ರಾಯಚೂರು: ರೈತರ ಆದಾಯ ದ್ವಿಗುಣಗೊಳ್ಳಲು ಕೃಷಿಯಲ್ಲಿ ಯಾಂತ್ರೀಕರಣ ಸಹಕಾರಿಯಾಗಿದ್ದು, ಆಧುನಿಕ ಕೃಷಿಯನ್ನು ಅಳವಡಿಸಿಕೊಂಡರೆ ಉತ್ತಮ ಇಳುವರಿ ಪಡೆಯಬಹುದು ಎಂದು ಕೃಷಿ ವಿಜ್ಞಾನ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.
ಸ್ಥಳೀಯ ಕೃಷಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕೃಷಿ ತಂತ್ರಜ್ಞಾನ ಮತ್ತು ಆಧುನಿಕ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಮೇಳ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ವಿಜ್ಞಾನಿಗಳು ವಿವಿಧ ತಂತ್ರಜ್ಞಾನ ಮತ್ತು ಯಂತ್ರೋಪಕರಣ ಅಭಿವೃದ್ಧಿ ಪಡಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸುತ್ತಿದ್ದಾರೆ. ಮಿಶ್ರ ಬೆಳೆಯಿಂದ ಸಹ ಅಧಿಕ ಲಾಭ ಪಡೆಯಬಹುದು. ಕೆಲವರು ಮನೆಯ ಮಹಡಿ ಮೇಲೆ ತೋಟಗಾರಿಕೆ ಮಾಡುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ ಮಾತನಾಡಿ, ಈ ಭಾಗದಲ್ಲಿ ಶೇ.70 ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಅವರಿಗೆ ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಯಾಂತ್ರೀಕರಣದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಮೇಳ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.
ನವೋದಯ ತಾಂತ್ರಿಕ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಂ.ಸತೀಶ ರೆಡ್ಡಿ ಕೃಷಿಯಲ್ಲಿ ನೀರಿನ ಮಹತ್ವ, ನೀರಿನ ಸದ್ಭಳಕೆ ಮತ್ತು ಮರುಪೂರಣ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ವಿವಿ ಕುಲಸಚಿವ ಡಾ.ಎಂ.ವೀರನಗೌಡ, ಕಾಲೇಜು ಡೀನ್ ಡಾ.ಎಂ.ನೇಮಿಚಂದ್ರಪ್ಪ, ಪ್ರಾಧ್ಯಾಪಕರಾದ ಡಾ.ಉದಯಕುಮಾರ ನಿಡೋಣಿ, ಡಾ.ಕೆ.ವಿ.ಪ್ರಕಾಶ, ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಕೊಟ್ರೇಶಪ್ಪ ಕೋರಿ, ಸುನೀಲಕುಮಾರ ವರ್ಮಾ ಇತರರಿದ್ದರು.