ದೇವಲಾಪುರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್​ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು. ಎ.ಸಿ.ದುರ್ಗಾಶ್ರೀ, ತಹಸೀಲ್ದಾರ್​ ಸೋಮಶೇಖರ್​, ಇಒ ಮುನಿಯಪ್ಪ, ಡಿವೈಎಸ್​ಪಿ ಮಲ್ಲೇಶ್​, ಲೋಕೋಪಯೋಗಿ ಇಲಾಖೆ ಅಧಿಕಾರಿ ಪ್ರಕಾಶ್​, ವಲಯ ಅರಣ್ಯಾಧಿಕಾರಿ ಪುಷ್ಪಾ ಇದ್ದರು. 
ಜಿಲ್ಲೆ

8 ತಿಂಗಳಲ್ಲಿ ರೈಲ್ವೆ ಮೇಲ್ಸೇತುವೆ ಪೂರ್ಣ

ಹೊಸಕೋಟೆ : ಕಳೆದ 10 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ದೇವಲಾಪುರ ರೈಲ್ವೆ ಮೇಲ್ಸೇತುವೆ ಕಾಮಗಾರಿ 8 ತಿಂಗಳಲ್ಲಿ ಮುಗಿಯಲಿದ್ದು, ಅನುಗೊಂಡನಹಳ್ಳಿ ಹಾಗೂ ಹೊಸಕೋಟೆ ನಗರ ಸಂಪರ್ಕಕ್ಕೆ ಸಹಕಾರವಾಗಲಿದೆ ಎಂದು ಕಿಯೋನಿಕ್ಸ್​ ಅಧ್ಯಕ್ಷ ಹಾಗೂ ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.

ದೇವಲಾಪುರದಲ್ಲಿ ಹಾದು ಹೋಗಿರುವ ರೈಲೆ ಹಳಿಗಳ ಮೇಲೆ 12 ಕೋಟಿ ರೂ. ವೆಚ್ಚದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ರೈಲ್ವೆ ಕೇಂದ್ರ ಮಂತ್ರಿಯಾಗಿದ್ದ ಸದಾನಂದ ಗೌಡ ಅವರ ಅವಧಿಯಲ್ಲಿ ಅನುಮೋದನೆ ನೀಡಲಾಗಿತ್ತು. ಕಾರಣಾಂತರಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಒಂದುವರೆ ವರ್ಷಗಳಿಂದ ನಿರಂತರ ಪ್ರಯತ್ನದ ಫಲವಾಗಿ ಹಾಗೂ ಅಧಿಕಾರಿಗಳ ಹೆಚ್ಚಿನ ಶ್ರಮದಿಂದ ಇದೀಗ ಕಾಮಗಾರಿ ಮುಂದುವರೆದಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಅನುಕೂಲವಾಗಲಿದೆ.

ಉತ್ತಮ ಗುಣಮಟ್ಟ ಹಾಗೂ ಕಲಾಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಇಲಾಖೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು. ಈ ಭಾಗದಲ್ಲಿ ಮೇಲ್ಸೇತುವೆ ಕಾಮಗಾರಿ ಬಾಕಿ ಉಳಿದಿದ್ದ ಕಾರಣ ಅಕ್ಕ ಪಕ್ಕದ ನಿವಾಸಿಗಳಿಗೆ ಧೂಳಿನ ಸಮಸ್ಯೆ ಹೆಚ್ಚಾಗಿತ್ತು. ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೂ ಬಾರಿ ತೊಂದರೆಯಾಗುತಿತ್ತು. ಶಾಸಕ ಶರತ್​ ಬಚ್ಚೇಗೌಡರ ಸತತ ಪ್ರಯತ್ನದಿಂದ ಕಾಮಗಾರಿಗೆ ಮರು ಚಾಲನೆ ದೊರೆತಿದೆ ಎಂದು ಗ್ರಾಪಂ ಮಾಜಿ ಸದಸ್ಯೆ ಗೀತಾ ಪ್ರಕಾಶ್​ ಹೇಳಿದರು. ಬೆಸ್ಕಾಂ ಎಇ ವೆಂಕಟೇಶ್​, ಗ್ರಾಪಂ ಅದ್ಯೆ ರತ್ನಾ ಗೋವಿಂದರಾಜ್​, ಸಮೇತನಹಳ್ಳಿ ಗ್ರಾಪಂ ಅಧ್ಯಕ್ಷ ಕಾಂತರಾಜ್​, ಬಮುಲ್​ ಉಪಾಧ್ಯಕ್ಷ ಕೆಎಂಎಂ ಮಂಜುನಾಥ್​, ಮುಖಂಡರಾದ ಭೋದನಹೊಸಳ್ಳಿ ಪ್ರಕಾಶ್​, ಕೋಡಿಹಳ್ಳಿ ಸುರೇಶ್​, ಗೀತಾ ಪ್ರಕಾಶ್​, ಮಾರೇಗೌಡ, ವಿಎಸ್​ಎಸ್​ಎನ್​ ಅಧ್ಯಕ್ಷ ಪ್ರಕಾಶ್​ ಇದ್ದರು.

ಸದನದಲ್ಲಿ ಸಮಗ್ರ ಚರ್ಚೆ : ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ 2.5 ಎಕರೆ ಜಾಗದಲ್ಲಿ ಹೊಸಕೋಟೆ ನಗರಕ್ಕೆ ಕೆಎಸ್​ಆರ್​ಟಿಸಿ ಡಿಪೋ ನಿರ್ಮಿಸುವಂತೆ ಸಚಿವರಿಗೆ ಮನವಿ ಮಾಡಲಾಗಿದೆ. ಸಂಚಾರಿ ಪೊಲೀಸ್​ ಠಾಣೆ ನಿರ್ಮಾಣ ಹಾಗೂ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಗೃಹ ಸಚಿವರಿಗೆ, ಸೂಲಿಬೆಲೆ ರಸ್ತೆಯಿಂದ ಕೋಲಾರ ಜಿಲ್ಲೆಯ ಮಾಸ್ತಿವರೆಗೆ ರಸ್ತೆಯನ್ನು ರಾಜ್ಯ ಹೆದ್ದಾರಿ ಮಾನ್ಯತೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಜತೆಗೆ ಕೆಆರ್​ ಪುರದಿಂದ ಹೊಸಕೋಟೆಯ ಕೊಳತೂರುವರೆಗೆ ಮೆಟ್ರೋ ಜತೆಗೆ ಸಂಚಾರಿ ಮೇಲ್ಸೇತುವೆ ಹಾಗೂ ಕೊರಳೂರಿನ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೂ ಸದನದಲ್ಲಿ ಮನವಿ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್​ ಹಾಗೂ ರೋಟರಿಗೆ ಸಂಬಂಧಪಟ್ಟ ಎಲ್ಲ ಸಚಿವರೂ ನನ್ನ ಮನವಿ ಮಾನ್ಯ ಮಾಡಿದ್ದು, ಶ್ರೀವೇ ಅಭಿವೃದ್ಧಿ ಕಾರ್ಯಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಕಿಯೋನಿಕ್ಸ್​ ಅಧ್ಯಕ್ಷರೂ ಆದ ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.