ಜಿಲ್ಲೆ

ನೈಋತ್ಯ ರೈಲ್ವೆಯ 8 ರೈಲು ನಿಲ್ದಾಣಗಳ ಅಭಿವೃದ್ಧಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 508 ರೈಲು ನಿಲ್ದಾಣಗಳ ಅಭಿವೃದ್ಧಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಆ. 6ರಂದು ಶಿಲಾನ್ಯಾಸ ಮಾಡಲಿದ್ದಾರೆ. ಇವುಗಳಲ್ಲಿ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದ 6 ಹಾಗೂ ಮೈಸೂರು ವಿಭಾಗದ 2 ನಿಲ್ದಾಣಗಳೂ ಸೇರಿವೆ.

ಹುಬ್ಬಳ್ಳಿ ವಿಭಾಗದ ಅಳ್ನಾವರ (17.2 ಕೋಟಿ ರೂ.), ಘಟಪ್ರಭಾ ( 18.02ಕೋಟಿ ರೂ.), ಗೋಕಾಕ ರೋಡ ( 17ಕೋಟಿ ರೂ.), ಗದಗ (23.2 ಕೋಟಿ ರೂ.), ಕೊಪ್ಪಳ (21.1 ಕೋಟಿ ರೂ.), ಬಳ್ಳಾರಿ (16.7 ಕೋಟಿ ರೂ.), ಮೈಸೂರು ವಿಭಾಗದ ಅರಸಿಕೆರೆ ( 34.1ಕೋಟಿ ರೂ.), ಹರಿಹರ (25.2 ಕೋಟಿ ರೂ.) ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುವುದು.

ಇದೇ ಆರ್ಥಿಕ ವರ್ಷದ ಬಜೆಟ್​ನಲ್ಲಿ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ ದೇಶದಾದ್ಯಂತ 1,275 ನಿಲ್ದಾಣಗಳನ್ನು ​ ಅಭಿವೃದ್ಧಿಗೊಳಿಸಲಾಗುವುದು ಎಂದು ಘೋಷಿಸಲಾಗಿತ್ತು, ಈ ಯೋಜನೆಯಡಿ ಕರ್ನಾಟಕದಲ್ಲಿ 55 ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲು ಯೋಜಿಸಲಾಗಿದೆ.

ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ, ರೈಲು ನಿಲ್ದಾಣದ ನಿರಂತರ ಅಭಿವೃದ್ಧಿ ಪ್ರಾರಂಭಿಸಲಾಗುತ್ತದೆ. ನಿಲ್ದಾಣದ ಪ್ರವೇಶ ದ್ವಾರ, ಸಂಚಾರ ಪ್ರದೇಶ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಶೌಚಗೃಹ, ದಿವ್ಯಾಂಗ ಪ್ರಯಾಣಿಕರಿಗೆ ಅನುಕೂಲವಾಗುವ ಲಿಫ್ಟ್ ಮತ್ತು ಎಸ್ಕಲೇಟರ್, ನಿಲ್ದಾಣದ ಸ್ವಚ್ಛತೆ, ಉಚಿತ ವೈಫೈ, ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ’ಒಂದು ನಿಲ್ದಾಣ ಒಂದು ಉತ್ಪನ್ನ’ ಮಳಿಗೆ ಮೂಲಕ ಪ್ರಯಾಣಿಕರಿಗೆ ತಲುಪಿಸುವ ವ್ಯವಸ್ಥೆ, ಎಕ್ಸಿಕ್ಯೂಟಿವ್ ಲಾಂಜ್, ರಿಟೈಲ್ ಮಳಿಗೆಗಳಿಗೆ ಸ್ಥಳ, ನಿಲ್ದಾಣದ ವಿನ್ಯಾಸ ಸೇರಿದಂತೆ ಅನೇಕ ಸೌಕರ್ಯಗಳನ್ನು ಅಳವಡಿಸಲಾಗುವುದು.

ಈ ಯೋಜನೆಯು ನಿಲ್ದಾಣದ ಕಟ್ಟಡವನ್ನು ಆಧುನಿಕ ವಾಸ್ತುವಿನ್ಯಾಸದೊಂದಿಗೆ ಸುಧಾರಣೆ, ನಿಲ್ದಾಣದ ಎರಡೂ ಬದಿಗಳನ್ನು ನಗರದೊಂದಿಗೆ ಸಂರ್ಪಸುವ ವ್ಯವಸ್ಥೆ, ಸುಸ್ಥಿರ ಮತ್ತು ಪರಿಸರಸ್ನೇಹಿ ಅಭಿವೃದ್ಧಿ, ‘ರೂಫ್ ಪ್ಲಾಜಾಗಳು’ ಮತ್ತು ನಿಲ್ದಾಣಗಳನ್ನು ನಗರ ಕೇಂದ್ರಗಳನ್ನಾಗಿ (ಸಿಟಿ ಸೆಂಟರ್) ರೂಪಿಸುವ ಗುರಿ ಹೊಂದಿದೆ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.