ಬಂಗಾರಪೇಟೆ: ಪಟ್ಟಣದ ವ್ಯಾಪ್ತಿಗೆ ಒಳಪಡುವ ಹುಣಸನಹಳ್ಳಿ ಬಳಿ ನಿಮಾರ್ಣ ಮಾಡುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ಆಮೆಗತಿಯಲ್ಲಿ ಸಾಗಿದೆ. ಕಳೆದ ಮೂರು ವರ್ಷಗಳಿಂದ ಕೆಲಸ ನಡೆಯುತ್ತಿದ್ದು, ಸಾರ್ವಜನಿಕರು ನಾನಾ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಕೋಲಾರ ಮತ್ತು ಬಂಗಾರಪೇಟೆ ಮಧ್ಯೆ ಚಲಿಸುವ ರೈಲುಗಳಿಂದ ಬಂಗಾರಪೇಟೆ ಮತ್ತು ಬೂದಿಕೋಟೆ ಮಾರ್ಗದ ಕಡೆ ಚಲಿಸಲು ವಾಹನಗಳು ಮತ್ತು ಸಾರ್ವಜನಿಕರು ಹರ ಸಾಹಸ ಮಾಡುತ್ತಿದ್ದರು. ಈ ಬಗ್ಗೆ ಹಿಂದಿನ ಸಂಸದ ಎಸ್.ಮುನಿಸ್ವಾಮಿ ಅವರಿಗೆ ಸಾರ್ವಜನಿಕರು ಮನವಿ ನೀಡಿದಾಗ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅಮೃತ ಭಾರತ ಯೋಜನೆಯಡಿ 25 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆನಿರ್ಮಿಸಲು ಅನುದಾನ ಮಂಜೂರು ಮಾಡಿಸಿದ್ದರು. ಕಾಮಗಾರಿಗೆ ಸಂಸದರಾಗಿದ್ದ ಎಸ್.ಮುನಿಸ್ವಾಮಿ ಚಾಲನೆ ನೀಡಿದ್ದರು. ಕಾಮಗಾರಿ ಆರಂಭದ ಹಿನ್ನೆಲೆಯಲ್ಲಿ ಪಾದಚಾರಿಗಳು, ವಾಹನ ಸವಾರರಿಗೆ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದುವರೆವಿಗೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಾರ್ವಜನಿಕರು ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವಂತಾಗಿದೆ.
2022ನೇ ಸಾಲಿನಲ್ಲಿ ಪ್ರಾರಂಭಗೊಂಡ ರೈಲ್ವೆ ಮೇಲ್ಸೇತುವೆ ಕಾಮಗಾರಿ ಗುತ್ತಿಗೆದಾರರ ಒಪ್ಪಂದದಂತೆ ಒಂದು ವರ್ಷದಲ್ಲಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಬರಬೇಕಾಗಿತ್ತು. ಆದರೆ, ಮೂರು ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ನಿಧಾನವಾಗಿ ಸಾಗುತ್ತಿರುವ ಸೇತುವೆಯ ಕಾಲಂಗಳನ್ನು ನಿಲ್ಲಿಸಿರುವುದು ಬಿಟ್ಟರೆ ಬೇರೆ ಯಾವುದೇ ಪ್ರಗತಿ ಕಂಡಿಲ್ಲ. ಇದು ಕಾಮಗಾರಿ ಮತ್ತಷ್ಟು ತಿಂಗಳುಗಳ ವಿಳಂಬಕ್ಕೆ ಕಾರಣವಾಗಿದೆ.
