ಜಿಲ್ಲೆ

2027ಕ್ಕೆ ರೈಲ್ವೆ ಯೋಜನೆ ಪೂರ್ಣ

ತುಮಕೂರು ಡೆಸ್ಕ್

ತುಮಕೂರು&-ಚಿತ್ರದುರ್ಗ, ತುಮಕೂರು&-ರಾಯದುರ್ಗ ಮಾರ್ಗದ ಮಾಹಿತಿ ನೀಡಿದ ಸೋಮಣ್ಣ

ವಿಜಯವಾಣಿ ಸುದ್ದಿಜಾಲ ತುಮಕೂರು
ತುಮಕೂರು-&ದಾವಣಗೆರೆ ಹಾಗೂ ತುಮಕೂರು &ರಾಯದುರ್ಗ ರೈಲ್ವೆ ಯೋಜನೆ 2027ರ ಜನವರಿ ಹೊತ್ತಿಗೆ ಪೂರ್ಣಗೊಳ್ಳಲಿದ್ದು ಭೂಸ್ವಾಧಿನ ಪ್ರಕ್ರಿಯೆ ಚುರುಕುಗೊಂಡಿದೆ. ರೈಲ್ವೆ ಯೋಜನೆ ಕಾಮಗಾರಿಗೆ ಇನ್ನಷ್ಟು ವೇಗ ದೊರೆಯಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.


ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ತುಮಕೂರು&ದಾವಣಗೆರೆ, ತುಮಕೂರು& ರಾಯದುರ್ಗ ರೈಲ್ವೆ ಯೋಜನೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಭೂಸ್ವಾಧಿನಾ ಪ್ರಕ್ರಿಯೆ ವಿಳಂಬವಾಗಿದ್ದು ಈಗ ವೇಗ ನೀಡಲಾಗಿದೆ. ಈಗಾಗಲೇ ರೈಲ್ವೆಗೆ ಜಾಗವನ್ನು ಹಸ್ತಾಂತರಿಸಲಾಗಿದೆ. ಇನ್ನು ಕೇವಲ ಶೇ.2ರಷ್ಟು ಭೂಮಿ ಹಸ್ತಾಂತರಿಸುವ ಕೆಲಸ ಮಾತ್ರ ಬಾಕಿ ಇದೆ. ಈ ಕಾರ್ಯವನ್ನು ಬೇಗ ಮುಗಿಸಿ ನಿಗದಿತ ಅವಧಿಯೊಳಗೆ ರೈಲ್ವೆ ಯೋಜನೆಗಳನ್ನು ಮುಗಿಸಲಾಗುವುದು ಎಂದು ತಿಳಿಸಿದರು.


ತುಮಕೂರು&ರಾಯದುರ್ಗ ರೈಲ್ವೆ ಯೋಜನೆ ಆಂಧ್ರಪ್ರದೇಶ ಭಾಗದಿಂದ ಪೂರ್ಣಗೊಂಡಿದೆ. ರಾಜ್ಯದ ಕಡೆ ಭೂಸ್ವಾಧಿನ ಪ್ರಕ್ರಿಯೆ ವಿಳಂಬವಾಗಿದೆ. ಪಾವಗಡ&ದೊಡ್ಡಹಳ್ಳಿ ನಡುವೆ ಶೇ.97ರಷ್ಟು ಭೂಮಿ ಬೇಕಿದ್ದು ಆದಷ್ಟು ಬೇಗ ಭೂಸ್ವಾಧಿನ ಪ್ರಕ್ರಿಯೆಗೆ ವೇಗ ನೀಡಲಾಗುವುದು. ತುಮಕೂರು&ಊರುಕೆರೆ, ಊರುಕೆರೆ&ಕೊರಟಗೆರೆ ನಡುವೆ ಶೇ.100 ರಷ್ಟು ಭೂಸ್ವಾಧಿನ ಪ್ರಕ್ರಿಯೆ ಮುಗಿದಿದ್ದು, ಆದಷ್ಟು ಬೇಗ ಟೆಂಡರ್​ ಕರೆಯಲಾಗುವುದು. ಇನ್ನೂ ಚಿತ್ರದುರ್ಗ ವ್ಯಾಪ್ತಿಯಲ್ಲಿ 250 ಎಕರೆ, ದಾವಣಗೆರೆ ವ್ಯಾಪ್ತಿಯಲ್ಲಿ 15 ಎಕರೆ ಭೂಸ್ವಾಧಿನ ಮತ್ತು ಹಸ್ತಾಂತರ ಬಾಕಿ ಇದೆ. ಇದನ್ನು ಪೂರ್ಣಗೊಳಿಸಿ ಕಾರ್ಯಯೋಜನೆಗೆ ವೇಗ ನೀಡಲಾಗುವುದು ಎಂದರು.


ತುಮಕೂರು&-ಅರಸೀಕೆರೆ ಮಾರ್ಗದಲ್ಲಿ 220 ಕೋಟಿ ರೂ.,ಗಳ ವೆಚ್ಚದಲ್ಲಿ ಸ್ವಯಂಚಾಲಿತ ಸಿಗ್ನಲ್​ ಅಳವಡಿಕೆ ಕಾರ್ಯ ಮಾಡಲಾಗುವುದು. ಇದೂ ಸೇರಿದಂತೆ ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಮತ್ತಷ್ಟು ಯೋಜನೆಗಳಿಗೆ ಪ್ರಸ್ತಾಪ ನೀಡಲಾಗುವುದು. ತುಮಕೂರಿಗೆ ಮತ್ತಷ್ಟು ಕೊಡುಗೆ ನೀಡುವ ಉದ್ದೇಶ ಇದೆ. ಇದಕ್ಕಾಗಿ ಕೇಂದ್ರದ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಲಾಗುವುದು. ಅ.4 ರಂದು ಸಂಜೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್​ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು, ಶನಿವಾರ ಸಬ್​ ಅರ್ಬನ್​, ಸರ್ಕಿಲರ್​, ಮೆಟ್ರೋ ಪರಿಶೀಲನೆ ಮಾಡುವರು ಎಂದು ಸೋಮಣ್ಣ ಮಾಹಿತಿ ನೀಡಿದರು.


