ಫಾಲಾಕ್ಷಪ್ಪ ಗುಂಗಾಡಿ 
ಜಿಲ್ಲೆ

ಹುಲಿಗಿ-ಮುನಿರಾಬಾದ್ ನಡುವೆ ರೈಲ್ವೆ ಸೇತುವೆ ಮಂಜೂರು

Gangavati - Mohan Kumar H R

ಕೊಪ್ಪಳ: ತಾಲೂಕಿನ ಹುಲಿಗಿ-ಮುನಿರಾಬಾದ್ ರೈಲ್ವೆ ಗೇಟ್ ಸಂಖ್ಯೆ 79ಕ್ಕೆ ಸೇತುವೆ ಮಂಜೂರಾಗಿದ್ದು, ಕಾಮಗಾರಿಗೆ 29.57ಕೋಟಿ ರೂ. ಹಾಗೂ ಭೂ ಸ್ವಾಧೀನಕ್ಕೆ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದರಿಂದ ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ ಎಂದು ತಾಪಂ ಮಾಜಿ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ ತಿಳಿಸಿದರು.

ಹುಲಿಗಿ ಕ್ಷೇತ್ರಕ್ಕೆ ರಾಜ್ಯ ಸೇರಿ ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಬಹುಪಾಲು ಜನರು ರೈಲ್ವೆ ಸಾರಿಗೆ ಅವಲಂಬಿಸಿದ್ದಾರೆ. ರಸ್ತೆ ದಾಟಲು ಗಂಟೆಗಟ್ಟಲೇ ಕಾಯುವ ಸ್ಥಿತಿ ಇದೆ. ಇದರಿಂದ ಜನರು ನಾನಾ ತೊಂದರೆ ಅನುಭವಿಸುವಂತಾಗಿದೆ.

ಹಲವು ಮನವಿಗಳ ಬಳಿಕ ಸಂಸದ ಸಂಗಣ್ಣ ಕರಡಿ ಅವರು ಕೇಂದ್ರ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ್ದರು ಎಂದು ಮಂಗಳವಾರ ಸುದ್ದಿಗೋಷ್ಠಿ ಹೇಳಿದರು. ಮೊದಲ ಹಂತದಲ್ಲಿ ಸೇತುವೆ ಮಂಜೂರಾಗಿದೆ. ಆದರೆ, ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಮುಂದಾಗಲಿಲ್ಲ. ಇದರಿಂದ ಕಾಮಗಾರಿ ಆರಂಭವಾಗಿಲ್ಲ.

ಈ ಸಮಸ್ಯೆ ಬಗ್ಗೆ ಸಂಸದರು ಮತ್ತೆ ರೈಲ್ವೆ ಅಧಿಕಾರಿಗಳ ಗಮನಸೆಳೆದು ಬಾಕಿ 3 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ಶೀಘ್ರ ಕಾಮಗಾರಿ ಆರಂಭವಾಗಲಿದ್ದು, ನಮ್ಮ ಬಹುದಿನದ ಬೇಡಿಕೆ ಈಡೇರಿದೆ ಎಂದರು.

ಹುಲಿಗಿ ಗ್ರಾಪಂ ಉಪಾಧ್ಯಕ್ಷ ಸೈಯದ್ ನಮತ್ ಅಲಿ, ಪ್ರಮುಖರಾದ ಸಿದ್ದಪ್ಪ ಗುಂಗಾಡಿ, ಯೋಗೇಶ, ಗಣೇಶ ಹೊರತಟ್ನಾಳ್ ಇತರರಿದ್ದರು.