ಹುಬ್ಬಳ್ಳಿ: ಆಧುನಿಕ ಜಗತ್ತು ಪ್ರತಿಯೊಂದರಲ್ಲೂ ಸ್ಪೀಡ್ ಆಗಿದೆ. ಪ್ರತಿಯೊಬ್ಬರು ಮನೆಯಿಂದ ಹೊರಗೆ ಬರುತ್ತಲೇ ಗಡಿಬಿಡಿಯಲ್ಲಿ ಇರುತ್ತಾರೆ. ಇಂಥದರಲ್ಲಿ ಎಲ್ಲಿಯಾದರೂ ಎರಡು ನಿಮಿಷ ಅಡೆತಡೆ ಉಂಟಾದರೆ ಪರದಾಡುತ್ತಾರೆ.
ಆದರೆ, ಹುಬ್ಬಳ್ಳಿ- ಧಾರವಾಡ ಮಧ್ಯದ ರಾಯಾಪುರ ಕೈಗಾರಿಕಾ ವಸಾಹತು ಬಳಿ ಇರುವ ರೈಲ್ವೆ ಗೇಟ್ ನಿತ್ಯ ಹತ್ತಾರು ಬಾರಿ ವಾಹನಗಳನ್ನು ತಡೆದು ನಿಲ್ಲಿಸುತ್ತಿದೆ. ರಾಯಾಪುರ ರೈಲ್ವೆ ಗೇಟ್ ಹಾಕಿದ ಕೂಡಲೇ 15ರಿಂದ 20 ನಿಮಿಷ ಓಪನ್ ಆಗುವವರೆಗೂ ಕಾಯಬೇಕಾಗುತ್ತದೆ. ಇದರಿಂದ ಅರ್ಜಂಟ್ ಕೆಲಸದ ಮೇಲೆ ಹೋಗುವವರಿಗೆ ಭಾರಿ ತೊಂದರೆಯಾಗುತ್ತಿದೆ.
ಅವಳಿನಗರ ಮಧ್ಯದ ಅತ್ಯಂತ ಜನ, ವಾಹನ ದಟ್ಟಣೆಯ ಈ ಪ್ರದೇಶದಲ್ಲಿ ನಿತ್ಯ ನೂರಕ್ಕೂ ಹೆಚ್ಚು ರೈಲುಗಳು ಓಡಾಡುತ್ತವೆ. ಪ್ರತಿ ಬಾರಿ ರೈಲು ಬಂದಾಗ 20 ನಿಮಿಷ ಗೇಟ್ ಬಂದ್ ಮಾಡಲಾಗುತ್ತದೆ. ಇದು ಸಾರ್ವಜನಿಕರ ಸಹನೆ ಪರೀಕ್ಷೆ ಮಾಡಿದಂತಾಗುತ್ತಿದೆ.
ಇದೇ ಮಾರ್ಗದಲ್ಲಿ ಧಾರವಾಡ ಆರ್ಟಿಒ ವಾಹನ ಚಾಲನಾ ಪರೀೆ ಮೈದಾನ ಇದೆ. ಕೈಗಾರಿಕೆ ವಸಾಹತು ಇರುವುದರಿಂದ ಸಾವಿರಾರು ವಾಹನಗಳು ಓಡಾಡುತ್ತವೆ.
ರಾಯಾಪುರ ಅಕ್ಕಪಕ್ಕದ ಹಳ್ಳಿಗಳಲ್ಲಿ ಎಲ್ಲ ಕಡೆ ರೈಲ್ವೆ ಸೇತುವೆ ನಿರ್ಮಾಣ ಆಗಿವೆ. ಇಲ್ಲೇಕೆ ಇಲ್ಲ ಎಂಬುದು ಸ್ಥಳಿಯರ ಪ್ರಶ್ನೆ. ಈ ಬಗ್ಗೆ ಕೇಂದ್ರ ಸಚಿವರು, ಸ್ಥಳಿಯ ಶಾಸಕರಿಗೆ ಹಲವು ಬಾರಿ ಉದ್ಯಮಿಗಳು ಮನವಿ ಮಾಡಿದ್ದಾರೆ. ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.