ಕಿರಿದಾದ ರಸ್ತೆಯಲ್ಲಿ ಹರಸಾಹಸ
ಮೇಲ್ಸೇತುವೆ ನಿಮಾರ್ಣಕ್ಕಾಗಿ ರಾಜ್ಯ ಹೆದ್ದಾರಿಯ ದಿಕ್ಕನ್ನು ಬದಲಿಸಿ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಿರುವುದರಿಂದ ಸಾರ್ವಜನಿಕರು 25 ಮೀಟರ್ ಮಧ್ಯೆ ಸಾಗಬೇಕಾಗಿದ್ದ ಮಾರ್ಗ, ಈಗ ಸುಮಾರು 1ಕಿಮೀ ದೂರ ಕಿರಿದಾದ ರಸ್ತೆಯಿಂದ ಸುತ್ತಿಕೊಂಡು ಮುಖ್ಯರಸ್ತೆ ತಲುಪಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಪರ್ಯಾಯ ರಸ್ತೆಯಲ್ಲಿನ ನಿವಾಸಿಗಳ ಗೋಳು ಹೇಳತೀರದಾಗಿದೆ. ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿದೆ.ವಾಹನಗಳ ಓಡಾಟದಿಂದ ವೃದ್ಧರು, ಮಕ್ಕಳು, ಮಹಿಳೆಯರು ವಾಹನಗಳ ಸಂಚಾರದಿಂದ ಎದ್ದೇಳುವ ಧೂಳಿನಿಂದ ಬದುಕು ಸಾಗಿಸುತ್ತಿದ್ದಾರೆ.
ಮನೆಗಳ ಒಳಗಡೆ ಕುಡಿಯುವ ನೀರು ಮತ್ತು ತಿನ್ನುವ ಆಹಾರ ಪದಾರ್ಥಗಳ ಮೂಲಕ ಧೂಳು ಆವರಿಸುತ್ತಿದ್ದು, ನಿವಾಸಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿದ್ದು, ಇದಕ್ಕೆಲ್ಲಾ ನಿಧಾನಗತಿಯಲ್ಲಿ ಸಾಗುತ್ತಿರುವ ರೈಲ್ವೆ ಮೇಲ್ಸೆತುವೆ ಕಾಮಗಾರಿ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಸಮಸ್ಯೆಯಿಂದ ಮುಕ್ತಿಗೊಳಿಸಿ
ಇಲ್ಲಿನ ಜನರು ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಂಬಂಧಿಸಿದ ರೈಲ್ವೆ ಇಲಾಖೆ ಅಧಿಕಾರಿಗಳು ಕಾಮಗಾರಿ ಬೇಗ ಮುಗಿಸದೆ ರ್ನಿಲಕ್ಷ್ಯ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಅಸಮಧಾನ ತಂದಿದೆ. ಸಂಸದ ಮಲ್ಲೇಶ್ಬಾಬು ಅವರು ಸ್ಥಳ ಪರಿಶೀಲನೆ, ಹೇಳಿಕೆಗಳಿಗೆ ಮಾತ್ರ ಸೀಮಿತರಾಗಿದ್ದಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ರೈಲ್ವೆ ಅಧಿಕಾರಿಗಳ ಮೇಲೆ ಒತ್ತಡ ತಂದು ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸಮಸ್ಯೆಗಳಿಂದ ಮುಕ್ತಿ ದೊರಕಿಸಿಕೊಡಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
ರೈಲ್ವೆ ಮೇಲ್ಸೇತುವೆ ಕೆಲಸ ಕುಂಟುತ್ತಾ ಸಾಗುತ್ತಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ವಾಹನಗಳ ಓಡಾಟಕ್ಕೂ ತೊಂದರೆ ಆಗುತ್ತಿದೆ. ರೈಲ್ವೆ ಅಧಿಕಾರಿಗಳು ಮೇಲ್ಸೇತುವೆ ಕಾಮಗಾರಿ ವೇಗ ಹೆಚ್ಚಿಸಿ ಶ್ರೀ ಪೂರ್ಣಗೊಳಿಸಬೇಕು.
- ಕೃಷ್ಣಪ್ಪ
ಜಿಪಂ ಮಾಜಿ ಸದಸ್ಯ, ಬೂದಿಕೋಟೆ
ಕಳೆದ ಮೂರು ವರ್ಷಗಳಿಂದ ರೈಲ್ವೆ ಮೇಲ್ಸೇತುವೆ ಕೆಲಸ ಮಂದಗತಿಯಲ್ಲಿ ನಡೆದಿದೆ. ಶೀಘ್ರ ಕಾಮಗಾರಿ ಪೂರ್ಣಗೊಳ್ಳಲು ಅಧಿಕಾರಿಗಳು ಕ್ರಮ ವಹಿಸಬೇಕು.
- ಕಿಶೋರ್ ಪಾಟೇಲ್
ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ, ಬಂಗಾರಪೇಟೆ