ಸಕಲೇಶಪುರ: ಪುರಸಭೆಗೆ ಭೂಮಿ ದಾಖಲೆ ನೀಡಲು ವಿಫಲವಾದ ರೈಲ್ವೆ ಇಲಾಖೆ ಕಟ್ಟಡ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿದೆ.
ಪಟ್ಟಣ ಹೃದಯ ಭಾಗದ ಬಹುತೇಕ ಜಮೀನು ತನ್ನದೆನ್ನುತ್ತ ಆಯಾಕಟ್ಟಿನ ಸ್ಥಳಗಳಲ್ಲಿ ಇಲಾಖೆ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಪರಿಣಾಮ ಪಟ್ಟಣದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೂ ಸ್ಥಳವಿಲ್ಲದಂತಾಗಿತ್ತು. ಕಳೆದ ಐದು ವರ್ಷಗಳ ಹಿಂದೆ ಪುರಸಭೆಗೆ ಜಮೀನು ಸೇರಿದೆ ಎಂಬ ಸ್ವಷ್ಟತೆ ಆಧರಿಸಿ ಲಕ್ಷ್ಮೀಪುರಂ ಬಡಾವಣೆಯಲ್ಲಿ ಪುರಸಭೆ ಕನ್ನಡ ಸಾಹಿತ್ಯ ಪರಿಷತ್‌ಗೆ ಎರಡು ಗುಂಟೆ ಜಮೀನು ಮಂಜೂರು ಮಾಡಿತ್ತು.
ಆದರೆ ಈ ಜಮೀನು ತನ್ನದೆಂದು ಬೇಲಿ ನಿರ್ಮಿಸುವ ಮೂಲಕ ಸ್ಥಳಕ್ಕೆ ತೆರಳಿದವರ ಮೇಲೆ ಸ್ಥಳೀಯ ರೈಲ್ವೆ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದರು. ಇದೇ ವರ್ತನೆಯನ್ನು ಹಲವೆಡೆ ಮುಂದುವರಿಸಿದ್ದ ಇಲಾಖೆ ಅಧಿಕಾರಿಗಳು ಪಟ್ಟಣದ ಲಕ್ಷ್ಮೀಪುರಂ ಬಡಾವಣೆ ಸರ್ವೇ ನಂಬರ್ 191ರಲ್ಲಿ ಒಂದು ಎಕರೆ ಭೂಮಿಯನ್ನು ತನ್ನದೆಂದು 1990ರ ಸಾಲಿನಲ್ಲಿ ಸಿಬ್ಬಂದಿ ವಸತಿ ಗೃಹ ನಿರ್ಮಿಸಿಕೊಂಡು ಈ ಪ್ರದೇಶದಲ್ಲಿ ಪುರಸಭೆ ನಿರ್ಮಿಸಿದ್ದ ಬಾಲವನದ ಗುರುತು ಇಲ್ಲದಂತೆ ನಾಶಪಡಿಸಲಾಗಿತ್ತು.
