನಲ್ಲಿ ಸೆಪ್ಟೆಂಬರ್ 11ಕ್ಕೆ ಟಿಕೆಟ್ ಆರ್‌ಎಸಿಗೆ ಬಂದಿರುವುದು.
- ಎರಡು ತಿಂಗಳು ಮೊದಲೇ ಕೋಟಾ ಭರ್ತಿ
- ಪ್ರಯಾಣಿಕರು ಕಂಗಾಲು
ಪುತ್ತೂರು: ಸೆಪ್ಟೆಂಬರ್ ತಿಂಗಳಿನಲ್ಲಿ ಗಣೇಶ ಚತುರ್ಥಿ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಬೆಂಗಳೂರಿನಿಂದ ಊರುಗಳಿಗೆ ಪ್ರಯಾಣಿಸುವ ಕರಾವಳಿ ಭಾಗದ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ. ಆದರೆ, ಇದಕ್ಕೆ ಪೂರಕವಾಗಿ ಸಾರಿಗೆ ಸೌಕರ್ಯಗಳ ಕೊರತೆ ಎದುರಾಗಿದ್ದು, ಪ್ರಯಾಣಿಕರು ತೀವ್ರ ಕಂಗಾಲಾಗಿದ್ದಾರೆ. ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಚರಿಸುವ ಆರು ರೈಲುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೋಟಾಗಳು ಈಗಾಗಲೇ ಭರ್ತಿಯಾಗಿದ್ದು, ಸಾರ್ವಜನಿಕರು ಹೆಚ್ಚುವರಿ ವ್ಯವಸ್ಥೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಎರಡು ಗಂಟೆಯಲ್ಲೇ ಟಿಕೆಟ್ ಸ್ಲಾಟ್ ಭರ್ತಿ: ಬೆಂಗಳೂರಿನಿಂದ ರಾತ್ರಿ 9.45ಕ್ಕೆ ಹೊರಟು ಪುತ್ತೂರಿಗೆ ಬೆಳಗ್ಗೆ 6 ಗಂಟೆಗೆ ತಲುಪುವ ಎಸ್‌ಬಿಸಿ ಸಿಎಲ್‌ಟಿ ಎಕ್ಸ್‌ಪ್ರೆಸ್ ರೈಲು ಜಿಲ್ಲೆಯ ಜನರಿಗೆ ಹೆಚ್ಚು ಅನುಕೂಲಕರವಾಗಿದೆ. ಜು.13ರಂದು(ಸೋಮವಾರ) ಬೆಳಗ್ಗೆ 8 ಗಂಟೆಗೆ ಸೆಪ್ಟೆಂಬರ್ ತಿಂಗಳ ಟಿಕೆಟ್ ಬುಕಿಂಗ್ ಸ್ಲಾಟ್ ತೆರೆದ ಕೇವಲ ಎರಡು ಗಂಟೆಗಳ ಅವ˜ಯಲ್ಲಿ ಟಿಕೆಟ್‌ಗಳು ಭರ್ತಿಯಾಗಿ, ಆರ್‌ಎಸಿ ಹಂತಕ್ಕೆ ತಲುಪಿದೆ. ಇನ್ನು ಮೈಸೂರು ಮೂಲಕ ಸಂಚರಿಸುವ ಹಾಗೂ ಕಾರವಾರಕ್ಕೆ ಹೋಗುವ ರೈಲುಗಳ ಸಮಯ ಉದ್ಯೋಗಿಗಳಿಗೆ ಪೂರಕವಾಗಿಲ್ಲದ ಕಾರಣ, ಪ್ರಯಾಣಿಕರು ಪರದಾಡುವಂತಾಗಿದೆ.
ದ.ಕ. ಇಲಾಖೆಯ ನಿರ್ಲಕ್ಷ್ಯ?: ಕೇರಳ ಹಾಗೂ ಕಾರವಾರ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ರೈಲ್ವೆ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೇರಳದ ರೈಲನ್ನು ಕಾಞಂಗಾಡಿನಿಂದ ಕೋಜಿಕ್ಕೋಡ್‌ಗೆ ವಿಸ್ತರಿಸಿದ್ದರಿಂದ ಸ್ಥಳೀಯ ರಿಸರ್ವೇಶನ್ ಪ್ರಮಾಣದ ಮೇಲೆ ಪರಿಣಾಮ ಬೀರಿದೆ. ಇದರೊಂದಿಗೆ, ಕರಾವಳಿ ಭಾಗಕ್ಕೆ ಸಂಚರಿಸುವ ಖಾಸಗಿ ಬಸ್‌ಗಳ ಲಾಬಿಯಿಂದಾಗಿಯೇ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿಲ್ಲ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಮುಂಗಡ ಬುಕಿಂಗ್ ಈಗಾಗಲೇ ಮುಗಿದಿರುವುದರಿಂದ ರೈಲ್ವೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಬಸ್ ದರ ಸಮರ: ಹಬ್ಬಗಳ ಸಂದರ್ಭದಲ್ಲಿ ರೈಲು ಟಿಕೆಟ್ ಸಿಗದೆ ಖಾಸಗಿ ಬಸ್‌ಗಳಿಗೂ ಬೇಡಿಕೆ ಹೆಚ್ಚಿರುವ ಕಾರಣ ದರ ಸಮರ ಆರಂಭವಾಗುತ್ತದೆ. ಬೆಂಗಳೂರಿನಿಂದ ಕುಟುಂಬ ಸಮೇತರಾಗಿ ಊರಿಗೆ ಬಂದು ಹೋಗಲು ಕನಿಷ್ಠ 5 ರಿಂದ 10 ಸಾವಿರ ರೂಪಾಯಿ ವೆಚ್ಚ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಕೊನೆಯ ಕ್ಷಣದಲ್ಲಿ ವಿಶೇಷ ರೈಲುಗಳನ್ನು ಘೊಷಿಸುವುದರಿಂದ ಪ್ರಯಾಣಿಕರಲ್ಲಿ ಗೊಂದಲ ಉಂಟಾಗುತ್ತದೆ.
