ಹುಬ್ಬಳ್ಳಿ: ಇಲ್ಲಿನ ಉಣಕಲ್ಲನಿಂದ ಹುಬ್ಬಳ್ಳಿಯವರೆಗೆ ನಿರ್ವಣಗೊಳ್ಳುತ್ತಿರುವ ದ್ವಿಪಥ ರೈಲು ಮಾರ್ಗದ ಕಾಮಗಾರಿಯನ್ನು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಶುಕ್ರವಾರ ಪರಿಶೀಲಿಸಿದರು. ಹೊಸಪೇಟೆ-ತಿನೈಘಾಟ್- ವಾಸ್ಕೋ-ಡ-ಗಾಮಾ ದ್ವಿಪಥ ಮಾರ್ಗ ನಿರ್ಮಾಣ ಕಾಮಗಾರಿ ಯೋಜನೆಯಡಿ ಹುಬ್ಬಳ್ಳಿ- ಧಾರವಾಡ ಮಾರ್ಗವೂ ದ್ವಿಪಥಗೊಳ್ಳುತ್ತಿದೆ. ಈಗಾಗಲೇ ಧಾರವಾಡ-ನವಲೂರ-ಉಣಕಲ್ಲ (17 ಕಿ.ಮೀ.) ಮಾರ್ಗ ದ್ವಿಪಥಗೊಂಡಿದ್ದು, ಉಣಕಲ್ಲನಿಂದ ಹುಬ್ಬಳ್ಳಿವರೆಗಿನ 4 ಕಿ.ಮೀ. ಉದ್ದದ ಮಾರ್ಗ ದ್ವಿಪಥ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಉಣಕಲ್ಲನಲ್ಲಿ ನಿರ್ವಣಗೊಳ್ಳುತ್ತಿರುವ ನಿಲ್ದಾಣದ ಹೊಸ ಕಟ್ಟಡ, ಹುಬ್ಬಳ್ಳಿಯ ಶ್ರೀ ಕೃಷ್ಣ ಕಲ್ಯಾಣ ಮಂಟಪದ ಬಳಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಕೆಳ ಸೇತುವೆಗಳನ್ನು ಪರಿಶೀಲಿಸಿದ ಅಜಯಕುಮಾರ ಸಿಂಗ್, ಡಿಸೆಂಬರ್ ಕೊನೆವರೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಹುಬ್ಬಳ್ಳಿ ಯಾರ್ಡ್ ಅನ್ನೂ ಪರಿಶೀಲಿಸಿದ ಅಜಯಕುಮಾರ ಸಿಂಗ್, ಅಧಿಕಾರಿಗಳಿಗೆ ವಿವಿಧ ಸೂಚನೆ ನೀಡಿದರು. ಹುಬ್ಬಳ್ಳಿಯಲ್ಲಿ ನಿರ್ವಣಗೊಳ್ಳುತ್ತಿರುವ ವಿಶ್ವದ ಅತಿ ಉದ್ದದ ಪ್ಲಾಟ್ಫಾಮ್ರ್ ಕಾಮಗಾರಿ ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ನಿಗದಿತ ಅವಧಿಯಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ರೈಲ್ ವಿಕಾಸ ನಿಗಮ ಸಿಬ್ಬಂದಿಗೆ ಸೂಚಿಸಿದರು.
ಅಧಿಕಾರಿಗಳಾದ ಚಂದ್ರಶೇಖರ, ವಿಶ್ವಾಸಕುಮಾರ ಹಾಗೂ ಇತರರಿದ್ದರು.