ಆದರೆ, ತಾತ್ಕಾಲಿಕ ಕಟ್ಟಡ ಸಿಬ್ಬಂದಿ ವಾಸಕ್ಕೆ ಯೋಗ್ಯವಾಗಿರದ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ಕಟ್ಟಡಗಳನ್ನು ತೆರವುಗೊಳಿಸಿ ಇದೇ ಪ್ರದೇಶದಲ್ಲಿ ಹೊಸದಾಗಿ ವಸತಿ ಗೃಹ ಹಾಗೂ ಇತರ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಈ ಪ್ರದೇಶ ಪುರಸಭೆಗೆ ಸೇರಿದೆ ಎಂಬ ಸ್ವಷ್ಟತೆ ಹೊಂದಿದ್ದ ಪಟ್ಟಣದ ಕೆಲ ಹಿರಿಯ ಹೋರಾಟಗಾರರು ಈ ಪ್ರದೇಶ ಪುರಸಭೆಗೆ ಸೇರಿದ್ದಾಗಿದ್ದು ಉದ್ಯಾನ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. ಇಲ್ಲಿ ಉದ್ಯಾನ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಇದರಿಂದ ಎಚ್ಚೆತ್ತ ಪುರಸಭೆ ಕಾಮಗಾರಿಗೂ ಮುನ್ನ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ ನೋಟಿಸ್‌ಗೂ ನಿರ್ಲಕ್ಷೃವಹಿಸಿದ್ದ ರೈಲ್ವೆ ಇಲಾಖೆ ಅಧಿಕಾರಿಗಳು ಕಾಮಗಾರಿ ಮುಂದುವರಿಸಿದ್ದರು. ಈ ಬಗ್ಗೆ ಮತ್ತೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಮಗಾರಿ ಸಾಮಗ್ರಿಗಳನ್ನು ವಶಕ್ಕೆ ಪಡೆದ ಪುರಸಭೆ, ದಾಖಲೆಗಳನ್ನು ಹಾಜರುಪಡಿಸುವಂತೆ ಮತ್ತೆ ನೋಟಿಸ್ ಜಾರಿ ಮಾಡಿತ್ತು. ಈ ಬಗ್ಗೆ ದಾಖಲೆ ಹುಡುಕಾಟಕ್ಕಾಗಿ ಆರು ತಿಂಗಳ ಅವಧಿ ಕೇಳಿದ್ದ ಇಲಾಖೆ, ದಾಖಲೆ ಸಂಗ್ರಹಿಸಲು ವಿಫಲವಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬೀಡು ಬಿಟ್ಟಿದ್ದ ಕಾರ್ಮಿಕರನ್ನು ಟೆಂಟ್ ಸಹಿತ ಬೇರೆಡೆಗೆ ಸ್ಥಳಾಂತರಿಸಿದೆ.
ಅಧಿಕಾರಿ ನಿವಾಸ: ಇದೆ ಸರ್ವೇ ನಂಬರ್ ಮತ್ತೊಂದು ಬದಿಯಲ್ಲಿ ಸ್ಥಳೀಯ ರೈಲ್ವೆ ಇಲಾಖೆ ಉನ್ನತ ಅಧಿಕಾರಿಯೊಬ್ಬರ ನಿವಾಸವನ್ನು ಕಳೆದ ಮೂರು ವರ್ಷಗಳ ಹಿಂದೆ ನಿರ್ಮಿಸಿದ್ದು ಈ ಕಟ್ಟಡವನ್ನು ತೆರವುಗೊಳಿಸಬೇಕು ಹಾಗೂ ಈಗಾಗಲೇ ಈ ಪ್ರದೇಶದಲ್ಲಿ ಅಲ್ಪಪ್ರಮಾಣದಲ್ಲಿ ತಲೆ ಎತ್ತಿರುವ ನಿರ್ಮಾಣ ಹಂತದ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಆದರೆ ಈ ನಿಟ್ಟಿನಲ್ಲಿ ಪುರಸಭೆ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ.
ಸ್ಥಳೀಯರಿಗೆ ಸಂಕಷ್ಟ: ಹಿಂದೆ ವಸತಿ ಪ್ರದೇಶವಾಗಿದ್ದ ಪಟ್ಟಣದ ಹಲವು ಆಯಾಕಟ್ಟಿನ ಜಾಗವನ್ನು ರೈಲ್ವೆ ಇಲಾಖೆ ಒತ್ತುವರಿ ಮಾಡಿತ್ತು. ಪ್ರಶ್ನೆ ಮಾಡಿದರೆ ದೂರು ದಾಖಲಿಸುವ ಬೆದರಿಕೆ ಇರುವುದರಿಂದ ಹಲವರು ಯಾವುದೇ ಪರಿಹಾರವಿಲ್ಲದೆ ರೈಲ್ವೆ ಇಲಾಖೆಗೆ ಜಮೀನು ಬಿಟ್ಟು ಕೊಟ್ಟಿದ್ದರು. ಈ ಬಗ್ಗೆ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ದಾಖಲೆಗಳನ್ನು ಮರುಪರಿಶೀಲಿಸುವ ಮೂಲಕ ಸಂತ್ರಸ್ತರಿಗೆ ಭೂಮಿ ಹಸ್ತಾಂತರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಅಲ್ಲದೆ ರೈಲ್ವೆ ಇಲಾಖೆ ಹೊಸ ಕ್ರಮಗಳಿಂದ ಸ್ಥಳೀಯರು ಸಂಕಷ್ಟ ಎದುರಿಸುತ್ತಿದ್ದು, ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸುವಂತಿಲ್ಲ ಎಂಬ ಕಟ್ಟುಪಾಡಿನಿಂದ ಹೆಬ್ಬಸಾಲೆ, ಹೆನ್ನಲಿ ಸೇರಿದಂತೆ ಹಲವು ಗ್ರಾಮಗಳಿಗೆ ತೆರಳಲು ಜನರು ಪರದಾಡುವಂತಾಗಿದೆ.
