ಜಿಲ್ಲೆ

ನೈಋತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆ

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ 23ನೇ ಸಭೆ ನಗರದಲ್ಲಿ ಮಂಗಳವಾರ ನಡೆಯಿತು.

ರೈಲ್ವೆ ಬಳಕೆದಾರರೊಂದಿಗೆ ಉತ್ತಮ ಪ್ರಾತಿನಿಧ್ಯ ಮತ್ತು ಸಮಾಲೋಚನೆಗಾಗಿ ಆಯೋಜಿಸಿದ್ದ ಈ ಸಭೆಯ ಅಧ್ಯಕ್ಷತೆಯನ್ನು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ವಹಿಸಿದ್ದರು.

ಪ್ರಯಾಣಿಕರ ಸೌಕರ್ಯಗಳು, ರೈಲು ಸೇವೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿವರವಾಗಿ ರ್ಚಚಿಸಲಾಯಿತು.

2022-23ರಲ್ಲಿ ಪ್ರಮುಖ ಕಾರ್ಯಕ್ಷಮತೆ ಸೂಚ್ಯಂಕಗಳ (ಕೆಪಿಐ) ವಿಷಯದಲ್ಲಿ ಇತರ ವಲಯಗಳಿಗೆ ಹೋಲಿಸಿದರೆ ನೈಋತ್ಯ ರೈಲ್ವೆ ವಲಯ ಮೊದಲ ಸ್ಥಾನದಲ್ಲಿದೆ.ರೈಲ್ವೆ ಸಚಿವಾಲಯವು ’ಸ್ವಚ್ಛತಾ ಪಖ್ವಾಡಾ 2022’ ಸಮಯದಲ್ಲಿ ನೖಋತ್ಯ ರೈಲ್ವೆಯನ್ನು ಅತ್ಯುತ್ತಮ ಕಾರ್ಯಕ್ಷಮತೆಯ ರೈಲ್ವೆ ವಲಯ ಎಂದು ಪರಿಗಣಿಸಲಾಗಿದೆ. ವಾಸ್ಕೊ, ಮೈಸೂರು ಮತ್ತು ಎಸ್.ಎಸ್.ಎಸ್ ಹುಬ್ಬಳ್ಳಿ ಸೇರಿದಂತೆ ನೈಋತ್ಯ ರೈಲ್ವೆಯ 50ಕ್ಕೂ ಹೆಚ್ಚು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದು ಸಂಜೀವ ಕಿಶೋರ ಇದೇ ಸಂದರ್ಭದಲ್ಲಿ ತಿಳಿಸಿದರು.

ಹಬ್ಬ ಮತ್ತು ರಜಾದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 83 ವಿಶೇಷ ರೈಲುಗಳು ಮತ್ತು 1,798 ಹೆಚ್ಚುವರಿ ಬೋಗಿಗಳನ್ನು ರೈಲುಗಳಿಗೆ ಜೋಡಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಶೇ. 71 ರಷ್ಟು ವಿದ್ಯುದ್ದೀಕರಿಸಲಾಗಿದೆ. 2022-23ರಲ್ಲಿ 228 ಕಿ.ಮೀ ಹೊಸ ಮಾರ್ಗ ಮತ್ತು ಜೋಡಿ ಮಾರ್ಗ ಮತ್ತು 874 ಕಿಮೀ ವಿದ್ಯುದೀಕರಣ (ಒಂದು ವರ್ಷದಲ್ಲಿ ಅತ್ಯಧಿಕ ದಾಖಲೆ) ಮಾಡಲಾಗಿದೆ ಎಂದು ವಿವರಿಸಿದರು.

ರಾಜ್ಯಸಭೆ ಸದಸ್ಯ ನಾರಾಯಣ ಕೊರಗಪ್ಪ, ಗೋವಾ ಸಚಿವ ನಿಲೇಶ ಕಬ್ರಾಲ್, ಸಮಿತಿ ಸದಸ್ಯರಾದ ಜಿ.ಕೆ. ಆದಪ್ಪಗೌಡರ, ವೇಣು ಯಾದವ, ರವಿಕುಮಾರ್ ವೇಮುಲಪಲ್ಲಿ, ದಾಮೋದರದಾಸ ರಾಠಿ, ವಿನಯ ಜವಳಿ, ಎಂ. ಬಾಬು ರಾವ್, ದೇವಾನಂದ ನಾಯ್ಕ, ಕೆ.ವಿ. ವಸಂತ ಕುಮಾರ, ಮಹೇಂದ್ರ ಸಿಂಘಿ, ಸುರೇಶ ಕುಮಾರ, ಮಾರ್ಚಲ ಸುಕುಮಾರ, ಕ್ಯಾಪ್ಟನ್ ಹಿಮಾಂಶು ಶೇಖರ, ಪಿ.ಕೆ. ದೖವಸಿಗಮಣಿ, ಕೃಷ್ಣಮೂರ್ತಿ ಪಿ. ಮತ್ತು ಪ್ರಸಾದ್ ಕುಲಕರ್ಣಿ ಸಭೆಯಲ್ಲಿ ಭಾಗವಹಿಸಿದ್ದರು.

ರೈಲ್ವೆ ವಲಯದ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಯು. ಸುಬ್ಬರಾವ್ ಹಾಗೂ ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.