ಹೊಂದಾಣಿಕೆಯಾಗದ ರೈಲು ಸಂಚಾರ ಸಮಯ
ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಪ್ರಸ್ತುತ ಇರುವ ರೈಲುಗಳ ಸಮಯ ಲಾಭದಾಯಕವಾಗಿಲ್ಲ. ಉದ್ಯೋಗಿಗಳಿಗೆ ರಾತ್ರಿ ಅವ˜ಯ ರೈಲುಗಳು ಅನುಕೂಲಕರವಾಗಿದ್ದರೂ, ಪ್ರಸ್ತುತ ಸಂಚರಿಸುತ್ತಿರುವ 3 ರೈಲುಗಳು ಇಂಜಿನ್ ಬದಲಾವಣೆಗಾಗಿಯೇ ಸುಮಾರು 1.5 ಗಂಟೆ ಸಮಯ ತೆಗೆದುಕೊಳ್ಳುತ್ತಿವೆ. ಸಮಯವನ್ನು ಪ್ರಯಾಣಿಕರ ಅನುಕೂಲಕ್ಕೆ ಬೇಕಾದಂತೆ ಹೊಂದಾಣಿಕೆ ಮಾಡಬೇಕಾಗಿದೆ. ಕೆಲವು ರೈಲುಗಳು ಮಧ್ಯರಾತ್ರಿ ತಲುಪುವುದರಿಂದ ಮನೆಗಳಿಗೆ ತೆರಳಲು ಕಷ್ಟಕರವಾಗಿದೆ.
ಉದ್ಯೋಗಿಗಳಿಗೆ ಭರ್ಜರಿ ರಜೆ
ಸೆಪ್ಟೆಂಬರ್ ತಿಂಗಳಿನಲ್ಲಿ ಎರಡನೇ ಶನಿವಾರ ಮತ್ತು ಭಾನುವಾರದ ರಜೆಯ ಬೆನ್ನಲ್ಲೇ ಸೋಮವಾರ ವಿನಾಯಕ ಚತುರ್ಥಿ ಇರುವುದರಿಂದ ಬೆಂಗಳೂರಿನ ಐಟಿ ಹಾಗೂ ಇತರೆ ಉದ್ಯೋಗಿಗಳಿಗೆ ಸರಣಿ ರಜೆ ಸಿಗಲಿದೆ. ಈ ರಜೆಯನ್ನು ಊರಿನಲ್ಲಿ ಕಳೆಯಲು ಉದ್ಯೋಗಿಗಳು ಉತ್ಸುಕರಾಗಿದ್ದು, ಶುಕ್ರವಾರ ರಾತ್ರಿಯ ರೈಲು ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದಿದ್ದಾರೆ. ಇದರ ಪರಿಣಾಮವಾಗಿ ಸೆ.11ರ ಪ್ರಯಾಣದ ಟಿಕೆಟ್‌ಗಳು ಈಗಾಗಲೇ ವೇಟಿಂಗ್ ಲಿಸ್ಟ್ ಹಾಗೂ ಆರ್‌ಎಸಿ ತಲುಪಿವೆ. ಘಾಟಿ ಪ್ರದೇಶದ ಸುರಕ್ಷತೆ ಮತ್ತು ಪ್ಲಾಟ್ ಫಾರ್ಮ್ ಸಮಸ್ಯೆಗಳ ಕಾರಣವನ್ನು ನೀಡಿ ರೈಲುಗಳಿಗೆ ಹೆಚ್ಚಿನ ಬೋಗಿಗಳನ್ನು ಸೇರಿಸಲು ಇಲಾಖೆ ಮುಂದಾಗುತ್ತಿಲ್ಲ.
"
ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದ್ದರೂ, ಅದಕ್ಕೆ ಬೇಕಾದಂತೆ ಇಲಾಖೆ ಸೌಕರ್ಯ ಒದಗಿಸುತ್ತಿಲ್ಲ. ರಾಜ್ಯ ರಾಜಧಾನಿಯಿಂದ ಕರಾವಳಿಗೆ ಸಂಪರ್ಕಿಸುವ ರೈಲುಗಳನ್ನು ಬೇರೆ ಕಡೆಗೆ ವಿಸ್ತರಣೆ ಮಾಡಿದ್ದರಿಂದ ಸ್ಟೇಷನ್‌ಗಳ ರಿಸರ್ವೇಶನ್ ಕಡಿಮೆಯಾಗಿದೆ. ಹಬ್ಬಗಳ ಸಂದರ್ಭದಲ್ಲಿ ಹೆಚ್ಚುವರಿ ರೈಲು, ಬೋಗಿಗಳನ್ನು ಅಳವಡಿಸಿದರೂ ಸಾಕಾಗುತ್ತಿಲ್ಲ. ಈ ಕಾರಣಕ್ಕೆ ಮಂಗಳೂರು - ಬೆಂಗಳೂರು ಇಂಟರ್ ಸಿಟಿ ರೈಲುಗಳನ್ನು ಆರಂಭಿಸಬೇಕು.
— ರಾಜೇಶ್ ಕೃಷ್ಣಪ್ರಸಾದ್, ರೈಲ್ವೆ ಹೋರಾಟಗಾರರು