ಸದ್ಯ ರೈಲ್ವೆ ಅಧಿಕಾರಿಗಳಿಗೆ ಗ್ರಾಮಸ್ಥರು ನೀಡಿದ ಮನವಿ ನಂತರ ಮಾನವೀಯತೆ ಆಧಾರದಲ್ಲಿ ರಸ್ತೆ ಸಂಚಾರಕ್ಕೆ ಅಸ್ಪದ ಕಲ್ಪಿಸಲಾಗಿದೆ. ಆದರೆ, ಮಂಗಳೂರಿನಿಂದ-ಹಾಸನದವರೆಗೆ ರೈಲ್ವೆ ವಿದ್ಯುದ್ದೀಕರಣಕ್ಕಾಗಿ ಪಟ್ಟಣದ ಹೆಬ್ಬಸಾಲೆ ಗ್ರಾಮ ಸಮೀಪ ನಿರ್ಮಾಣವಾಗುತ್ತಿರುವ ಪವರ್‌ಸ್ಟೇಷನ್ ಕಾಮಗಾರಿ ಸಂಪೂರ್ಣಗೊಂಡ ನಂತರ ಈ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಬಂದ್ ಮಾಡುವ ಉದ್ದೇಶ ಇಲಾಖೆಗೆ ಇದೆ ಎನ್ನಲಾಗುತ್ತಿದೆ. ಈ ರಸ್ತೆ ಬಂದ್ ಮಾಡಿದರೆ ಗ್ರಾಮಸ್ಥರು ಸಂಚರಿಸುವುದು ಎಲ್ಲಿ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ ರೈಲ್ವೆ ನಿಲ್ದಾಣದೊಳಗೆ ಪ್ರವೇಶಿಸಿದರೂ ಟಿಕೆಟ್ ಪಡೆಯಬೇಕು ಎಂಬ ನಿಯಮ ಬಹುತೇಕ ಸ್ಥಳೀಯರಿಗೆ ತಿಳಿಯದಾಗಿದ್ದು ರೈಲು ಪ್ರಯಾಣಿಕರನ್ನು ಬೀಳ್ಕೊಡಲು ಬರುವ ಜನರು ರೈಲ್ವೆ ಪೊಲೀಸರ ವರ್ತನೆಯಿಂದ ಮುಜುಗರ ಅನುಭವಿಸುವಂತಾಗಿದೆ. ರೈಲ್ವೆ ಅಧಿಕಾರಿ ನಿವಾಸ ಪುರಸಭೆಗೆ ಸೇರಿದ ಸ್ಥಳದಲ್ಲಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈಗಾಗಲೇ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ತೆರವುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ಸಿಮೆಂಟ್ ಮಂಜು ಶಾಸಕ ರೈಲ್ವೆ ಇಲಾಖೆ ಅಧಿಕಾರಿಗಳು ಇದುವರೆಗೆ ಜಮೀನಿಗೆ ಸಂಬಂಧಿಸಿದ ಯಾವುದೆ ದಾಖಲೆಗಳನ್ನೂ ನೀಡಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಭೂಮಿಯನ್ನು ವಶಕ್ಕೆ ಪಡೆದು ಉದ್ಯಾನ ನಿರ್ಮಾಣ ಮಾಡಲಾಗುವುದು. ಮಹೇಶ್ವರಪ್ಪ ಮುಖ್ಯಾಧಿಕಾರಿ, ಪುರಸಭೆ