ಜಿಲ್ಲೆ

ರೈಲ್ವೆ ಕೂಲಿಕಾರ್ಮಿಕರ ಸಂಘದ ಮನವಿ,  ಸಂಸದ ಶೆಟ್ಟರ್ ಮೂಲಕ ಪ್ರಧಾನಿಗೆ ಪತ್ರ

Dharwada - Basavaraj Idli

ಹುಬ್ಬಳ್ಳಿ: ರೈಲು ನಿಲ್ದಾಣಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳ ಒದಗಿಸುವಿಕೆ ಹಾಗೂ ಇಲಾಖೆ ಕೈಗೊಂಡ ಕೆಲವು ನಿರ್ಧಾರಗಳಿಂದ ಕೂಲಿ ಹಾಗೂ ಹಮಾಲಿ ಕಾರ್ಮಿಕರು ದುಡಿಮೆ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಪ್ರಧಾನಿ ಹಾಗೂ ಸಂಬಂಧಿಸಿದ ಇಲಾಖೆ ಸಚಿವರ ಗಮನಕ್ಕೆ ತರಬೇಕೆಂದು ಇಲ್ಲಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ಕೂಲಿ ಪೋರ್ಟರ್ಸ್ ಸಂಘದ ಪದಾಧಿಕಾರಿಗಳು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿಯೂ ಆದ ಶೆಟ್ಟರ್ ಅವರನ್ನು ನಗರದ ಗೃಹ ಕಚೇರಿಯಲ್ಲಿ ಬುಧವಾರ ಭೇಟಿ ಮಾಡಿದ ಸಂಘದವರು, ಕಾರ್ಮಿಕರು ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕೂಲಿ ಸಿಗದೇ ಖಾಲಿ ಕೈಯಲ್ಲಿ ಮನೆಗೆ ಹೋಗುವ ಅನಿವಾರ್ಯತೆ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ಕಳೆದ ವರ್ಷ ಲಖನೌನಲ್ಲಿ ಏರ್ಪಡಿಸಿದ್ದ ಹಮಾಲಿ ಕಾರ್ಮಿಕರ ಸಭೆಯಲ್ಲಿ ರಾಷ್ಟ್ರೀಯ ಕೂಲಿ ಮೋರ್ಚಾ ರಚನೆಗೆ ನಿರ್ಧರಿಸಲಾಗಿದೆ. ಅಲ್ಲಿ ಕೈಗೊಂಡ ನಿರ್ಣಯದಂತೆ ತಮ್ಮ ಮೂಲಕ ಪ್ರಧಾನಿಗೆ ಪತ್ರ ಬರೆಯಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ರೈಲ್ವೆಯಲ್ಲಿ ಬಹಳಷ್ಟು ಬದಲಾವಣೆ ಮಾಡಿದೆ. ಖಾಸಗೀಕರಣಕ್ಕೆ ಒತ್ತು ನೀಡುತ್ತಿದೆ. ಎಸ್ಕಲೇಟರ್, ಲಿಫ್ಟ್ ಅಳವಡಿಕೆ, ನಿಲ್ದಾಣಗಳಲ್ಲಿ ಬ್ಯಾಟರಿ ರಿಕ್ಷಾ ಸೌಲಭ್ಯ ನೀಡಲಾಗಿದೆ.

ರೈಲ್ವೆ ಮಂಡಳಿ ನಿಯಮ ಉಲ್ಲಂಘಿಸಿ ಔಟ್ ಸೋರ್ಸ್ ಮೂಲಕ ಟ್ರಾಲಿ ಸಿಸ್ಟ್ಂ ಜಾರಿ ಮಾಡಿದೆ. ಈ ಎಲ್ಲ ಕಾರಣಗಳಿಂದ ಕೂಲಿ ಹಮಾಲಿಗಳು ಕೆಲಸ ಇಲ್ಲದೇ ಜೀವನ ಸಾಗಿಸಲು ಪರದಾಡುತ್ತಿದ್ದಾರೆ.

ಈ ಮಧ್ಯೆ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ, ಚಿಕಿತ್ಸೆಗಾಗಿ ಹೆಲ್ತ ಕಾರ್ಡ್ ನೀಡಬೇಕೆಂಬ ಸೂಚನೆಯೂ ಪಾಲನೆಯಾಗುತ್ತಿಲ್ಲ. ಕಾರ್ಮಿಕರಿಗೆ ಸಮವಸ್ತ್ರಗಳನ್ನು ಸಹ ನೀಡುತ್ತಿಲ್ಲ. ಇವರ ಎಲ್ಲ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡಬೇಕು. ನ್ಯಾಯ ಒದಗಿಸಿಕೊಡಬೇಕು. ಬಹುದಿನಗಳಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಂಘದ ಸದಸ್ಯರು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಮಹ್ಮದಲಿ ದಾವಲಸಾಬ್ ನದಾ್, ಉಪಾಧ್ಯಕ್ಷ ಚಂದ್ರು ಚಲವಾದಿ, ಜಾರ ಖಾನ, ಇಮಾಮಸಾಬ ಮನಿಯಾರ, ಆನಂದ ರುದ್ರಪ್ಪನವರ, ಅಬ್ದುಲ್ರಜಾಕ್, ಗೌಸ್ಮೊಹಿದ್ದಿನ್, ಇತರರು ಮನವಿ ಸಲ್ಲಿಸಿದರು.