ನೈರ್ಮಲ್ಯ, ಸ್ವಚ್ಛತೆಗೆ ಕೇಂದ್ರ ಸರ್ಕಾರ ಹೆಚ್ಚು ಆದ್ಯತೆ ನೀಡಿದ್ದು, ಬಯಲುಮುಕ್ತ ಶೌಚಗೃಹ ವ್ಯವಸ್ಥೆಗೆ ಮುಂದಾಗಿದೆ. ಈಗಾಗಲೇ ಶೇ.100 ರಷ್ಟು ಗುರಿ ಸಾಧಿಸಲಾಗಿದೆ. ಸಾಲಿಡ್​ ವೇಸ್ಟ್​ ಮ್ಯಾನೇಜ್​ಮೆಂಟ್​ ಯೋಜನೆಯಡಿ ಪ್ರತಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಯೋಜನೆ ಪ್ರಾರಂಭವಾಗಿದ್ದು, ಜೆಜೆಎಂ ಇದರ ಒಂದು ಭಾಗ. ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಕುಡಿಯುವ ನೀರು ಕೊಡಬೇಕೆಂಬುದು ಕೇಂದ್ರ ಸರ್ಕಾರದ ಒಂದು ಯೋಜನೆ ಎಂದು ಅವರು ವಿವರಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್​, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು,ನೈರುತ್ಯ ರೈಲ್ವೆ ಸಿಎಒ ಅಜಯ್​ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

ಅಮಾನಿಕೆರೆ ನೀರು ಕಲುಷಿತ: ಅಮಾನಿಕೆರೆ ನೀರಿನೊಳಗೆ ಗಲೀಜು ನೀರು ಬರುತ್ತಿದೆ. ವಾಸನೆಯೂ ಇದೆ. ಕೂಡಲೇ ಸಂಬಂಧಪಟ್ಟ ತಾಂತ್ರಿಕ ಅಧಿಕಾರಿಗಳನ್ನು ಕರೆಯಿಸಿ ಇದಕ್ಕೊಂದು ರೂಪ ಕೊಡಬೇಕು. ಸಾಕಷ್ಟು ಹಣವಿದೆ. ಅದನ್ನು ಬಳಸಿಕೊಂಡು ಕೆರೆ ನೀರು ಶುದ್ಧೀಕರಣಕ್ಕೆ ಕ್ರಮವಹಿಸಿ. ಮುಂದಿನ ದಿನಗಳಲ್ಲಿ ಇದು ಸರಿಯಾಗುವ ಭರವಸೆ ಇದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

ಆದಷ್ಟು ಬೇಗ ಟೆಂಡರ್​: ತುಮಕೂರು&ರಾಯದುರ್ಗ ರೈಲ್ವೆ ಯೋಜನೆ ಒಟ್ಟು 206 ಕಿ.ಮೀ., ಇದ್ದು ಕಲ್ಯಾಣದುರ್ಗ ಮಾರ್ಗದಲ್ಲಿ ಈ ಯೋಜನೆ ಹಾದು ಹೋಗಲಿದೆ.ತುಮಕೂರು ಜಿಲ್ಲೆಯ 8 ನಿಲ್ದಾಣ ಹಾಗೂ ಆಂಧ್ರಪ್ರದೇಶ ಭಾಗದಲ್ಲಿ 7 ನಿಲ್ದಾಣಗಳಿವೆ. ದೊಡ್ಡಹಳ್ಳಿ&ರಾಯದುರ್ಗ ನಡುವೆ 83 ಕಿ.ಮೀ., ಮಾರ್ಗ ಪೂರ್ಣಗೊಂಡಿದೆ. ತುಮಕೂರು&ಊರುಕೆರೆ, ಊರುಕೆರೆ&ಕೊರಟಗೆರೆ ನಡುವೆ ಶೇ.100 ರಷ್ಟು ಭೂಸ್ವಾಧಿನ ಪ್ರಕ್ರಿಯೆ ಮುಗಿದಿದ್ದು ಆದಷ್ಟು ಬೇಗ ಟೆಂಡರ್​ ಕರೆಯಲಾಗುವುದು. ಕೊರಟಗೆರೆ&ಮಧುಗಿರಿ, ಮಧುಗಿರಿ&ಮಡಕಶಿರಾ ನಡುವೆ ಶೇ.91ರಷ್ಟು ಭೂಸ್ವಾಧಿನ ಮಾಡಲಾಗಿದೆ. ಅಲ್ಲದೆ, ಪಾವಗಡ&ದೊಡ್ಡಹಳ್ಳಿ ನಡುವೆ ಶೇ.97ರಷ್ಟು ಭೂ ಸ್ವಾಧಿನ ಮಾಡಬೇಕಿದ್ದು ರೈಲ್ವೆ ಯೋಜನೆ ಪ್ರಗತಿಯ ಅಂಶವನ್ನು ಸಚಿವರ ಗಮನಕ್ಕೆ ತರಲಾಯಿತು.