ವಿಜಯಪುರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು.  
ಜಿಲ್ಲೆ

ರೈಲ್ವೆ ಮೇಲ್ಸೇತುವೆ ಉದ್ಘಾಟನೆ

ಗಿರೀಶ ಸಗರ

ವಿಜಯಪುರ: ನಗರ ಹೊರವಲಯದ ಹುಬ್ಬಳ್ಳಿ&ವಿಜಯಪುರ ರಸ್ತೆಯ ಹೊನಗನಹಳ್ಳಿ ಬಳಿ ನಿರ್ಮಿಸಲಾದ ರೈಲ್ವೆ ಮೇಲ್ಸೇತುವೆಯನ್ನು ಜೂ.17 ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಈ ಹಿಂದೆ ಹೊನಗನಹಳ್ಳಿ ಬಳಿ ರೈಲ್ವೆ ಹಳಿ ದಾಟಲು ವಾಹನಗಳಿಗೆ ಟ್ರಾಫಿಕ್​ ಕಿರಿಕಿರಿ ಆಗುತಿತ್ತು. ಸುತ್ತಮುತ್ತಲಿನ ಹಳ್ಳಿ ಜನರಿಗೆ ನಿತ್ಯ ಸಂಚರಿಸಲು ಬಹಳಷ್ಟು ಅಡಚಣೆಯೂ ಆಗಿತ್ತು. ರೈಲ್ವೆ ಮೇಲ್ಸೆತುವೆ ನಿರ್ಮಿಸುವಂತೆ ಸಾರ್ವಜನಿಕರ ಬಹುದಿನಗಳ ಬೇಡಿಕೆ ಕುರಿತು ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಪ್ರಧಾನಿ ಮೋದಿ ಜಿಲ್ಲೆಯ ಅಲಿಯಾಬಾದ್​, ಇಬ್ರಾಹಿಂಪುರ ಹಾಗೂ ಸವನಹಳ್ಳಿ ಬ್ರಿಜ್​ಗಳನ್ನು ಮಂಜೂರು ಮಾಡಿದ್ದು, ಸುಮಾರು 70 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬ್ರಿಜ್​ ಮಂಗಳವಾರ ಉದ್ಘಾಟನೆಗೊಳ್ಳಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ನಗರ ಹೊರವಲಯದ ಸರ್ವಿಸ್​ ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಾಗುತ್ತಿದೆ. ರಿಂಗ್​ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವೆ. ಈಗ 750 ಕೋಟಿ ರೂ. ವೆಚ್ಚದಲ್ಲಿ ಒಟ್ಟು 47 ಕಿ.ಮೀ. ರಿಂಗ್​ ರಸ್ತೆ ನಿರ್ಮಾಣಕ್ಕೆ ಡಿಪಿಆರ್​ ಸಿದ್ಧಪಡಿಸಲಾಗುತ್ತಿದೆ. ಶ್ರೀದಲ್ಲಿಯೇ ರಿಂಗ್​ ರಸ್ತೆ ನಿರ್ಮಾಣಗೊಳ್ಳಲಿದೆ ಎಂದು ಸಂಸದರು ಹೇಳಿದರು.

ಬೆಂಗಳೂರು ಬಿಟ್ಟರೆ ವಿಜಯಪುರ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಅದಕ್ಕಾಗಿ ಜಿಲ್ಲೆಗೆ ಲ ಕೋಟಿಗೂ ಅಧಿಕ ಪ್ರಮಾಣದಲ್ಲಿ ಅನುದಾನ ತಂದಿದ್ದೇನೆ. ನಾನು ಮಾತಾಡಲ್ಲ, ಕೆಲಸ ಮಾಡುತ್ತೇನೆ. ಸಾರ್ವಜನಿಕರ ಕೆಲಸಕ್ಕೆ ನಾನು ದಿಲ್ಲಿಯ ಮಂತ್ರಿಗಳ ಕಚೇರಿಗೆ ಸಾಕಷ್ಟು ಪತ್ರ ಬರೆದು ಗಮನ ಸೆಳೆಯುತ್ತೇನೆ. ಬೆನ್ನು ಹತ್ತಿ ಕೆಲಸ ಮಾಡುವವರೆಗೂ ಬಿಡುವುದಿಲ್ಲ. ಜಿಲ್ಲೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಶಕ್ತಿ ಮೀರಿ ಶ್ರಮ ಹಾಕಿದ್ದೇನೆ ಎಂದು ತಿಳಿಸಿದರು.

ಸದ್ಯ ಉದ್ಘಾಟನೆಗೊಳ್ಳಲಿರುವ ರೈಲ್ವೆ ಮೇಲ್ಸೇತುವೆಯಿಂದ ರೈಲ್ವೆ ಹಳಿ ದಾಟಲು ಸಾರ್ವಜನಿಕರು, ವಾಹನಗಳಿಗೆ ಇನ್ನು ಮುಂದೆ ಯಾವುದೇ ತೊಂದರೆಯಾಗುವುದಿಲ್ಲ.

ದಲು ಆಸ್ಪತ್ರೆಗೆ ಹೋಗುವ ಅಂಬುಲೆನ್ಸ್​ ಕೂಡ ರೈಲ್ವೆ ಪಾಸ್​ ಆಗುವವರೆಗೂ ಸ್ವಲ್ಪ ಹೊತ್ತು ಕಾಯಬೇಕಾದ ಅನಿವಾರ್ಯತೆ ಇತ್ತು. ಸದ್ಯ ಅದಕ್ಕೆಲ್ಲ ವಿರಾಮ ಬೀಳಲಿದೆ. ಮೋದಿಜಿ ಅವರ ಅಭಿವೃದ್ಧಿ ಕಾರ್ಯದಿಂದ ಹಾಗೂ ನನ್ನ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಬ್ರಿಜ್​ ನಿರ್ಮಾಣವಾಗಿದೆ ಎಂದರು.

ಬ್ರಿಜ್​ ಉದ್ಘಾಟನಾ ಕಾರ್ಯಕ್ರಮಕ್ಕೆ ಜಿಲ್ಲೆಯ ಸಾರ್ವಜನಿಕರು, ಸುತ್ತಮುತ್ತಲಿನ ಗ್ರಾಮಗಳ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಸದ ಜಿಗಜಿಣಗಿ ಮನವಿ ಮಾಡಿದರು.

ಮಾಜಿ ಸಚಿವ ಎಸ್​.ಕೆ. ಬೆಳ್ಳುಬ್ಬಿ, ವಿ.ಪ. ಮಾಜಿ ಸದಸ್ಯ ಅರುಣ ಶಹಾಪೂರ, ಮಾಜಿ ಶಾಸಕ ರಮೇಶ ಭೂಸನೂರ, ಪಕ್ಷದ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಧ್ಯಮ ಪ್ರಮುಖ ವಿಜಯ ಜೋಶಿ ಮತ್ತಿತರರಿದ್ದರು.