ಅಣ್ಣಿಗೇರಿ: ಅಣ್ಣಿಗೇರಿ ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ರೈಲ್ವೆ ಗೇಟ್ ಇಕ್ಕಟ್ಟಾದ ಸ್ಥಳದಲ್ಲಿದ್ದು, ವಾಹನ ಸವಾರರಿಗೆ, ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಪ್ರಸ್ತುತ ಸ್ಥಳದಲ್ಲಿ ಫ್ಲೈ ಓವರ್ ನಿರ್ವಿುಸಬೇಕು ಎಂಬ ಬೇಡಿಕೆಗೆ ಇಲಾಖೆ ಸ್ಪಂದಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಈ ಮಾರ್ಗದಲ್ಲಿ ರೈಲು ಹಾಗೂ ವಾಹನ ಸಂಚಾರ ಇಮ್ಮಡಿಗೊಂಡಿದೆ. ರೈಲು ಬರುವ ಸಂದರ್ಭದಲ್ಲಿ ರೈಲ್ವೆ ಗೇಟ್ ತೆಗೆಯುವವರೆಗೂ ವಾಹನ ಸವಾರರು ತಾಸು ಗಟ್ಟಲೆ ಕಾಯಬೇಕು. ಇದರಿಂದ ದೂರದ ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದ್ದು, ಸಮಯವೂ ವ್ಯರ್ಥವಾಗುತ್ತಿದೆ.
ಅಣ್ಣಿಗೇರಿ ಹಾಗೂ ನವಲಗುಂದ ಮಾರ್ಗ ಮಧ್ಯದಲ್ಲಿರುವ ರಸ್ತೆ ನವಲಗುಂದ, ನರಗುಂದ, ಸವದತ್ತಿ, ಗೊಡಚಿ, ರಾಮದುರ್ಗದಂಥ ಪ್ರಮುಖ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ರಸ್ತೆಯಾಗಿದೆ. ಇತ್ತ ನವಲಗುಂದ ಕಡೆಯಿಂದ ಅಣ್ಣಿಗೇರಿ, ಹುಲಕೋಟಿ, ಗದಗ ಮಾರ್ಗವಾಗಿ ಗೂಟಿ ಹೈ ವೇಗೆ ಸಂಪರ್ಕ ಕಲ್ಪಿಸುತ್ತದೆ. ಅಣ್ಣಿಗೇರಿ ಮಾರ್ಗವಾಗಿ ಕೋಳಿವಾಡ, ನಲವಡಿ, ಇಂಗಳಹಳ್ಳಿ ಕ್ರಾಸ್, ಶಿರಗುಪ್ಪಿ ಮಾರ್ಗವಾಗಿ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯೂ ಇದಾಗಿದೆ. ಒಟ್ಟಾರೆ ನಾಲ್ಕೂ ದಿಕ್ಕಿನ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ನವಲಗುಂದ-ಅಣ್ಣಿಗೇರಿ ಮಾರ್ಗದ ರಸ್ತೆ ಬನವಾಸಿ ಹೈ ವೇ ರಸ್ತೆಯಾಗಿ ಪರಿವರ್ತನೆಗೊಳ್ಳಲಿದೆ. ವಿಶೇಷವೆಂದರೆ ಅಣ್ಣಿಗೇರಿ ರೈಲ್ವೆ ನಿಲ್ದಾಣದ ಹತ್ತಿರವಿರುವ ರೈಲ್ವೆ ಗೇಟ್ ಹೊರತುಪಡಿಸಿದರೆ ಬೇರೆ ಯಾವ ಮಾರ್ಗಗಳಲ್ಲಿಯೂ ರೈಲ್ವೆ ಗೇಟಿನ ಅಡೆತಡೆಗಳಿಲ್ಲ. ನಾಲ್ಕೂ ದಿಕ್ಕಿನಿಂದ ಸರಾಗವಾಗಿ ಬರುವ ವಾಹನಗಳು ಅಣ್ಣಿಗೇರಿ ರೈಲ್ವೆ ಗೇಟ್ನ ಬಳಿ ರೈಲ್ವೆ ಕ್ರಾಸಿಂಗ್ ವೇಳೆ ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಉಂಟಾಗಿದೆ.
ವಿಶೇಷವಾಗಿ ಭಾರತ ಹುಣ್ಣಿಮೆ ಮುಗಿಯುವವರೆಗೂ ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ವಿಶೇಷ ಬಸ್ಗಳನ್ನು ಬಿಡಲಾಗುತ್ತಿದೆ. ಜತೆಗೆ ಬಳ್ಳಾರಿ, ಕೊಪ್ಪಳ, ಗಂಗಾವತಿ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ವಾಹನಗಳು ಯಲ್ಲಮ್ಮನ ಗುಡ್ಡದ ಕಡೆಗೆ ಪ್ರಯಾಣ ಬೆಳೆಸುತ್ತವೆ. ಜತೆಗೆ ಚಕ್ಕಡಿ ಸವಾರರು, ಪಾದಚಾರಿಗಳೂ ಆಗಮಿಸುತ್ತಾರೆ. ಮೈಲಾರಲಿಂಗೇಶ್ವರ ಜಾತ್ರೆಯ ದಿವಸ ನವಲಗುಂದದಿಂದ ಅಣ್ಣಿಗೇರಿ ಮಾರ್ಗದ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ಟ್ರ್ಯಾಕ್ಟರ್ ಹಾಗೂ ಖಾಸಗಿ ವಾಹನಗಳ ಜೊತೆಗೆ ಸರ್ಕಾರಿ ಬಸ್ಗಳು ಸಂಚರಿಸುತ್ತವೆ. ಜಾತ್ರೆಯ ವೇಳೆ ಎರಡೂ ದಿಕ್ಕಿನಿಂದ ಸಂಚಾರ ದಟ್ಟಣೆ ಇಮ್ಮಡಿಗೊಳ್ಳುತ್ತದೆ.
ಸಂಸದ ಪ್ರಲ್ಹಾದ ಜೋಶಿ ಅವರು ರೈಲ್ವೆ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ, ಈ ಭಾಗದ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿ ಆದಷ್ಟು ಶೀಘ್ರ ರೈಲ್ವೆ ಫ್ಲೈಓವರ್ ನಿರ್ವಿುಸಬೇಕು ಎನ್ನುವ ಒತ್ತಡ ಕೇಳಿ ಬಂದಿದೆ.
ರೈಲು ದಾಟಿ ಹೋದ ನಂತರ ರೈಲ್ವೆ ಗೇಟ್ ತೆರೆಯುವಷ್ಟರಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತವೆ. ಹೀಗಾಗಿ ಪ್ರಯಾಣಿಕರು ಶ್ರೀ ಕ್ಷೇತ್ರಗಳ ದರ್ಶನ ಪಡೆದುಕೊಳ್ಳುವ ಬದಲು ಆಸ್ಪತ್ರೆಗಳ ದರ್ಶನ ಪಡೆಯುವಂತಾಗಿದೆ. ಕೂಡಲೆ ರೈಲ್ವೆ ಇಲಾಖೆ ಮೇಲ್ಸೇತುವೆ ನಿರ್ವಿುಸಬೇಕು. | ಮಂಜುನಾಥ ಮಾಯಣ್ಣವರ, ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಅಣ್ಣಿಗೇರಿ ಘಟಕ ಪ್ರಸ್ತುತ ಈ ಎಲ್ಲ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಅರ್ಥೈಸಿಕೊಂಡು ಪ್ಲೈ ಓವರ್ ರಸ್ತೆ ನಿರ್ವಿುಸಲು ಮುಂದಾಗಬೇಕು. ಪ್ರಯಾಣಿಕರಿಗೆ ಅನುಕೂಲ ಮಾಡುವ ರೀತಿಯಲ್ಲಿ ಜಂಕ್ಷನ್ ನಿರ್ಮಾಣ ಮಾಡಿ ಯಾತ್ರಿಕರಿಗೆ ಅನುಕೂಲ ಮಾಡಿಕೊಡಬೇಕು. | ರಾಜು ರಾಯ್ಕರ, ಯುವ ಉದ್ಯಮಿ ಮುಂಜಾನಿಂದ ಸಂಜಿತನಕ ಎತ್ತುಗಳು ಕೆಲಸ ಮಾಡಿ ಧನುವು ಆಗಿರ್ತಾವ. ಯಾವಾಗ ಮನಿಗೆ ಹೊಕ್ಕೆವಿ ಅನ್ನುವಂತಾ ಹೊತ್ತಿನ್ಯಾಗ ತಾಸ್ಗಟ್ಟಲೆ ಗೇಟ್ ಹಾಕಿದ್ರ ಅಕ್ಕ ಪಕ್ಕ ಬಂದ ಗಾಡಿ ಶಬ್ದಕ್ಕ ಎತ್ತು ಬೆದರಿ ಚಿನ್ನಾಟಗಿ ತಗ್ಯಾಕ ಚಾಲು ಮಾಡ್ತಾವು. ಆ ಚಿನ್ಯಾಟನ್ಯಾಗ ದನಕ್ಕನೂ ಪೆಟ್ಟು ಬಿದ್ದಾವು, ಜೋಶಿ ಸಾಹೇಬ್ರ, ನೀವು ನಮ್ಮಾರ ಅದೀರಿ, ಈ ಭಾಗದಾಗ ಪ್ರಮುಖರ ಅದೀರಿ, ಮೋದಿ ಸಾಹೇಬ್ರ ಹತ್ರ ಅದೀರಿ, ಆದಷ್ಟ ಜಲ್ದಿ ಇದನ್ನ ಬಗೆ ಹರಸ್ರಿ. | ಮಲ್ಲೇಶ ಹಳ್ಳಿ, ನೊಂದ ರೈತ